ಬೆಳಗಿನ ಉಪಾಹಾರವನ್ನು ಕೈಬಿಡುವುದರಿಂದ ದೇಹದಲ್ಲಿ ಆಗುವ ಬದಲಾವಣೆಗಳು ಮತ್ತು ಅದು ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾಗಲು ಹೇಗೆ ಕಾರಣವಾಗುತ್ತದೆ ಎಂಬುದನ್ನು ತಿಳಿಯೋಣ. ಬೆಳಿಗ್ಗೆ ಎದ್ದ ಕೂಡಲೇ ಆಫೀಸ್ ಕೆಲಸದ ಅವಸರದಲ್ಲೋ ಅಥವಾ ಡಯಟ್ ಹೆಸರಿನಲ್ಲೋ ನೀವು ಉಪಾಹಾರವನ್ನು ಪಕ್ಕಕ್ಕಿಡುತ್ತಿದ್ದೀರಾ? ಹಾಗಿದ್ದರೆ, ನೀವು ತಿಳಿಯದೆಯೇ ದೊಡ್ಡ ಆರೋಗ್ಯ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೀರಿ.
ತೂಕ ಇಳಿಸಿಕೊಳ್ಳಲು ಉಪಾಹಾರ ಬಿಟ್ಟರೆ, ಅದು ಉಲ್ಟಾ ಆಗಿ ನಿಮ್ಮ ಹೊಟ್ಟೆಯ ಸುತ್ತ ಕೊಬ್ಬು ಬೆಳೆಯಲು ಕಾರಣವಾಗುತ್ತದೆ ಎಂದು ಪ್ರಮುಖ ಪೌಷ್ಟಿಕಾಂಶ ತಜ್ಞರು ಹೇಳುತ್ತಿದ್ದಾರೆ. ಇತ್ತೀಚೆಗೆ ‘ರಾಜ್ ಶಮಾನಿ’ ಪಾಡ್ ಕಾಸ್ಟ್‌ನಲ್ಲಿ ತಜ್ಞರೊಬ್ಬರು ಹಂಚಿಕೊಂಡ ಅಂಕಿ ಅಂಶಗಳು ಈಗ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿವೆ.
ತಜ್ಞರ ಎಚ್ಚರಿಕೆ ಏನು?
ಪ್ರಮುಖ ನ್ಯೂಟ್ರಿಷನಿಸ್ಟ್ ಪೂಜಾ ಮಖಿಜಾ ಅವರು ಪಾಡ್ ಕಾಸ್ಟ್‌ನಲ್ಲಿ ಮಾತನಾಡುತ್ತಾ, ಉಪಾಹಾರ ಬಿಡುವವರ ಬಗ್ಗೆ ಸಂಚಲನ ಮೂಡಿಸುವ ವಿಷಯಗಳನ್ನು ಹಂಚಿಕೊಂಡಿದ್ದಾರೆ:
• 31% ಹೆಚ್ಚಿನ ಅಪಾಯ: ನಿಯಮಿತವಾಗಿ ಬ್ರೇಕ್ ಫಾಸ್ಟ್ ಸ್ಕಿಪ್ ಮಾಡುವವರಲ್ಲಿ ಹೊಟ್ಟೆಯ ಸುತ್ತ ಕೊಬ್ಬು (Belly Fat) ಬೆಳೆಯುವ ಸಾಧ್ಯತೆ ಶೇ. 31ರಷ್ಟು ಹೆಚ್ಚಿರುತ್ತದೆ.
• ತೂಕ ಹೆಚ್ಚಳ: ಉಪಾಹಾರ ಸೇವಿಸದವರು ಸಾಮಾನ್ಯ ವ್ಯಕ್ತಿಗಳಿಗಿಂತ ಶೇ. 48ರಷ್ಟು ಹೆಚ್ಚು ಓವರ್ವೇಟ್ ಆಗುವ ಅಪಾಯವಿದೆ.
• ಬೊಜ್ಜು (Obesity): ಇವರಲ್ಲಿ ಸ್ಥೂಲಕಾಯದ ಸಮಸ್ಯೆ ಕಾಡುವ ಸಾಧ್ಯತೆ ಶೇ. 44ರಷ್ಟು ಹೆಚ್ಚಿದೆ ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ.
