HomeLatest Newsಸೇವಾನಿರತ ನೌಕರರ ಮೇಲೆ ಹಲ್ಲೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಸೇವಾನಿರತ ನೌಕರರ ಮೇಲೆ ಹಲ್ಲೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಶಿವಮೊಗ್ಗ: ಸೇವಾನಿರತ ಸರ್ಕಾರಿ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರು ಯಾವುದೇ ಆತಂಕಗಳಿಲ್ಲದೇ ನಿರ್ಭೀತಿಯಿಂದ ಪ್ರಮಾಣಿಕವಾಗಿ ಜನಸಾಮಾನ್ಯರ ಸೇವೆಗೆ ಸಮರ್ಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಹೇಳಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರಿ ನೌಕರರ ಕುಂದು-ಕೊರತೆ, ಸಮಸ್ಯೆ, ಸೇವಾಸೌಲಭ್ಯಗಳ ತ್ವರಿತ ಸ್ಪಂದನೆಗಾಗಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ನೌಕರರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಯಾವುದೇ ಅಭದ್ರತೆ ಕಾಡದಂತೆ ನೋಡಿಕೊಳ್ಳಬೇಕಾದುದು ಹಾಗೂ ವ್ಯವಸ್ಥೆಗೆ ಪೂರಕವಾಗಿ ಸಹಕರಿಸಬೇಕಾದುದು ನಾಗರೀಕರೆಲ್ಲರ ಕರ್ತವ್ಯವಾಗಿದೆ. ಸಾರ್ವಜನಿಕ ಜೀವನದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಸೂಕ್ತ ರಕ್ಷಣೆ ಸಿಗಬೇಕು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನೌಕರರ ಮೇಲೆ ಸಲ್ಲದ ಕಾರಣಕ್ಕೆ ಹಲ್ಲೆಗೆ ಮುಂದಾಗುವುದು, ಅನುಚಿತವಾಗಿ ವರ್ತಿಸುವುದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ದಂಡನೆಗೆ ಗುರುಪಡಿಸಲಾಗುವುದು ಎಂದವರು ನುಡಿದರು.        

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚಿನ ದಿನಗಳಲ್ಲಿ ಆರ್.ಟಿ.ಐ. ಅರ್ಜಿಗಳನ್ನು ಸಲ್ಲಿಸಿ, ಅಧಿಕಾರಿಗಳಿಗೆ ಇನ್ನಿಲ್ಲದಂತೆ ಕಾಡುವುದು, ಬೇಡಿಕೆ ಸಲ್ಲಿಸುವುದು, ಸೇವಾ ಕ್ಷೇತ್ರದಲ್ಲಿ ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಪತ್ರಿಕೆಗಳಲ್ಲಿ ಆಧಾರರಹಿತ ಆರೋಪ ಮಾಡುವುದಲ್ಲದೇ ಅಸಂವಿಧಾನಿಕ ಪದಗಳ ಬಳಕೆ ಮಾಡುತ್ತಿರುವುದನ್ನೂ ಸಹ ಗಂಭೀರವಾಗಿ ಪರಿಗಣಿಸಲಾಗುವುದು. ಅಂತಹ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದವರು ನುಡಿದರು.

ಜಿಲ್ಲೆ, ನಗರ ಮತ್ತು ಪಟ್ಪಣ ಪ್ರದೇಶಗಳಲ್ಲಿ ನೌಕರರ ಬೇಡಿಕೆಗನುಗುಣವಾಗಿ ವಸತಿ ಗೃಹಗಳು ದೊರೆಯುತ್ತಿಲ್ಲ. ಅಲ್ಲದೇ ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಅನೇಕ ವಸತಿ ಗೃಹಗಳು ದುರಸ್ತಿ ಕಾಣದಿರುವುದನ್ನು ಕೂಡ ಗಮನಿಸಲಾಗಿದೆ. ಲಭ್ಯವಿರುವ ವಸತಿಗೃಹಗಳ ಹಂಚಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಿದ ಅವರು, ವಸತಿಗೃಹಗಳ ದುರಸ್ತಿ ಬಗ್ಗೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು ಎಂದರು.

