ಕಾರವಾರ: ಮನೆ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಆಕಸ್ಮಿಕವಾಗಿ 50 ಅಡಿ ಆಳದ ಬಾವಿಗೆ ಬಿದ್ದಿದ್ದು, ಸಮಯ ಪ್ರಜ್ಞೆ ಮೆರೆದ ಸ್ಥಳೀಯ ವ್ಯಕ್ತಿಯೊಬ್ಬರು ತನ್ನ ಪ್ರಾಣದ ಹಂಗು ತೊರೆದು ಮಗುವನ್ನು ರಕ್ಷಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಶಿರಸಿ ನಗರದ ಕಸ್ತೂರಬಾ ನಗರದಲ್ಲಿ ಈ ಘಟನೆ ನಡೆದಿದೆ. ಕಸ್ತೂರಬಾ ನಗರದ ನಿವಾಸಿಯಾದ ಭುವಿ ಎಂಬ ಎರಡು ವರ್ಷದ ಮಗು ಎಂದಿನಂತೆ ಮನೆಯ ಅಂಗಳದಲ್ಲಿ ಆಟವಾಡುತ್ತಿತ್ತು. ಮನೆಯವರೆಲ್ಲರೂ ಕೆಲಸದಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದಿದೆ. ಮಗು ಕಾಣದಿದ್ದಾಗ ಆತಂಕಗೊಂಡ ಪೋಷಕರು ಸುತ್ತಮುತ್ತ ಹುಡುಕಾಡಿದ್ದಾರೆ. ಬಾವಿಯಲ್ಲಿ ಮಗುವಿನ ಅಳುವಿನ ಶಬ್ದ ಕೇಳಿ ಕಂಗಾಲಾಗಿದ್ದಾರೆ.
ಮಗು ಬಾವಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿ ಹಾಗೂ ಸಮಾಜ ಸೇವಕ ಪಯ್ಯು ಚವಟಿ ಎಂಬುವವರು ತಕ್ಷಣ ಕಾರ್ಯಪ್ರವೃತ್ತರಾಗಿ 50 ಅಡಿ ಆಳವಿದ್ದ ಕಗ್ಗತ್ತಲ ಬಾವಿಗೆ ಹಗ್ಗದ ಸಹಾಯದಿಂದ ಇಳಿದಿದ್ದಾರೆ. ಬಾವಿಯ ಒಳಗಿದ್ದ ಮೋಟಾರ್ ಪೈಪ್‌ಗೆ ಮಗುವಿನ ಬಟ್ಟೆ ಸಿಲುಕಿಕೊಂಡಿದ್ದರಿಂದ, ಮಗು ನೀರಿನಲ್ಲಿ ಮುಳುಗದೇ ಪೈಪ್ ಆಸರೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನೇತಾಡುತ್ತಿತ್ತು. ಪಯ್ಯ ಅವರು ಜಾಗರೂಕತೆಯಿಂದ ಮಗುವನ್ನು ಎತ್ತಿಕೊಂಡು ಸುರಕ್ಷಿತವಾಗಿ ಮೇಲಕೆತ್ತಿದ್ದಾರೆ.
ಅದೃಷ್ಟವಶಾತ್ ಮಗುವಿಗೆ ಸಣ್ಣ ಗಾಯಕೂಡ ಆಗಿಲ್ಲ. ಮಗು ಸುರಕ್ಷಿತವಾಗಿದೆ. ಮಗುವನ್ನು ರಕ್ಷಿಸಿದ ಪಯ್ಯ ಕೂಡ ಸುರಕ್ಷಿತವಾಗಿದ್ದು, ಕುಟುಂಬದವರು ನಿಟ್ಟುಸಿರುಬಿಟ್ಟಿದ್ದಾರೆ. ಮಗುವನ್ನು ರಕ್ಷಿಸಿದ ಪಯ್ಯ ಚವಟಿ ಅವರ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