ಇದು ಹೇಗೆ ಕೆಲಸ ಮಾಡುತ್ತದೆ?
ಉಪಾಹಾರ ಸೇವಿಸದಿದ್ದಾಗ ದೇಹಕ್ಕೆ ಅಗತ್ಯವಾದ ಶಕ್ತಿ ಸಿಗುವುದಿಲ್ಲ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿ, ಮೆದುಳು ತಕ್ಷಣ ಶಕ್ತಿ ನೀಡುವ ಸಿಹಿ ಪದಾರ್ಥಗಳನ್ನು ಬಯಸುತ್ತದೆ. ಪರಿಣಾಮವಾಗಿ, ಉಪಾಹಾರ ಬಿಟ್ಟವರು ಮಧ್ಯಾಹ್ನ ಅಥವಾ ಸಂಜೆ ವೇಳೆ ಜಂಕ್ ಫುಡ್ ಮತ್ತು ಸಿಹಿತಿಂಡಿಗಳನ್ನು ಅತಿಯಾಗಿ ಸೇವಿಸುತ್ತಾರೆ. ಇದು ಕ್ರಮೇಣ ದೇಹದ ತೂಕ ಹೆಚ್ಚಾಗಲು ಮತ್ತು ಹೊಟ್ಟೆಯ ಭಾಗದಲ್ಲಿ ಅತಿಯಾದ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ ಎಂದು ಪೂಜಾ ಮಖಿಜಾ ತಿಳಿಸಿದ್ದಾರೆ.
ವೈದ್ಯರ ಅಭಿಪ್ರಾಯ
ಥಾಣೆಯ ಕಿಮ್ಸ್ ಆಸ್ಪತ್ರೆಯ ಡಯಾಬಿಟಾಲಜಿ ವಿಭಾಗದ ಮುಖ್ಯಸ್ಥ ಡಾ. ವಿಜಯ್ ನೆಗಲೂರ್ ಈ ಬಗ್ಗೆ ಪ್ರತಿಕ್ರಿಯಿಸಿ, “ಉಪಾಹಾರ ಬಿಡುವುದರಿಂದ ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತದೆ ಎಂದು ಅನೇಕ ಅಧ್ಯಯನಗಳು ಹೇಳುತ್ತಿರುವುದು ನಿಜ. ಇದು ನೇರವಾಗಿ ಕಾರಣವಾಗದಿದ್ದರೂ, ದೇಹದ ಚಯಾಪಚಯ ಕ್ರಿಯೆಯ (Metabolism) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ” ಎಂದಿದ್ದಾರೆ. ಅಲ್ಲದೆ, ಉಪಾಹಾರ ಬಿಡುವವರ ಜೀವನಶೈಲಿಯಲ್ಲಿರುವ ಇತರ ಅವ್ಯವಸ್ಥಿತ ಅಭ್ಯಾಸಗಳು ಕೂಡ ಸ್ಥೂಲಕಾಯಕ್ಕೆ ಕಾರಣವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯಕರ ಜೀವನಕ್ಕಾಗಿ ಸಮತೋಲಿತ ಉಪಾಹಾರ ಸೇವಿಸುವುದು ಅತ್ಯಗತ್ಯ. ಕೇವಲ ತೂಕ ಇಳಿಸಲು ಬ್ರೇಕ್ ಫಾಸ್ಟ್ ಸ್ಕಿಪ್ ಮಾಡುವುದರಿಂದ ಪ್ರಯೋಜನಕ್ಕಿಂತ ನಷ್ಟವೇ ಹೆಚ್ಚು. ಆದ್ದರಿಂದ ನಾಳೆಯಿಂದಲೇ ನಿಮ್ಮ ಆಹಾರ ಕ್ರಮದಲ್ಲಿ ಪೌಷ್ಟಿಕಾಂಶಯುಕ್ತ ಉಪಾಹಾರವನ್ನು ಸೇರಿಸಿಕೊಳ್ಳಿ.

