ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಘಟನೆಯೊಂದರಲ್ಲಿ, ತಾಯಿಯೊಬ್ಬರು ತನ್ನ ಮಗನನ್ನು ಆತನ ಗೆಳತಿಯೊಂದಿಗೆ ಮೆಟ್ರೋ ನಿಲ್ದಾಣದಲ್ಲಿ ರೆಡ್-ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆದರೆ, ಅಲ್ಲಿ ಗಲಾಟೆ ಮಾಡುವ ಬದಲು, ಅವರು ಸ್ಥಳದಲ್ಲೇ ಇಬ್ಬರಿಗೂ ನಿಶ್ಚಿತಾರ್ಥದ ಆರಂಭಿಕ ಶಾಸ್ತ್ರವಾದ ‘ರೋಕಾ’ (Roka) ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ ?
‘X’ (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಮೆಟ್ರೋ ನಿಲ್ದಾಣದ ಬೆಂಚ್ ಮೇಲೆ ಮಗ ಮತ್ತು ಆತನ ಗೆಳತಿ ಕುಳಿತಿರುವುದು ಕಾಣಿಸುತ್ತದೆ. ಈ ವೇಳೆ ಅಲ್ಲಿಗೆ ಬಂದ ತಾಯಿ, ಶಾಸ್ತ್ರದ ಭಾಗವಾಗಿ ಹುಡುಗಿಗೆ ಹಣ್ಣು ಮತ್ತು ಸಿಹಿ ಪದಾರ್ಥಗಳನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ, ವಿಡಿಯೋ ಮಾಡುತ್ತಿರುವ ವ್ಯಕ್ತಿಗೆ “ಬನಾ ತು ಸಹಿ ಸೆ” (ವಿಡಿಯೋವನ್ನು ಸರಿಯಾಗಿ ಮಾಡು) ಎಂದು ಸೂಚನೆ ನೀಡುತ್ತಾ, ಮಗ ಮತ್ತು ಆತನ ಗೆಳತಿಗೆ ಸಿಹಿ ತಿನಿಸುತ್ತಾರೆ.
ಈ ಸಂಪ್ರದಾಯವನ್ನು ನಿಲ್ಲಿಸುವಂತೆ ಮಗ ಪದೇ ಪದೇ ತಾಯಿಯನ್ನು ಕೇಳಿಕೊಂಡಾಗ, ಅವರು ತಮ್ಮ ಅಸಮಾಧಾನವನ್ನೂ ಹೊರಹಾಕುತ್ತಾರೆ. “ಹುಮಾರಿ ಬೇಯಿಜ್ಜತಿ ಹುಯಿ ಉಸ್ಕಾ ಕ್ಯಾ? (ನಮ್ಮ ಗೌರವ ಹರಾಜಾದದ್ದಕ್ಕೆ ಏನು ಮಾಡುವುದು?)” ಎಂದು ಕೇಳುತ್ತಾರೆ. ಆದರೂ, ಕೊನೆಗೆ ಮಗ ಮತ್ತು ಆತನ ಗೆಳತಿಗೆ “ಖುಷ್ ರಹೋ” (ಖುಷಿಯಾಗಿರಿ) ಎಂದು ಹರಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಈ ಘಟನೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅನೇಕರು ಇದು ಮುಂಚಿತವಾಗಿ ಸಿದ್ಧಪಡಿಸಿದ ನಾಟಕ (Scripted) ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.ಒಬ್ಬ ಬಳಕೆದಾರರು, “ಇದು ಖಂಡಿತವಾಗಿಯೂ ಸ್ಕ್ರಿಪ್ಟೆಡ್ ಇರಬಹುದು, ಇದು ನಿಜವಾಗಲು ಸಾಧ್ಯವಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.ಮತ್ತೊಬ್ಬರು, “ಹುಡುಗಿಯ ಪೋಷಕರ ಕಥೆ ಏನು? ಅವರ ಮಗಳನ್ನು ಈ ಹುಡುಗನಿಗೆ ಕೊಟ್ಟು ಮದುವೆ ಮಾಡಲು ಅವರಿಗೆ ಇಷ್ಟವಿದೆಯೇ ಎಂದು ಯಾರಾದರೂ ಕೇಳಿದರಾ?” ಎಂದು ಪ್ರಶ್ನಿಸಿದ್ದಾರೆ.
ರೋಕಾ’ ಎಂದರೇನು..?
ಈ ಶಾಸ್ತ್ರದ ಮೂಲಕ ವಧು ಮತ್ತು ವರ ಇಬ್ಬರೂ ಈಗ ‘ಬುಕ್’ ಆಗಿದ್ದಾರೆ ಮತ್ತು ಇನ್ನು ಮುಂದೆ ಬೇರೆ ಸಂಬಂಧಗಳನ್ನು ಹುಡುಕುವುದನ್ನು ನಿಲ್ಲಿಸಿದ್ದಾರೆ ಎಂಬುದನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
ಈ ಶಾಸ್ತ್ರದಲ್ಲಿ ಏನೇನು ನಡೆಯುತ್ತದೆ?
ಹುಡುಗ ಮತ್ತು ಹುಡುಗಿಯ ಕುಟುಂಬದವರು ಪರಸ್ಪರ ಸಂಬಂಧಕ್ಕೆ ಒಪ್ಪಿಗೆ ನೀಡಿದ ಮೇಲೆ ಈ ಕಾರ್ಯಕ್ರಮ ನಡೆಯುತ್ತದೆ.: ವರನ ಕುಟುಂಬದವರು ವಧುವಿಗೆ ಮತ್ತು ವಧುವಿನ ಕುಟುಂಬದವರು ವರನಿಗೆ ಬಟ್ಟೆ, ಸಿಹಿ ತಿಂಡಿ, ಹಣ್ಣುಗಳು ಮತ್ತು ಹಣವನ್ನು (ಶಗುನ್) ನೀಡಿ ಆಶೀರ್ವದಿಸುತ್ತಾರೆ.

