HomeKarnatakaನಿಯಮ ಸರಳಗೊಳಿಸಿ ಜನಸಾಮಾನ್ಯರಿಗೆ ಯೋಜನೆ, ಬ್ಯಾಂಕಿಂಗ್ ಸೇವೆ ತಲುಪಿಸಿ: ಸಂಸದ ಬಿ.ವೈ.ರಾಘವೇಂದ್ರ

ನಿಯಮ ಸರಳಗೊಳಿಸಿ ಜನಸಾಮಾನ್ಯರಿಗೆ ಯೋಜನೆ, ಬ್ಯಾಂಕಿಂಗ್ ಸೇವೆ ತಲುಪಿಸಿ: ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಪ್ರತಿಯೊಬ್ಬ ನಾಗರೀಕರಿಗೆ ಆರ್ಥಿಕ ಸಬಲೀಕರಣ ನೀಡಬೇಕೆಂಬ ಉದ್ದೇಶದಿಂದ ಅನುಷ್ಟಾನಗೊಳಿಸಲಾಗಿರುವ ಯೋಜನೆಗಳನ್ನು ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಸರಳಗೊಳಿಸಿ ಜನಸಾಮಾನ್ಯರಿಗೆ ತಲುಪಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಡಿಸಿಸಿ ಮತ್ತು ಡಿಎಲ್‌ಆರ್‌ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕುಗಳ ಮೂಲಕ ಸರ್ಕಾರದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು ಬ್ಯಾಂಕ್‌ ಗಳ ಸೇವೆ ಸ್ಮರಣೀಯವಾಗಿರುತ್ತದೆ. ಸರ್ಕಾರದ ಪ್ರತಿಯೊಂದು ಸೌಲಭ್ಯವು ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಗೂ ತಲುಪುಂತಾಗಬೇಕು. ಬ್ಯಾಂಕಿಂಗ್ ಸೇವೆಗಳನ್ನು ಜನಸಾಮಾನ್ಯರಿಗೆ ನಿಲುಕುವಂತೆ ಸರಳಗೊಳಿಸಿ ನೀಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದ ಅವರು, ಪಿಎಂ ಕಿಸಾನ್, ಪಿಎಂ ಮುದ್ರಾ, ಪಿಎಂ ಸ್ವನಿಧಿ, ಎಸ್‌ಸಿ/ಎಸ್‌ಟಿ, ಮಹಿಳೆ ಮತ್ತು ಅಲ್ಪಸಂಖ್ಯಾತರಿಗಾಗಿ ಇರುವ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಪಿಎಂ ವಿಶ್ವಕರ್ಮ ಯೋಜನೆಯಡಿ ಬ್ಯಾಂಕುಗಳಲ್ಲಿ ಸುಮಾರು ಅರ್ಧದಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಯಾವ ಕಾರಣಕ್ಕೆ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಬ್ಯಾಂಕ್ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ, ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸಾಲ, ಶಿಕ್ಷಣ ಸಾಲ, ವಸತಿ ಯೋಜನೆಯಡಿ ಸಾಲ ವಿತರಣೆಗೆ ಆದ್ಯತೆ ನೀಡಬೇಕು ಎಂದರು.

ಬ್ಯಾಂಕ್‌ ಗಳ ಅಧಿಕಾರಿಗಳು ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕು. 260 ಬ್ರಾಂಚ್‌ಗಳಲ್ಲಿ ಮಾತ್ರ ಡಿಎಲ್‌ಸಿಸಿ ಸಭೆ ಆಗಿದೆ. 85 ಬ್ರಾಂಚ್‌ಗಳಲ್ಲಿ ಆಗಿಲ್ಲ. ನಿಯಮಿತವಾಗಿ ಸಭೆಗಳನ್ನು ಕೈಗೊಂಡು ಕ್ರಮ ವಹಿಸಬೇಕೆಂದು ಇದೇ ವೇಳೆ ತಿಳಿಸಿದರು.

 ಮಾ.24 ರಿಂದ 26 ರವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಪಿಎಂ ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ವ್ಯಾಪಾರ ಮೇಳ ಏರ್ಪಡಿಸಲಾಗಿದ್ದು ಇಲ್ಲಿ ಒಟ್ಟು 50 ಮಳಿಗೆಗಳನ್ನು ತೆರೆಯಲಾಗುತ್ತಿದೆ. ಫಲಾನುಭವಿಗಳು ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ಬ್ಯಾಂಕುಗಳು ಕೈಜೋಡಿಸಬೇಕೆಂದು ಎಂದು ಮನವಿ ಮಾಡಿದರು.

