HomeEntertainmentವಿದ್ಯಾರ್ಥಿಗಳ ಸುರಕ್ಷತೆ ಎಲ್ಲಿದೆ?: ದೆಹಲಿ ಕಟ್ಟಡ ದುರಂತದ ಬೆನ್ನಲ್ಲೇ ಸರ್ಕಾರದ ವಿರುದ್ಧ ನಟ ಸೋನು ಸೂದ್...

ವಿದ್ಯಾರ್ಥಿಗಳ ಸುರಕ್ಷತೆ ಎಲ್ಲಿದೆ?: ದೆಹಲಿ ಕಟ್ಟಡ ದುರಂತದ ಬೆನ್ನಲ್ಲೇ ಸರ್ಕಾರದ ವಿರುದ್ಧ ನಟ ಸೋನು ಸೂದ್ ಆಕ್ರೋಶ

ದೆಹಲಿಯಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಏಳು ಜನರು ಸಜೀವವಾಗಿ ಮೃತಪಟ್ಟ ದುರಂತದ ಬೆನ್ನಲ್ಲೇ, ನಟ ಸೋನು ಸೂದ್ ದೇಶದ ರಾಜಧಾನಿಯಲ್ಲಿರುವ ವಿದ್ಯಾರ್ಥಿಗಳ ವಸತಿ ವ್ಯವಸ್ಥೆಯ ದಯನೀಯ ಸ್ಥಿತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸ್ವಂತ ಊರು ತೊರೆದು ಕನಸುಗಳ ಬೆನ್ನೇರಿ ಬರುವ ವಿದ್ಯಾರ್ಥಿಗಳಿಗೆ ನಾವು ಸುರಕ್ಷಿತ ವಸತಿ ನೀಡುತ್ತಿದ್ದೇವಾ ಎಂದು ಅವರು ಪ್ರಶ್ನಿಸಿದ್ದಾರೆ. ಈ ದುರಂತದ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಆಕ್ರೋಶ ಹೊರಹಾಕಿರುವ ಅವರು, ದೆಹಲಿಯಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಹಾಸ್ಟೆಲ್ ಸೌಲಭ್ಯಗಳ ನಡುವಿನ ಬೃಹತ್ ಅಂತರವನ್ನು ಎತ್ತಿ ತೋರಿಸಿದ್ದಾರೆ.

“ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಬೇರೆ ನಗರಗಳಿಗೆ ತೆರಳಿ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಶ್ರಮಿಸುತ್ತಾರೆ. ಆದರೆ ಅವರಿಗೆ ಸುರಕ್ಷಿತವಾದ ವಸತಿ ಕಲ್ಪಿಸಲು ನಮಗೆ ಸಾಧ್ಯವಾಗಿದೆಯೇ? ದೆಹಲಿಯಲ್ಲಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಆದರೆ ಹಾಸ್ಟೆಲ್‌ಗಳ ಸಾಮರ್ಥ್ಯ ಕೇವಲ 30,000 ಮಾತ್ರ. ಅಂದರೆ ಪ್ರತಿ 31 ವಿದ್ಯಾರ್ಥಿಗಳಲ್ಲಿ ಕೇವಲ ಒಬ್ಬರಿಗೆ ಮಾತ್ರ ಅಧಿಕೃತ ಹಾಸ್ಟೆಲ್ ಸಿಗುತ್ತಿದೆ,” ಎಂದು ಸೋನು ಸೂದ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಮಸ್ಯೆಗೆ ಪರಿಹಾರ ಸೂಚಿಸಿರುವ ನಟ, ವಿಶ್ವವಿದ್ಯಾಲಯಗಳ ಸುತ್ತಮುತ್ತಲಿರುವ ಖಾಲಿ ಸರ್ಕಾರಿ ಜಾಗಗಳನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಕಡಿಮೆ ವೆಚ್ಚದ ಹಾಸ್ಟೆಲ್‌ಗಳನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ವಿಶ್ವವಿದ್ಯಾಲಯಗಳ ಆವರಣದಲ್ಲೇ ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಲು ಅಗತ್ಯ ಅನುಮತಿಗಳನ್ನು ನೀಡಬೇಕು ಎಂದಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸುರಕ್ಷತೆ, ಪೋಷಕರಿಗೆ ನೆಮ್ಮದಿ ಸಿಗುವುದರ ಜೊತೆಗೆ ಸರ್ಕಾರಕ್ಕೂ ಆದಾಯ ಬರಲಿದೆ. ನಿಯಮಗಳಲ್ಲಿ ಮಾಡುವ ಸಣ್ಣ ಬದಲಾವಣೆ ಯಾರೋ ಒಬ್ಬರ ದೊಡ್ಡ ಕನಸನ್ನು ರಕ್ಷಿಸಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೆಹಲಿ ವಿಶ್ವವಿದ್ಯಾನಿಲಯದ ಸೌತ್ ಕ್ಯಾಂಪಸ್ ಬಳಿಯ ಸತ್ಯನಿಕೇತನ ಪ್ರದೇಶದಲ್ಲಿ ‘ಹಾಸ್ಟೆಲ್ ಡೇಜ್’ ಎಂಬ ಐದು ಅಂತಸ್ತಿನ ಪಿಜಿ (PG) ಕಟ್ಟಡ ಸೆಪ್ಟೆಂಬರ್ 6 ರಂದು ದಿಢೀರ್ ಕುಸಿದು ಬಿದ್ದಿತ್ತು. ಪರಿಣಾಮ ಕಟ್ಟಡದ ಅಡಿಯಲ್ಲಿದ್ದ ಏಳು ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯು ಖಾಸಗಿ ಪಿಜಿಗಳ ಸುರಕ್ಷತೆ ಮತ್ತು ಕಟ್ಟಡ ನಿಯಮಗಳ ಉಲ್ಲಂಘನೆಯನ್ನು ಸ್ಪಷ್ಟವಾಗಿ ಬಯಲಿಗೆಳೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular