ಬೀದರ್: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ- SIR ಕರ್ತವ್ಯಕ್ಕೆ ತೆರಳುವಾಗ ತುಮಕೂರಿನಲ್ಲಿ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಎಒ ಭುವನಾ ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದ ಬಿಎಲ್ ಒ ಓರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಬೀದರ್ ನಲ್ಲಿ ನಡೆದಿದೆ.
ಬೀದರ್ ತಾಲೂಕಿನ ಅಮಲಾಪುರದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಬೀದರ್ ಜಿಲ್ಲೆಯ ಭಾಲ್ಕಿ ಮೂಲದವರಾಗಿರುವ ಸುನೀಲ್ (40) ಎಂದು ಗುರುತಿಸಲಾಗಿದೆ.
ಬೀದರ್ ತಾಲೂಕಿನ ಅಮಲಾಪುರ ಗ್ರಾಮದಲ್ಲಿ ಸರ್ವೇ ನಡೆಸುತ್ತಿದ್ದ ವೇಳೆ ತೀವ್ರ ಎದೆನೋವಿನಿಂದ ಸುಸ್ತಾಗಿ ಸುನೀಲ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದುರದೃಷ್ಟವಶಾತ್ ಅಲ್ಲಿ ಸ್ಟಂಟ್ ಅಳವಡಿಸುವ ವೇಳೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಗಾಂಧಿಗಂಜ್ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ಘಟನೆ ನಡೆದಿದೆ.
ಇತ್ತ ತುಮಕೂರಿನಲ್ಲಿ ವಿಎಒ ಭುವನಾ ಸಾವು ಖಂಡಿಸಿ ಡಿಸಿ ಕಚೇರಿ ಬಳಿ ಕಂದಾಯ ನೌಕರರ ಪ್ರತಿಭಟನೆ ಮುಂದುವರಿದಿದೆ. ನಿನ್ನೆ ತಿಪಟೂರು ತಾಲೂಕಿನಲ್ಲಿ ಕರ್ತವ್ಯದ ವೇಳೆ ಅಪಘಾತದವಾಗಿ ಗಾಯಗೊಂಡಿದ್ದ ವಿಎಒ ಯಶಸ್ವಿನಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ. ಕಾಲಿಗೆ ಗಂಭೀರ ಗಾಯವಾಗಿದ್ದರೂ, ಹೋರಾಟದಲ್ಲಿ ಭಾಗವಹಿಸುವ ಮೂಲಕ ಭುವನಾ ಸಾವಿಗೆ ನ್ಯಾಯ ಕೊಡುವಂತೆ ಅವರು ಆಗ್ರಹಿಸಿದ್ದಾರೆ. ಈ ನಡುವೆ ಧರಣಿಯಲ್ಲಿ ಭಾಗಿಯಾಗುವಂತೆ ಸಂಘದಿಂದ ಎಲ್ಲಾ ನೌಕರರಿಗೆ ಬುಲಾವ್ ನೀಡಲಾಗಿದ್ದು, ಮೇಲಧಿಕಾರಿಗಳ ಒತ್ತಡವೇ ಭುವನಾ ಸಾವಿಗೆ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

