ಬೆಂಗಳೂರು – ಶಿವಮೊಗ್ಗ ನಡುವಿನ ಇಂಡಿಗೋ ವಿಮಾನ ಸಂಚಾರ ಸ್ಥಗಿತಗೊಂಡ ಒಂದು ತಿಂಗಳ ಅವಧಿಯಲ್ಲಿ ಸ್ಪೈಸ್ ಜೆಟ್ ಶಿವಮೊಗ್ಗ ವಿಮಾನ ನಿಲ್ದಾಣದ ತನ್ನೆಲ್ಲ ಸೇವೆಗಳನ್ನು ನಾಲ್ಕು ತಿಂಗಳವರೆಗೆ ಅಮಾನತಿನಲ್ಲಿ ಇಟ್ಟಿದೆ.
ತಾಂತ್ರಿಕ ಮತ್ತು ಆಂತರಿಕ ಕಾರಣಗಳಿಂದ ಜೂನ್ 2ರಿಂದ ಸೆಪ್ಟಂಬರ್ 30ರವರೆಗೆ ಶಿವಮೊಗ್ಗದ ಸೇವೆಗಳನ್ನು ಅಮಾನತಿನಲ್ಲಿಡಲಾಗಿದೆ ಎಂದು ಸ್ಪೈಸ್ ಜೆಟ್ ಮಂಡಳಿ ಹೇಳಿದೆ. ಈ ನಿರ್ಧಾರದಿಂದ ಇನ್ನೂ ನಾಲ್ಕು ತಿಂಗಳ ಕಾಲ ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್ ನಡುವೆ ವಿಮಾನ ಸಂಚಾರ ಸೇವೆ ಲಭ್ಯ ಇರುವುದಿಲ್ಲ.
2024ರ ಅಕ್ಟೋಬರ್ 10 ರಿಂದ ಚೆನ್ನೈ –ಶಿವಮೊಗ್ಗ, ಶಿವಮೊಗ್ಗ-ಹೈದರಾಬಾದ್, ಹೈದರಾಬಾದ್ –ಶಿವಮೊಗ್ಗ ವಿಮಾನ ಸಂಚಾರ ಸೇವೆ ಒದಗಿಸಿತ್ತು. ಸರ್ಕಾರದಿಂದ ಈ ಮಾರ್ಗಗಳಿಗೆ ಉಡಾನ್ ಯೋಜನೆ ಸೌಲಭ್ಯ ಕೂಡ ನೀಡಿತ್ತು.
ಪ್ರಯಾಣಿಕರಿಂದ ಅತಿಹೆಚ್ಚು ಬೇಡಿಕೆ ಇದ್ದ ಶಿವಮೊಗ್ಗ –ಬೆಂಗಳೂರು ನಡುವಿನ ಸೇವೆಯನ್ನು ಇಂಡಿಗೋ ಸಂಸ್ಥೆ ಏಪ್ರಿಲ್ 30ರಂದು ಸ್ಥಗಿತಗೊಳಿಸಿತು. ಇದರಿಂದಾಗಿ ಶಿವಮೊಗ್ಗದಲ್ಲಿ ಇಂಡಿಗೋ ಮತ್ತು ಸ್ಪೈಸ್ ಜೆಟ್ ಸಂಸ್ಥೆಯ ಸೇವೆ ಸ್ಥಗಿತವಾಗಿದೆ.
ಸ್ಟಾರ್ ಏರ್ ಸಂಸ್ಥೆ ಮಾತ್ರ ಹೈದರಾಬಾದ್ –ಶಿವಮೊಗ್ಗ, ಶಿವಮೊಗ್ಗ- ತಿರುಪತಿ, ಶಿವಮೊಗ್ಗ – ಗೋವಾ –ಶಿವಮೊಗ್ಗ, ಶಿವಮೊಗ್ಗ -ಹೈದರಾಬಾದ್ ನಡುವೆ ವಿಮಾನ ಸಂಚಾರ ಸೇವೆ ನೀಡಿದೆ.

