ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯೊಂದು ಬಂದಿದೆ. ಭಾರತೀಯ ಕ್ಲಾಸಿಕ್ ಬೈಕ್ ಗಳ, ಅದರಲ್ಲೂ ‘ಯೆಜ್ಡಿ’ ಬೈಕ್ ಗಳ ಅಪ್ಪಟ ಅಭಿಮಾನಿಯಾಗಿರುವ ಡಿಸಿಎಂ ಅವರಿಗೆ ಜನ್ಮದಿನದ ಪ್ರಯುಕ್ತ ಹೊಚ್ಚಹೊಸ ‘ಷಾಡೋ ಬ್ಲಾಕ್’ ಬಣ್ಣದ ಯೆಜ್ಡಿ ರೋಡ್‌ಸ್ಟರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ.
ಡಿ.ಕೆ. ಶಿವಕುಮಾರ್ ಅವರಿಗೆ ಮೊದಲಿನಿಂದಲೂ ಯೆಜ್ಡಿ ಬೈಕ್‌ಗಳೆಂದರೆ ಎಲ್ಲಿಲ್ಲದ ಕ್ರೇಜ್. ಅದೇ ಬೈಕ್ ಅನ್ನು ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ ಅವರು, ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡರು. ಯುವಕನಾಗಿದ್ದಾಗ ಇದೇ ಯೆಜ್ಡಿ ಬೈಕ್‌ನಲ್ಲಿ ತಾವು ಮಾಡಿದ ಲಾಂಗ್ ರೈಡ್‌ಗಳನ್ನು ಹಾಗೂ ಆ ದಿನಗಳ ಮಧುರ ನೆನಪುಗಳನ್ನು ಅವರು ಮೆಲುಕು ಹಾಕಿದರು.
ಸಂತಸ ಹಂಚಿಕೊಂಡ ಡಿ.ಕೆ. ಶಿವಕುಮಾರ್
ಬೆಂಗಳೂರಿನ ಸಫೀನಾ ಮೋಟಾರ್ಸ್‌ನ ಮುಖ್ಯಸ್ಥ ಫಿರೋಜ್ ಸತ್ತಾರ್ ಸೇಠ್ ಅವರು ಡಿಸಿಎಂ ಸ್ವಗೃಹದಲ್ಲಿ ಈ ಬೈಕ್ ಅನ್ನು ಡಿ.ಕೆ. ಶಿವಕುಮಾರ್ ಅವರಿಗೆ ಜನ್ಮದಿನದ ಉಡುಗೊರೆಯಾಗಿ ಹಸ್ತಾಂತರಿಸಿದರು.
ತಮ್ಮ ನೆಚ್ಚಿನ ಬೈಕ್ ಅನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ಪಡೆದು ಮಾತನಾಡಿದ ಉಪಮುಖ್ಯಮಂತ್ರಿಗಳು, “ನನ್ನ ವಾಹನಗಳ ಕಲೆಕ್ಷನ್‌ಗೆ ಹೊಸ ಯೆಜ್ಡಿ ರೋಡ್‌ಸ್ಟರ್ ಸೇರ್ಪಡೆಯಾಗುತ್ತಿರುವುದು ನನಗೆ ಬಹಳ ಖುಷಿ ತಂದಿದೆ. ಶೀಘ್ರದಲ್ಲೇ ಈ ಬೈಕ್‌ನಲ್ಲಿ ರೈಡ್ ಹೋಗಲು ನಾನು ಕಾಯುತ್ತಿದ್ದೇನೆ. ಪ್ರತಿಯೊಬ್ಬ ನಿಜವಾದ ಬೈಕ್ ರೈಡರ್‌ನ ಆಕಾಂಕ್ಷೆ ಮತ್ತು ಸಾಧನೆಯನ್ನು ಪ್ರತಿನಿಧಿಸುವ ಇಂತಹ ಬ್ರ್ಯಾಂಡ್ ಅನ್ನು ನೋಡುವುದೇ ಒಂದು ಅದ್ಭುತ ಅನುಭವ,” ಎಂದು ತಮ್ಮ ಸಂತಸ ಹಂಚಿಕೊಂಡರು.