ಕೆನರಾ ಬ್ಯಾಂಕ್ ಡಿಜಿಎಂ ಮತ್ತು ಪ್ರಾದೇಶಿಕ ಮುಖ್ಯಸ್ಥ ದೇವರಾಜ್ ಆರ್. ಮಾತನಾಡಿ, 2025 ರ ಡಿಸೆಂಬರ್ ಅಂತ್ಯಕ್ಕೆ ಕೃಷಿ ಕ್ಷೇತ್ರದಲ್ಲಿ ಶೇ.74.26 ಪ್ರಗತಿ ಸಾಧನೆ ಮಾಡಿದ್ದು 2024 ನೇ ಸಾಲಿಗಿಂತ ಶೇ.31.26 ಪ್ರಗತಿ ಸಾಧಿಸಲಾಗಿದೆ. ಎಂಎಸ್‌ಎಂಇ ವಲಯದಲ್ಲಿ ಶೇ.80.03 ಪ್ರಗತಿ ಸಾಧಿಸಿದ್ದು, 2024 ನೇ ಸಾಲಿಗಿಂತ ಶೇ.11.49 ಹೆಚ್ಚು ಪ್ರಗತಿ ಸಾಧಿಸಲಾಗಿದೆ. ವಸತಿ ಸಾಲ ವಿತರಣೆ ಪ್ರಗತಿ ಕಡಿಮೆಯಾಗಿದ್ದು, ಆದ್ಯತೆ ಮೇಲೆ ಸಾಲ ವಿತರಣೆಗೆ ಬ್ಯಾಂಕುಗಳು ಕ್ರಮ ವಹಿಸಬೇಕು. ಪಿಎಂ ವಿಶ್ವಕರ್ಮ ಯೋಜನೆಯಡಿ ತಿರಸ್ಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ, ಮಂಜೂರು ಮಾಡಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಜಿ.ಪಂ ಸಿಇಓ ಹೇಮಂತ್ ಎನ್. ಮಾತನಾಡಿ, ಬ್ಯಾಂಕುಗಳು ಪ್ರಧಾನಮಂತ್ರಿ ವಿಶ್ವಕರ್ಮ, ಮುದ್ರಾ ಸೇರಿದಂತೆ ಪಿಎಂ ಸಾಲ/ಸೌಲಭ್ಯ ನೀಡುವ ಯೋಜನೆಗಳಡಿ ಬಂದಂತಹ ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಮಂಜೂರು ಮಾಡಬೇಕು. ಪಿ.ಎಂ. ವಿಶ್ವಕರ್ಮ ಯೋಜನೆಯಡಿ 10994 ಅರ್ಜಿಗಳು ಸ್ವೀಕೃತವಾಗಿದ್ದು 5169 ಅರ್ಜಿಗಳು ಮಂಜೂರಾಗಿವೆ. ಶೇ.50 ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಇದಕ್ಕೆ ಸಮರ್ಪಕವಾದ ಕಾರಣಗಳನ್ನು ಒದಗಿಸುವ ವರದಿಯನ್ನು ಬ್ಯಾಂಕುವಾರು ನೀಡಬೇಕು. ವಿವಿಧ ಯೋಜನೆಯಡಿ ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

 ಪಿ ಎಂ ಸ್ವನಿಧಿ ಯೋಜನೆಯಡಿ ಮೊದಲನೇ ಹಂತದ ಸಾಲ ವಿತರಣೆ ಪ್ರಗತಿ ಚೆನ್ನಾಗಿದೆ. 2 ಮತ್ತು ಮೂರನೇ ಭಾಗದ ಸಾಲ ಪ್ರಗತಿ ಮತ್ತು ಪ್ರಕ್ರಿಯೆ ನಿಧಾನವಾಗಿದೆ. ಇದನ್ನು ಚುರುಕುಗೊಳಿಸಿ, ಪ್ರಗತಿ ಸಾಧಿಸಬೇಕು ಎಂದು ಸೂಚನೆ ನೀಡಿದರು.

ಎಲ್ಲ ಬ್ಯಾಂಕುಗಳು ಕಿಸಾನ್ ಕ್ರೆಡಿಟ್ ಕಾಡ್‌ಗಳನ್ನು ಸಮರ್ಪಕವಾಗಿ ನಿಗದಿತ ಗುರಿಯನ್ವಯ ವಿತರಣೆ ಮಾಡಬೇಕು. ಪ್ರಗತಿ ಸಾಧಿಸದ, ಹಾಗೂ ಕಡಿಮೆ ಪ್ರಗತಿ ಮಾಡಿರುವ ಬ್ಯಾಂಕುಗಳು ಈ ಕುರಿತು ಕೂಡಲೇ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಹಣಕಾಸು ಸಾಕ್ಷರತಾ ಕೇಂದ್ರ(ಎಫ್‌ಎಲ್‌ಸಿ)ಗಳು ಹಾಗೂ ಸೆಂಟರ್ ಫಾರ್ ಫೈನಾನ್ಶಿಯಲ್ ಲಿಟರಸಿಗಳು ಪರಿಣಾಮಕಾರಿಯಾಗಿ ಆಯ್ದ ಸ್ಥಳಗಳಲ್ಲಿ ಶಿಬಿರಗಳನ್ನು, ಸಭೆಗಳನ್ನು ನಡೆಸಿ ಬ್ಯಾಂಕ್ ಖಾತೆ ತೆರೆಯುವುದು, ವಿವಿಧ ಯೋಜನೆಗಳು ಸೇರಿದಂತೆ ಹಣಕಾಸು ವಿಷಯದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

ಸಭೆಯಲ್ಲಿ ಪಿಎಂಇಜಿಪಿ, ಪಿಎಂ ಸೂರ್ಯ ಘರ್ ಪಿಎಂ ಎಫ್‌ಎಂಇ ಯೋಜನೆಯಡಿ 15 ಫಲಾನುಭವಿಗಳಿಗೆ ಶಾಮಿಯಾನ, ರೋಟಿ ಮೇಕರ್, ಶಿಕ್ಷಣಕ್ಕೆ ಸಂಬಂಧಿಸಿದ ಸಾಲದ ಚೆಕ್‌ ವಿತರಿಸಲಾಯಿತು.

ಸಭೆಯಲ್ಲಿ ಆರ್‌ಬಿಐ ಲೀಡ್ ಜಿಲ್ಲಾ ಅಧಿಕಾರಿ ಸೂರಜ್ ಎಸ್, ನಬಾರ್ಡ್ ಜಿಲ್ಲಾ ಅಭಿವೃದ್ದಿ ಪ್ರಬಂಧಕ ಶರತ್ ಗೌಡ, ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಪಿ, ವಿವಿಧ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular