ಮುಂಬೈ: ಸಿನಿಮಾ ಎಂದರೆ ಕೇವಲ ನಟ-ನಟಿಯರು ಮಾತ್ರ ಎಂಬ ಕಾಲವೊಂದಿತ್ತು. ಆದರೆ ತೆರೆಯ ಹಿಂದಿನ ಬರಹಗಾರನಿಗೂ ಸ್ಟಾರ್ ಪಟ್ಟ ತಂದುಕೊಟ್ಟವರು ಜಾವೇದ್ ಅಖ್ತರ್. ಇಂದು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ, ಪದ್ಮ ಪ್ರಶಸ್ತಿ ಪುರಸ್ಕೃತ ಈ ಬರಹಗಾರನ ಯಶಸ್ಸಿನ ಹಿಂದೆ ಹಸಿವು, ಅವಮಾನ ಮತ್ತು ಕಣ್ಣೀರಿನ ದೊಡ್ಡ ಇತಿಹಾಸವೇ ಇದೆ.
ಗುರು ದತ್ ನೋಡಲು ಬಂದು ನಿರಾಶ್ರಿತರಾದರು: 1945ರಲ್ಲಿ ಜನಿಸಿದ ಜಾವೇದ್ ಅಖ್ತರ್, 19ನೇ ವಯಸ್ಸಿನಲ್ಲಿ ಮುಂಬೈಗೆ ಬಂದಿಳಿದಾಗ ಅವರ ಕಣ್ಣಲ್ಲಿ ಒಂದೇ ಕನಸಿತ್ತು. ಅದು ಖ್ಯಾತ ನಿರ್ದೇಶಕ ಗುರು ದತ್ ಅವರ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುವುದು. ಆದರೆ ವಿಧಿಯಾಟ ಬೇರೆಯೇ ಇತ್ತು. ಜಾವೇದ್ ಮುಂಬೈಗೆ ಬಂದ ಕೇವಲ ಒಂದು ವಾರದಲ್ಲಿ ಗುರು ದತ್ ನಿಧನರಾದರು. ಆಸರೆಯಿಲ್ಲದೆ ಕಂಗೆಟ್ಟ ಜಾವೇದ್ಗೆ ಅರಮನೆಯಂತಹ ಮುಂಬೈ ನಗರ ಅಕ್ಷರಶಃ ನರಕವಾಗಿ ಕಂಡಿತು.
ಹಸಿವಿನ ಆ ಭೀಕರ ದಿನಗಳು: ಮುಂಬೈನ ಬೀದಿಗಳಲ್ಲಿ ಅಲೆದಾಡಿದ ಜಾವೇದ್ ಅವರಿಗೆ ತಲೆ ಮೇಲೆ ಸೂರಿರಲಿಲ್ಲ. ರೈಲ್ವೆ ಸ್ಟೇಷನ್, ಪಾರ್ಕ್, ಸ್ಟುಡಿಯೋಗಳ ಆವರಣ ಹಾಗೂ ಬೆಂಚ್ಗಳ ಮೇಲೆ ಮಲಗಿ ದಿನ ಕಳೆದಿದ್ದಾರೆ. ಬಸ್ ಚಾರ್ಜ್ ನೀಡಲು ಹಣವಿಲ್ಲದೆ ದಾದರ್ನಿಂದ ಬಾಂದ್ರಾ ವರೆಗೆ ಕಿಲೋಮೀಟರ್ಗಟ್ಟಲೆ ನಡೆಯುತ್ತಿದ್ದರು. “ಸತತ ಎರಡು-ಮೂರು ದಿನಗಳ ಕಾಲ ಹಸಿವಿನಿಂದ ಇದ್ದಾಗ ಮನುಷ್ಯನಿಗೂ ನಾಯಿಗೂ ವ್ಯತ್ಯಾಸವೇ ತಿಳಿಯುವುದಿಲ್ಲ. ಹಸಿವು ಮನುಷ್ಯನ ಗೌರವ ಮತ್ತು ಸ್ವಾಭಿಮಾನವನ್ನು ಕಿತ್ತುಕೊಳ್ಳುತ್ತದೆ” ಎಂದು ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಧರಿಸಲು ಸರಿಯಾದ ಬಟ್ಟೆಯೂ ಇಲ್ಲದೆ ಅಲೆದಾಡಿದ ದಿನಗಳು ಅವರನ್ನ ಇಂದಿಗೂ ಕಾಡುತ್ತವೆಯಂತೆ.