ರಾಜ್ಯ ಸರ್ಕಾರಿ ನೌಕರರ ಆರೋಗ್ಯ ಸುರಕ್ಷತೆಗಾಗಿ ಜಾರಿಯಾಗಿರುವ ನಗದು ರಹಿತ ಆರೋಗ್ಯ ಸೇವೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಸಮರ್ಪಕ ಅನುಷ್ಟಾನದಿಂದಾಗಿ ಸಾವಿರಾರು ಕುಟುಂಬಗಳು ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಡಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ 16000 ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ನಗದು ರಹಿತ ಆರೋಗ್ಯ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ. ಸರ್ಕಾರಿ ನೌಕರರಿಗೆ ದುಬಾರಿ ವೆಚ್ಚದ ಮಾರಣಾಂತಿಕ ಕಾಯಿಲೆಗಳು ಹಾಗೂ ಶಸ್ತ್ರ ಚಿಕಿತ್ಸೆ ಸೇರಿದಂತೆ ಬಹುತೇಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ದೊರೆಯಲಿದೆ ಎಂದವರು ನುಡಿದರು.

ಈ ಯೋಜನೆಯಡಿ ಜಿಲ್ಲಾ ಕೇಂದ್ರಗಳಲ್ಲಿನ ಅನೇಕ ಆಸ್ಪತ್ರೆಗಳು ಆರೋಗ್ಯ ಸೇವೆ ಒದಗಿಸಲು ಈವರೆಗೆ ನೋಂದಣಿಯಾಗದಿರುವುದು ಕಂಡುಬಂದಿದೆ.  ನಗರದ ಪ್ರತಿಷ್ಠಿತ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ಯೋಜನಾ ವ್ಯಾಪ್ತಿಗೊಳಪಟ್ಟು ಒಪ್ಪಂದ ಮಾಡಿಕೊಂಡು ನೌಕರರಿಗೆ ಅವರ ಕುಟುಂಬದ ಅವಲಂಬಿತರಿಗೆ ಆರೋಗ್ಯ ಸೇವೆ ಒದಗಿಸಲು ಮುಂದಾಗುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌ ಅವರು ಮಾತನಾಡಿ, ಕಾಲಕಾಲಕ್ಕೆ ಬದಲಾಗುತ್ತಿರುವ ಆಡಳಿತ ವ್ಯವಸ್ಥೆಗೆ ಪೂರಕವಾಗಿ ನೌಕರರೂ ಕೂಡ ಹೊಂದಿಕೊಳ್ಳಬೇಕಾಗಿದೆ. ಸೇವಾವಧಿಯಲ್ಲಿ ನೌಕರರಿಗೆ ಹೊಸದಾಗಿ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳು, ಕಾಯ್ದೆಗಳ ಪೂರ್ಣ ಜ್ಞಾನ ಇರಬೇಕು. ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ನೌಕರರಿಗೂ ಅರಿವು ಇರಬೇಕಾದುದು ಅಗತ್ಯ. ಈ ದಿಸೆಯಲ್ಲಿ ವಿವಿಧ ಯೋಜನೆಗಳು, ಕಾಯ್ದೆಗಳ ಅನುಷ್ಠಾನದ ಕುರಿತು ತರಬೇತಿ ಕಾರ್ಯಾಗಾರಗಳನ್ನು ಜಿಲ್ಲಾಡಳಿತ ಮತ್ತು ಆಡಳಿತ ಸುಧಾರಣಾ ಇಲಾಖೆ, ಜಿಲ್ಲಾ ತರಬೇತಿ ಸಂಸ್ಥೆಗಳ ಮೂಲಕ ಆಯೋಜಿಸಬೇಕು ಎಂದವರು ನುಡಿದರು. ಜಿಲ್ಲಾಧಿಕಾರಿಗಳು ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು ಸೂಚಿಸಲಾಗುವುದು ಎಂದರು.

ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ವರ್ಗಾವಣೆಗೊಂಡು ಜಿಲ್ಲೆಗೆ ಬಂದಲ್ಲಿ ಅವರ ಮಕ್ಕಳ ಶಿಕ್ಷಣ ಮುಂದುವರೆಸಲು ಶಾಲಾ ದಾಖಲಾತಿಗಾಗಿ ತೆರಳಿದಾಗ, ಪ್ರವೇಶ ನಿರಾಕರಿಸುವುದು ಸಾಮಾನ್ಯ ಸಂಗತಿಯಾಗಿದೆ. ಶಾಲಾ ಆಡಳಿತ ಮಂಡಳಿಯವರಿಗೆ ದಾಖಲಾತಿಗಾಗಿ ಸೂಕ್ತ ಮಾರ್ಗದರ್ಶನ ನೀಡುವಂತೆ ಆರ್.ಮೋಹನ್‌ಕುಮಾರ್‌ ಅವರು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸುಜಾತಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ, ಆರ್.ಪಾಪಣ್ಣ, ಡಾ|| ಹಿರೇಮಠ್‌, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ, ಉಮೇಶ್‌ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು, ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರುಗಳು ಹಾಗೂ ನಗರದ ಖಾಸಗಿ ಆಸ್ಪತ್ರೆಗಳ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular