ಜಾತ್ಯತೀತ ಜನತಾ ದಳ (ಜೆಡಿಎಸ್) ಪಕ್ಷ ಮಹತ್ವದ ಬದಲಾವಣೆ ಮಾಡಲು ಚಿಂತನೆ ನಡೆಸಿದೆ. 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಹೊಸ ಸ್ವರೂಪ ನೀಡಲು ಮುಂದಾಗಿದೆ.
ಬುಧವಾರ ಬೆಂಗಳೂರಿನ ಪಕ್ಷದ ರಾಜ್ಯ ಕಚೇರಿ ಜೆ.ಪಿ ಭವನದಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಎಂ. ಕೃಷ್ಣಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 2ನೇ ಕೋರ್ ಕಮಿಟಿ ಸಭೆ ನಡೆಯಿತು. ಈ ಸಭೆಯಲ್ಲಿ ಹಲವಾರು ವಿಚಾರದ ಕುರಿತು ಚರ್ಚೆಗಳನ್ನು ನಡೆಸಲಾಗಿದೆ.
ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕುರಿತು, ಪ್ರಸ್ತುತ ರಾಜಕೀಯ ಸ್ಥಿತಿಗತಿ ಹಾಗೂ ಜನಪರ ಹೋರಾಟಗಳ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಬಳಿಕ ಜಿಲ್ಲಾ ಅಧ್ಯಕ್ಷರೊಂದಿಗೆ ಸಂಘಟನಾ ವಿಚಾರಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಲಾಗಿದೆ.
ಪಕ್ಷದ ಚಿನ್ಹೆ ಬದಲಾವಣೆ: ಜೆಡಿಎಸ್ ಪಕ್ಷ ಸ್ಥಾಪನೆಯಾಗಿ 25 ವರ್ಷ ಪೂರೈಸಿದೆ. ಆದ್ದರಿಂದ ಪಕ್ಷದ ಚಿನ್ಹೆಯ ವಿನ್ಯಾಸ ಬದಲಾವಣೆ ಮಾಡಲು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯನ್ನು ನಡೆಸಲಾಗಿದೆ.
ಸದ್ಯ ತೆನೆ ಹೊತ್ತ ಮಹಿಳೆಯ ಚಿನ್ಹೆಯನ್ನು ಜೆಡಿಎಸ್ ಪಕ್ಷ ಹೊಂದಿದೆ. ಈ ಚಿನ್ಹೆಗೆ ಚಕ್ರವನ್ನು ಸೇರಿಸುವ ಮೂಲಕ ಚಿನ್ಹೆ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಕುರಿತು ಸಭೆಯಲ್ಲಿ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗಿದೆ.
ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯವನ್ನು ಪಡೆದು ಪಕ್ಷದ ಚಿನ್ಹೆ ಬದಲಾವಣೆ ಮಾಡುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಮುಂಬರುವ ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೊದಲು ಈ ಕುರಿತು ಅಂತಿಮ ತೀರ್ಮಾನ ಪ್ರಕಟವಾಗುವ ನಿರೀಕ್ಷೆ ಇದೆ.
2025ರ ನವೆಂಬರ್ 21 ಮತ್ತು 22ರಂದು ರಾಷ್ಟ್ರೀಯ ಸಮಾವೇಶ, ಕಾರ್ಯಕಾರಣಿ ಸಭೆಗಳು ಬೆಂಗಳೂರಿನಲ್ಲಿ ನಡೆದಿದ್ದವು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ, ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಪುನರ್ ಆಯ್ಕೆಯಾಗಿದ್ದರು.
ಜಾತ್ಯತೀತ ಜನತಾ ದಳ (ಜೆಡಿಎಸ್) ಈಗ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದ್ದು, 2024ರ ಲೋಕಸಭೆ ಚುನಾವಣೆ ಬಳಿಕ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದೆ.
ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು. ಇತ್ತೀಚೆಗೆ ನಡೆದ ಮಹಾರಾಷ್ಟ್ರ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಪಕ್ಷದ 6 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಲಿ ರಾಜ್ಯಸಭಾ ಸದಸ್ಯರು. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 19 ಸೀಟುಗಳಲ್ಲಿ ಜಯಗಳಿಸಿತ್ತು. ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಡೆದ ಬಳಿಕ ಪಕ್ಷದ ಶಾಸಕರ ಬಲ 18ಕ್ಕೆ ಇಳಿಕೆಯಾಗಿದೆ.
2024ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದೆ. ಚುನಾವಣೆಯಲ್ಲಿ 2 ಸೀಟು ಗೆದ್ದಿರುವ ಪಕ್ಷ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಗೆ ಬೆಂಬಲ ನೀಡಿದೆ. ಆದ್ದರಿಂದ ಪಕ್ಷಕ್ಕೆ ಸಚಿವ ಸ್ಥಾನ ನೀಡಲಾಗಿದೆ.

