ಎಲ್ಪಿಜಿ ಸಿಲಿಂಡರ್ ಕೊರತೆಯ ನಡುವೆಯೇ ಬೆಂಗಳೂರು ನಗರಕ್ಕೆ ಸಂತಸದ ಸುದ್ದಿಯೊಂದಿದೆ. ಕರ್ನಾಟಕದಲ್ಲಿ ಮುಂದಿನ 5 ವರ್ಷಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್ಲೈನ್ ಮೂಲಕ ಅಡುಗೆ ಅನಿಲ (PNG) ಪೂರೈಸಲು ಸರ್ಕಾರ ಮುಂದಾಗಿದೆ.
ಬೆಂಗಳೂರು ನಗರದಲ್ಲಿ ಕೆಲವೇ ದಿನಗಳಲ್ಲಿ 25,000 ಮನೆಗಳಿಗೆ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಸಲಾಗುತ್ತದೆ. ಆದರೆ ಈ ಯೋಜನೆಗೆ ರಸ್ತೆಯನ್ನು ಅಗೆಯ ಬೇಕಾದ ಕಾರಣ ಜನರು ಅದರಿಂದ ಆಗುವ ತೊಂದರೆಯನ್ನು ಅನುಭವಿಸಬೇಕಿದೆ.
ಬೆಂಗಳೂರು ನಗರದಲ್ಲಿ 25,000 ಮನೆ ಮತ್ತು 69 ವಾಣಿಜ್ಯ ಸಂಕೀರ್ಣಗಳಿಗೆ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಮಾಡುವ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಮಾರ್ಚ್ 17ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಈ ಕುರಿತು ಜಿಬಿಎಗೆ ಪತ್ರ ಬರೆದಿದ್ದಾರೆ.
ಜಿಬಿಎ ವ್ಯಾಪ್ತಿಯ 4 ನಗರ ಪಾಲಿಕೆಗಳು ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಮಾಡುವ ಭಾರತೀಯ ಅನಿಲ ಪ್ರಾಧಿಕಾರ (ಗೈಲ್) ಕಾಮಗಾರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.
ಗೈಲ್ ರಸ್ತೆ ಅಗೆಯುವ ಮುನ್ನ 50 ಲಕ್ಷ ಮುಂಗಡ ಹಣವನ್ನು ಡೆಪಾಸಿಟ್ ಮಾಡಿಕೊಂಡು ಕಾಮಗಾರಿಗೆ ಅನುಮತಿ ನೀಡಿ ಎಂದು ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟಪಡಿಸಿದ್ದಾರೆ. ಅಗತ್ಯ ಮತ್ತು ತುರ್ತಾಗಿ ಈ ಕಾಮಗಾರಿಗಳಿಗೆ ಅನುಮತಿ ನೀಡಬೇಕು ಎಂದು ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.
2025ರ ಅಂತ್ಯದಲ್ಲಿ ಜಿಬಿಎ ಭಾರತೀಯ ಅನಿಲ ಪ್ರಾಧಿಕಾರ (ಗೈಲ್) ಕಾಮಗಾರಿಗೆ ತಡೆ ಹಾಕಿತ್ತು. ನಗರದ ಯಾವುದೇ ರಸ್ತೆಯನ್ನು ಅಗೆಯಬಾರದು ಎಂದು ಸೂಚನೆ ನೀಡಿತ್ತು. ಆದ್ದರಿಂದ ಕಾಮಗಾರಿ ವಿಳಂಬವಾಗಿತ್ತು.
ಈಗ ಸರ್ಕಾರವೇ ಕಾಮಗಾರಿಗೆ ಅನುಮತಿ ನೀಡಿರುವ ಕಾರಣ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಕೆಲಸ ಚುರುಕಾಗಲಿದೆ. ಜಿಬಿಎ ವ್ಯಾಪ್ತಿಯಲ್ಲಿ 5 ನಗರ ಪಾಲಿಕೆ ಇದೆ. ಇದರಲ್ಲಿ ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ ಯಾವುದೇ ಕಾಮಗಾರಿಗೆ ಸರ್ಕಾರ ಅನುಮತಿ ನೀಡಿಲ್ಲ.
ಬೆಂಗಳೂರು ಪೂರ್ವ, ಪಶ್ಚಿಮ, ಉತ್ತ ಮತ್ತು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೈಲ್ ಕಾಮಗಾರಿಗಳಿಗೆ ಅನುಮತಿ ಕೊಡಲಾಗಿದೆ. ಗೈಲ್ ಪ್ರಕಾರ ನಗರದ ಹೊರವಲಯದಲ್ಲಿ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಭಾರೀ ಬೇಡಿಕೆ ಇದ್ದು, ಅಲ್ಲಿಗೆ ಮೊದಲು ಪೂರೈಕೆ ಮಾಡಲಾಗುತ್ತದೆ.
25,000 ಮನೆ, ರೆಸ್ಟೋರೆಂಟ್, ಹೋಟೆಲ್, ಕೆಫೆ ಸೇರಿದಂತೆ 69 ವಾಣಿಜ್ಯ ಸಂಕೀರ್ಣಗಳಿಗೆ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಸುಮಾರು 6,561 ಕೆಜಿ ಅಡುಗೆ ಅನಿಲ ಬಳಕೆ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.
ಗೈಲ್ ಮಾಡಿಕೊಂಡ ಒಪ್ಪಂದದ ಪ್ರಕಾರ ಸರ್ಜಾಪುರ ಮುಖ್ಯ ರಸ್ತೆ, ಹೆಚ್ಎಸ್ಆರ್ ಲೇಔಟ್, ಜೆಪಿ ನಗರ, ಮಲ್ಲೇಶ್ವರ, ಯಲಹಂಕ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ.
ಸರ್ಕಾರದ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಗೈಲ್ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಕೆಗಾಗಿ ಪೈಪ್ ಅಳವಡಿಕೆ ಮಾಡಲು ರಸ್ತೆಯನ್ನು ಅಗೆದರೆ ಅದಕ್ಕೆ ಮತ್ತೆ ಡಾಂಬರ್ ಹಾಕಿ ಸರಿ ಮಾಡಿಕೊಡಬೇಕಿದೆ.

