HomeKarnatakaಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ ರಾಜ್ಯಮಟ್ಟದ ಪ್ರಶ್ನೆಪತ್ರಿಕೆ

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ ರಾಜ್ಯಮಟ್ಟದ ಪ್ರಶ್ನೆಪತ್ರಿಕೆ

ಬೆಂಗಳೂರು-ಪದವಿ ಪೂರ್ವ ಹಂತದ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, 2027ರಲ್ಲಿ ನಡೆಯಲಿರುವ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ರಾಜ್ಯಮಟ್ಟದಲ್ಲಿ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈ ಸಂಬಂಧ ಸರ್ಕಾರ ನವೆಂಬರ್ 7ರಂದು ಆದೇಶ ಹೊರಡಿಸಿದ್ದು, ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB)ಗೆ ವಹಿಸಲಾಗಿದೆ. ಆದರೆ ಪರೀಕ್ಷೆಯನ್ನು KSEAB ನೇರವಾಗಿ ನಡೆಸುವುದಿಲ್ಲ. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ನೇತೃತ್ವದಲ್ಲಿಯೇ ಪರೀಕ್ಷೆಗಳು ನಡೆಯಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈವರೆಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಆಯಾ ಕಾಲೇಜುಗಳ ಹಂತದಲ್ಲೇ ಸಿದ್ಧಪಡಿಸಿ, ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿತ್ತು. ಇದರಿಂದ ಪ್ರಶ್ನೆಪತ್ರಿಕೆಗಳ ಗುಣಮಟ್ಟ, ಕಠಿಣತೆಯ ಮಟ್ಟ, ಪಠ್ಯಕ್ರಮದ ವ್ಯಾಪ್ತಿ ಹಾಗೂ ಮೌಲ್ಯಮಾಪನದ ಮಾನದಂಡಗಳಲ್ಲಿ ಕಾಲೇಜಿನಿಂದ ಕಾಲೇಜಿಗೆ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇತ್ತು. ಇದನ್ನು ತಪ್ಪಿಸಿ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಮಟ್ಟದ ಪರೀಕ್ಷೆ ಒದಗಿಸುವ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ.

ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಿಗೆ ಅನ್ವಯವಾಗುವಂತೆ ಏಕರೂಪದ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಪರೀಕ್ಷೆಯ ದಿನದಂದು ಗೌಪ್ಯತೆ ಕಾಪಾಡಿಕೊಂಡು ರಾಜ್ಯಮಟ್ಟದಲ್ಲಿ ಸಿದ್ಧಪಡಿಸಲಾದ ಪ್ರಶ್ನೆಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ಸಂಬಂಧಿಸಿದ ಕಾಲೇಜುಗಳಿಗೆ ಕಳುಹಿಸಲಾಗುತ್ತದೆ.

ಪ್ರಥಮ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮಾತ್ರ ಜಿಲ್ಲಾ ಮಟ್ಟದಲ್ಲಿ ನಿಗದಿಪಡಿಸಲಾದ ವೇಳಾಪಟ್ಟಿಯಂತೆ ನಡೆಸಲಾಗುತ್ತದೆ. ರಾಜ್ಯಮಟ್ಟದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದರೂ, ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಕಾಲೇಜು ಹಂತದಲ್ಲಿಯೇ ಪ್ರಾಂಶುಪಾಲರ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ. ಬಳಿಕ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಫಲಿತಾಂಶವನ್ನು ಪರಿಶೀಲಿಸಿ ಅನುಮೋದಿಸಿದ ನಂತರ ಪ್ರಕಟಿಸಲಾಗುತ್ತದೆ.

ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಾದರಿ ಪ್ರಶ್ನೆಪತ್ರಿಕೆಗಳು, ಪ್ರಶ್ನೆ ಕೋಠಿ ಹಾಗೂ ನೀಲಿನಕ್ಷೆ (Blue Print)ಯನ್ನು ಈಗಾಗಲೇ ಸಿದ್ಧಪಡಿಸಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದರ ಆಧಾರದ ಮೇಲೆ ಪರೀಕ್ಷೆ ನಡೆಯುವುದರಿಂದ ಪ್ರಶ್ನೆಗಳ ಸ್ವರೂಪ, ಅಂಕಗಳ ಹಂಚಿಕೆ ಹಾಗೂ ಪರೀಕ್ಷೆಯಲ್ಲಿ ಗಮನಹರಿಸಬೇಕಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಸ್ಪಷ್ಟತೆ ದೊರೆಯಲಿದೆ ಎಂದು ಸರ್ಕಾರ ತಿಳಿಸಿದೆ.

ಪರೀಕ್ಷಾ ಪಾವಿತ್ರ್ಯತೆ ಹಾಗೂ ಪಾರದರ್ಶಕತೆಯನ್ನು ಕಾಪಾಡಲು ಜಿಲ್ಲಾ ಉಪನಿರ್ದೇಶಕರ ಹಂತದಲ್ಲಿ ಅಂತರ್‌ಕಾಲೇಜು ಪರೀಕ್ಷಾ ಮೇಲ್ವಿಚಾರಕರು ಹಾಗೂ ಜಾಗೃತದಳವನ್ನು ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಪ್ರಾಯೋಗಿಕ ಹಾಗೂ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ನಿಗದಿತ ತಂತ್ರಾಂಶದಲ್ಲಿ ಕಾಲಮಿತಿಯೊಳಗೆ ನಮೂದಿಸುವುದು ಕಡ್ಡಾಯವಾಗಿದ್ದು, ವಿಳಂಬವಾದಲ್ಲಿ ಸಂಬಂಧಿಸಿದ ಉಪನಿರ್ದೇಶಕರು ಮತ್ತು ಪ್ರಾಂಶುಪಾಲರೇ ಹೊಣೆಗಾರರಾಗಿರುತ್ತಾರೆ.

“ಪದವಿ ಪೂರ್ವ ಹಂತದ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ನಾವು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದೇವೆ. ಈ ಕ್ರಮದಿಂದ ಪ್ರಥಮ ಪಿಯುಸಿ ಹಂತದಲ್ಲಿಯೇ ಶಿಕ್ಷಣದ ಗುಣಮಟ್ಟದ ಮೇಲೆ ಇಲಾಖೆಗೆ ಹೆಚ್ಚಿನ ನಿಗಾ ಇರಿಸಲು ಸಾಧ್ಯವಾಗಲಿದೆ. ಇದು ದ್ವಿತೀಯ ಪಿಯುಸಿ ಫಲಿತಾಂಶದ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ,” ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

“ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು, ಕಾಲೇಜು ಆಡಳಿತ ಮಂಡಳಿಗಳು ಹಾಗೂ ಪೋಷಕರು ಈ ಬದಲಾವಣೆಯನ್ನು ಗಮನಿಸಬೇಕು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ,” ಎಂದು ಅವರು ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪದವಿ ಪೂರ್ವ ಕಾಲೇಜುಗಳ ಜೊತೆಗೆ ರಾಜ್ಯ ಸರ್ಕಾರದ ಇತರೆ ಇಲಾಖೆಗಳ ಆಡಳಿತ ನಿಯಂತ್ರಣದಲ್ಲಿರುವ ಪದವಿ ಪೂರ್ವ ಕಾಲೇಜುಗಳಿಗೂ ಸಮಾನವಾಗಿ ಅನ್ವಯವಾಗಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular