ಕೇರಳ ಕ್ರಿಕೆಟ್ ಲೀಗ್ (ಕೆಸಿಎಲ್) ಪಂದ್ಯವೊಂದರಲ್ಲಿ ತ್ರಿಶ್ಶೂರ್ ಟೈಟನ್ಸ್ ತಂಡದ ಬ್ಯಾಟರ್ ಎಕೆ ಅರ್ಜುನ್ ತಮ್ಮ ಸಾಹಸ ಹಾಗೂ ಅದ್ಭುತ ಆಟದ ಮೂಲಕ ಪಂದ್ಯಕ್ಕೆ ರೋಚಕ ಮುಕ್ತಾಯ ಹಾಡಿದ್ದಾರೆ. ಕೊನೆಯ ಎಸೆತದಲ್ಲಿ ತಂಡದ ಗೆಲುವಿಗೆ 4 ರನ್‌ಗಳ ಅಗತ್ಯವಿದ್ದಾಗ, ತೀವ್ರ ಗಾಯದಿಂದ ಕಾಲು ಎಳೆಯುತ್ತಲೇ ಮೈದಾನಕ್ಕೆ ಬಂದ ಅರ್ಜುನ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ನಂಬಲಾಗದ ಗೆಲುವು ತಂದುಕೊಟ್ಟಿದ್ದಾರೆ.
ಶರಾನ್ ಎಸ್‌ಎಸ್ ಔಟಾದ ನಂತರ ತ್ರಿಶ್ಶೂರ್ ಟೈಟನ್ಸ್ ಗೆಲುವಿನ ಹಾದಿ ಕಠಿಣವಾಗಿತ್ತು. ಗಾಯದ ಸಮಸ್ಯೆಯಿಂದಾಗಿ ಓಡಾಡಲು ಕಷ್ಟಪಡುತ್ತಿದ್ದ ಅರ್ಜುನ್, ಬ್ಯಾಟ್ ಅನ್ನೇ ಊರುಗೋಲಿನಂತೆ ಬಳಸುತ್ತಾ ಕ್ರೀಸ್‌ಗೆ ಆಗಮಿಸಿದ್ದರು. ಕಾಲಿನ ನೋವಿನಿಂದಾಗಿ ಕ್ರೀಸ್‌ಗೆ ಬರಲು ಹೆಣಗಾಡುತ್ತಿದ್ದ ಅವರ ವೀಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆದರೆ ಕ್ರೀಸ್‌ಗೆ ಬಂದ ನಂತರ ತೀವ್ರ ಏಕಾಗ್ರತೆ ಪ್ರದರ್ಶಿಸಿದ ಈ ಎಡಗೈ ಬ್ಯಾಟರ್, ಎದುರಾದ ಕೊನೆಯ ಎಸೆತವನ್ನು ಅತ್ಯಂತ ಭರ್ಜರಿಯಾಗಿ ಬೌಂಡರಿ ಲೈನ್ ದಾಟಿಸಿ ಸಿಕ್ಸರ್ ಎತ್ತಿದರು. ಈ ಅದ್ಭುತ ಸಿಕ್ಸರ್‌ನೊಂದಿಗೆ ತ್ರಿಶ್ಶೂರ್ ಟೈಟನ್ಸ್ ರೋಚಕ ಜಯ ಸಾಧಿಸಿತು. ಈ ರೋಮಾಂಚಕಾರಿ ಗೆಲುವು 2018 ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಗಾಯದ ನಡುವೆಯೂ ಕೇದಾರ್ ಜಾಧವ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ತಂದುಕೊಟ್ಟ ಕ್ಷಣವನ್ನು ನೆನಪಿಸುವಂತಿತ್ತು. ಈ ಜಯದೊಂದಿಗೆ ತ್ರಿಶ್ಶೂರ್ ಟೈಟನ್ಸ್ ಲೀಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.
“>