ಹೆಸರಿಗಾಗಿ ಹಣವನ್ನು ತ್ಯಜಿಸಿದ ಛಲಗಾರ: ಕಮಲ್ ಅಮ್ರೋಹಿ ಅವರ ಬಳಿ ತಿಂಗಳಿಗೆ ಕೇವಲ 50 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾಗ, ಜಾವೇದ್ ಅವರಿಗೆ ದೊಡ್ಡ ಮೊತ್ತದ ಹಣದ ಆಮಿಷವೊಂದು ಬಂದಿತ್ತು. ಬೇರೊಬ್ಬ ಹೆಸರಾಂತ ಬರಹಗಾರನಿಗೆ ‘ಘೋಸ್ಟ್ ರೈಟರ್’ (ಅವನ ಹೆಸರಿನಲ್ಲಿ ಇವರು ಬರೆಯುವುದು) ಆಗಿ ಕೆಲಸ ಮಾಡಲು ಆಫರ್ ಸಿಕ್ಕಿತ್ತು. ಹಣದ ಅವಶ್ಯಕತೆ ಇದ್ದರೂ, “ನನಗೆ ಹಣಕ್ಕಿಂತ ನನ್ನ ಹೆಸರೇ ಮುಖ್ಯ” ಎಂದು ಆ ಆಫರ್ ತಿರಸ್ಕರಿಸುವ ಮೂಲಕ ತನ್ನ ವ್ಯಕ್ತಿತ್ವವನ್ನು ತೋರಿಸಿಕೊಟ್ಟರು.
ಸಲೀಂ-ಜಾವೇದ್ ಜೋಡಿಯ ಉದಯ: ‘ಸರಹದಿ ಲೂಟೇರಾ’ ಸಿನಿಮಾದ ಸೆಟ್ನಲ್ಲಿ ನಟನಾಗಿ ಬಂದಿದ್ದ ಸಲೀಂ ಖಾನ್ ಮತ್ತು ಸಂಭಾಷಣೆ ಬರೆಯಲು ಅವಕಾಶ ಪಡೆದ ಜಾವೇದ್ ಅಖ್ತರ್ ಭೇಟಿಯಾದರು. ಅಲ್ಲಿಂದ ಶುರುವಾಗಿದ್ದೇ ಭಾರತೀಯ ಚಿತ್ರರಂಗದ ಐತಿಹಾಸಿಕ ‘ಸಲೀಂ-ಜಾವೇದ್’ ಜೋಡಿ. ಆರಂಭದಲ್ಲಿ ತಾವು ಬರೆದ ಕಥೆಗಳಿಗೆ ಸರಿಯಾದ ಕ್ರೆಡಿಟ್ ಸಿಗದೆ ಸೈಡ್ಲೈನ್ ಆಗಿದ್ದ ಈ ಜೋಡಿ, ಹಠಕ್ಕೆ ಬಿದ್ದು ತಮ್ಮ ಹಕ್ಕಿಗಾಗಿ ಹೋರಾಡಿದರು.
ಪೋಸ್ಟರ್ ಮೇಲೆ ಹೆಸರು ಬರೆಸಿದ ಕಿಡಿ: ಅಮಿತಾಭ್ ಬಚ್ಚನ್ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟ ‘ಜಂಜೀರ್’ ಸಿನಿಮಾ ಬಿಡುಗಡೆಯಾದಾಗಲೂ ಪೋಸ್ಟರ್ಗಳಲ್ಲಿ ಬರಹಗಾರರ ಹೆಸರಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸಲೀಂ-ಜಾವೇದ್ ಜೋಡಿ, ಸ್ವತಃ ಒಬ್ಬ ಪೇಂಟರ್ನನ್ನು ಕರೆಸಿ ಪೋಸ್ಟರ್ಗಳ ಮೇಲೆ ದೊಡ್ಡದಾಗಿ ತಮ್ಮ ಹೆಸರನ್ನು ಬರೆಸಿದರು. ಆ ಮೂಲಕ ಬರಹಗಾರನಿಗೂ ಗೌರವ ಸಿಗಬೇಕು ಎಂದು ಸಾಬೀತುಪಡಿಸಿದರು. ಶೋಲೆ, ದೀವಾರ್, ತೃಶೂಲ್ನಂತಹ ಕಾಲಾತೀತ ಸಿನಿಮಾಗಳನ್ನು ನೀಡಿದ ಈ ಜೋಡಿ ಭಾರತೀಯ ಸಿನೆಮಾದ ದಿಕ್ಕನ್ನೇ ಬದಲಿಸಿತು.
ಕೇವಲ ₹100 ಸಂಬಳಕ್ಕೆ ಕೆಲಸ ಆರಂಭಿಸಿದ ಜಾವೇದ್ ಅಖ್ತರ್ ಅವರ ಬದುಕು, ಸಾಧನೆ ಮಾಡಬೇಕೆಂಬ ಛಲವಿದ್ದರೆ ಹಸಿವು ಮತ್ತು ಬಡತನ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.


