HomeUncategorizedಬರೋಬ್ಬರಿ 13 ಕೋಟಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ; SIR ಪ್ರಕ್ರಿಯೆ ಪ್ರಜಾಪ್ರಭುತ್ವ, ಸಂವಿಧಾನದ ಕಗ್ಗೊಲೆ:...

ಬರೋಬ್ಬರಿ 13 ಕೋಟಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ; SIR ಪ್ರಕ್ರಿಯೆ ಪ್ರಜಾಪ್ರಭುತ್ವ, ಸಂವಿಧಾನದ ಕಗ್ಗೊಲೆ: ನಟ ಪ್ರಕಾಶ್ ರಾಜ್ ಆಕ್ರೋಶ

ಮಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ‘ಎಸ್.ಐ.ಆರ್’ ಪ್ರಕ್ರಿಯೆಯು ದೇಶದ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕಿನ ಮೇಲಿನ ವ್ಯವಸ್ಥಿತ ದಾಳಿಯಾಗಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನದ ಕಗ್ಗೊಲೆಯಾಗಿದೆ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಸಮಾಲೋಚನಾ ಸಭೆ ಮತ್ತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, 1950ರಿಂದಲೂ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಚುನಾವಣಾ ಆಯೋಗವು ಪ್ರತಿವರ್ಷ ನಾಲ್ಕು ಬಾರಿ ಮತದಾರರ ಪಟ್ಟಿಯನ್ನು ಅಪ್ಡೇಟ್ ಮಾಡುತ್ತಾ, ಜನವರಿ ವೇಳೆಗೆ ನವೀಕೃತ ಪಟ್ಟಿಯನ್ನು ಬಿಡುಗಡೆ ಮಾಡುವ ನಿರಂತರ ಪ್ರಕ್ರಿಯೆ ಹೊಂದಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟಿಷರು ಇಲ್ಲಿ ಅನಕ್ಷರಸ್ಥರೇ ಹೆಚ್ಚಿದ್ದಾರೆ, ಓದಿದವರಿಗೆ ಮಾತ್ರ ಮತದಾನದ ಹಕ್ಕು ಕೊಡಿ’ ಎಂದಿದ್ದರು. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಜವಾಹರಲಾಲ್ ನೆಹರೂ ಅವರು ಪ್ರತಿಯೊಬ್ಬ ನಾಗರಿಕನಿಗೂ ಸಾರ್ವತ್ರಿಕ ಮತದಾನದ ಹಕ್ಕು ದೊರೆಯಬೇಕು ಎಂದು ಹೋರಾಡಿ ತಂದುಕೊಟ್ಟರು. ಅಮೆರಿಕದಂತಹ ಮುಂದುವರಿದ ರಾಷ್ಟ್ರದಲ್ಲೂ ಎಲ್ಲ ನಾಗರಿಕರಿಗೆ ಮತದಾನದ ಹಕ್ಕು ಸಿಗಲು 200 ವರ್ಷ ಬೇಕಾಯಿತು. ಆದರೆ ಭಾರತದಲ್ಲಿ ಆರಂಭದಲ್ಲೇ ಎಲ್ಲರಿಗೂ ಮತದಾನದ ಹಕ್ಕು ನೀಡಲಾಯಿತು. ಅಂತಹ ಪವಿತ್ರ ಹಕ್ಕನ್ನು ಈಗ ಕಸಿಯಲಾಗುತ್ತಿದೆ ಎಂದು ಆರೋಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನಾವಣಾ ಆಯೋಗವು ಬಾಂಗ್ಲಾದೇಶಿಯರು ನುಸುಳಿದ್ದಾರೆ, ಕಳ್ಳ ಮತಗಳಿವೆ, ಪಟ್ಟಿಯನ್ನು ಶುದ್ಧೀಕರಿಸುತ್ತೇವೆ ಮತ್ತು ಒಬ್ಬ ಅರ್ಹ ಮತದಾರನೂ ಹೊರಗುಳಿಯದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿ ‘ಎಸ್.ಐ.ಆರ್’ ಪ್ರಕ್ರಿಯೆ ಆರಂಭಿಸಿತು. ಆದರೆ, ವಾಸ್ತವದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಬರೋಬ್ಬರಿ 13 ಕೋಟಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ಚುನಾವಣಾ ಆಯೋಗದ ನಿಯಮಾವಳಿಯಂತೆ ಒಬ್ಬ ಮತದಾರನನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಮುನ್ನ ಆತನಿಗೆ ಕಡ್ಡಾಯವಾಗಿ ಅಧಿಕೃತ ನೋಟಿಸ್ ಜಾರಿ ಮಾಡಬೇಕು. ಆದರೆ ಈ 13 ಕೋಟಿ ಮತದಾರರ ಪೈಕಿ ಕನಿಷ್ಠ ಒಬ್ಬನಿಗಾದರೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೋಟಿಸ್ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 5.5 ಕೋಟಿ ಮತದಾರರಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಸಮಯವಿರುವಾಗ ಕೇವಲ ಒಂದೇ ತಿಂಗಳಲ್ಲಿ ಈ ಬೃಹತ್ ಪ್ರಕ್ರಿಯೆಯನ್ನು ಏಕಾಏಕಿ ಮುಗಿಸಲು ಮುಂದಾಗಿದ್ದು ಏಕೆ?. ಕರ್ನಾಟಕದಲ್ಲಿ ಬರೋಬ್ಬರಿ 1 ಕೋಟಿ 8 ಲಕ್ಷ ಮತಗಳನ್ನು ASDO (Absent – ಗೈರುಹಾಜರಿ, Shifted – ಸ್ಥಳಾಂತರ, Duplicate – ನಕಲಿ, Dead – ಮೃತ ಹಾಗೂ Others – ಇತರೆ) ಎಂದು ಗುರುತಿಸಿ ಡಿಲೀಟ್ ಮಾಡಲು ಮುಂದಾಗಿದ್ದಾರೆ. ಇದಲ್ಲದೆ 43 ಲಕ್ಷ ಮತದಾರರನ್ನು ಅನ್‌ಮ್ಯಾಪ್ಡ್ ಹಾಗೂ ಲಾಜಿಕಲ್ ಡಿಸ್ಕ್ರಿಪೆನ್ಸಿ (Logical Discrepancy) ಹೆಸರಿನಲ್ಲಿ ನೋಟಿಸ್ ನೀಡದೆ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದರು.

ಕಲಬುರಗಿಯ ಕೊಳಚೆ ಪ್ರದೇಶದಲ್ಲಿ ಗುಡಿಸಲು ಸುಟ್ಟುಹೋದಾಗ ಸರ್ಕಾರ ಅವರಿಗೆ ಜಾಗ ಕೊಟ್ಟಿದೆ, ಆದರೆ ಹಕ್ಕುಪತ್ರ ನೀಡಿಲ್ಲ. ಅಂತಹ ಬಡವರನ್ನು, ತೃತೀಯಲಿಂಗಿಗಳನ್ನು, ವಲಸೆ ಕಾರ್ಮಿಕರನ್ನು, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಕರಾವಳಿಯ ಯುವಕರನ್ನು ‘ಅಬ್ಸೆಂಟ್’ ಅಥವಾ ‘ಶಿಫ್ಟೆಡ್’ ಎಂದು ಡಿಲೀಟ್ ಮಾಡಲಾಗುತ್ತಿದೆ. ಬದುಕಿರುವ ವ್ಯಕ್ತಿಗಳನ್ನು ‘ಸತ್ತಿದ್ದಾರೆ’ ಎಂದು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಆದರೆ ಸಾವಿನ ಪ್ರಮಾಣಪತ್ರ ಎಲ್ಲಿದೆ ಎಂದು ಕೇಳಿದರು.

ಜಾರ್ಖಂಡ್‌ನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಬಳಿ 2,000 ಎನ್ಯುಮರೇಷನ್ ಫಾರ್ಮ್ 7 ಸಿಕ್ಕಿವೆ. ಇತ್ತೀಚೆಗೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 142ರಲ್ಲಿ ಜಾದವ್ ಎಂಬಾತನ ಹೆಸರಿನಲ್ಲಿ 200ಕ್ಕೂ ಹೆಚ್ಚು ಮೊದಲೇ ಪ್ರಿಂಟ್ ಆಗಿದ್ದ (Pre-printed) ಫಾರ್ಮ್ 7 ಅನ್ನು ತೆಗೆದುಕೊಂಡು ಬಂದು ಮುಸ್ಲಿಂ, ಕ್ರಿಶ್ಚಿಯನ್, ಆದಿವಾಸಿ ಹಾಗೂ ಬಡ ಮತದಾರರ ಹೆಸರನ್ನು ರದ್ದುಗೊಳಿಸಲು ಬಿಎಲ್‌ಒ (BLO) ಮೇಲೆ ಒತ್ತಡ ಹೇರಲಾಗಿತ್ತು. ಸ್ಥಳೀಯ ಬಿಎಲ್‌ಒ ಅದನ್ನು ವಿರೋಧಿಸಿದಾಗ ಮಾಜಿ ಶಾಸಕರು ಹಾಗೂ ರಾಜಕೀಯ ಮುಖಂಡರಿಂದ ಬೆದರಿಕೆ ಕರೆಗಳು ಬಂದಿದ್ದವು. ಕಳೆದ ಕೆಲವೇ ದಿನಗಳಲ್ಲಿ ಕರ್ನಾಟಕದಾದ್ಯಂತ 60,000ಕ್ಕೂ ಹೆಚ್ಚು ಫಾರ್ಮ್ 7ಗಳನ್ನು ಅಕ್ರಮವಾಗಿ ಸಲ್ಲಿಸಿ ವಿಪಕ್ಷಗಳ ಮತ್ತು ನಿರ್ದಿಷ್ಟ ಸಮುದಾಯಗಳ ಮತಗಳನ್ನು ರದ್ದುಗೊಳಿಸುವ ವ್ಯವಸ್ಥಿತ ಸಂಚು ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿಂದೆ ಸ್ಥಳೀಯ ಇಆರ್‌ಒ ಹಾಗೂ ಬಿಎಲ್‌ಒ ಮಟ್ಟದಲ್ಲಿ ಪರಿಶೀಲನೆ ನಡೆಸಿ ವಿಕೇಂದ್ರೀಕೃತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ‘ECI-Net’ ಮೂಲಕ ಎಲ್ಲವನ್ನೂ ದೆಹಲಿ ಮಟ್ಟದಲ್ಲಿ ಕೇಂದ್ರೀಕೃತಗೊಳಿಸಲಾಗಿದೆ. ಗೋವಾದಲ್ಲಿ ಸ್ಥಳೀಯ ಇಆರ್‌ಒ 72 ಜನರ ಹೆಸರು ತಪ್ಪಾಗಿ ಡಿಲೀಟ್ ಆಗಿವೆ ಎಂದು ಸರಿಪಡಿಸಲು ಹೋದರೆ ಸಾಫ್ಟ್‌ವೇರ್‌ನಲ್ಲಿ ‘ಅಪ್ರೂವ್ ಬಟನ್’ ಅನ್ನೇ ತೆಗೆದುಹಾಕಲಾಗಿತ್ತು ಎಂದಿದ್ದಾರೆ.

2023ರ ಡಿಸೆಂಬರ್‌ನಲ್ಲಿ 140ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿ, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಟ್ಟು, ಕೇವಲ ಆಡಳಿತ ಪಕ್ಷವೇ ತನಗೆ ಬೇಕಾದವರನ್ನು ನೇಮಿಸಿಕೊಳ್ಳುವ ಕಾಯ್ದೆಯನ್ನು ಜಾರಿಗೆ ತರಲಾಯಿತು. ಚುನಾವಣಾ ಆಯುಕ್ತರಿಗೆ ‘ನ್ಯಾಯಾಂಗ ವಿನಾಯಿತಿ’ ನೀಡಿರುವುದರಿಂದ ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೂ ಅವರ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಹಾಕಲು ಸಾಧ್ಯವಾಗದಂತೆ ನಿಯಮ ರೂಪಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular