ಬೆಂಗಳೂರು: ತಂಪಾದ ಹವಾಮಾನಕ್ಕೆ ಹೆಸರಾಗಿದ್ದ ‘ಸಿಲಿಕಾನ್ ಸಿಟಿ’ ಬೆಂಗಳೂರು ಈಗ ‘ಹಾಟ್ ಸಿಟಿ’ಯಾಗಿ ಬದಲಾಗುತ್ತಿದೆ. ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆಯೇ ನಗರದಲ್ಲಿ ಬಿಸಿಲಿನ ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ನಗರಕ್ಕೆ ‘ಹೀಟ್ ವೇವ್’ ಮುನ್ಸೂಚನೆ ನೀಡಿದೆ. ಸೂರ್ಯನ ಪ್ರಖರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನಗರವಾಸಿಗಳು ಬೆವತು ಬಸವಳಿಯುತ್ತಿದ್ದು, ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮಾರ್ಗಸೂಚಿ ಪ್ರಕಟಿಸಿದೆ.
ಹೌದು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹವಾಮಾನ ಇಲಾಖೆಯು ನಗರಕ್ಕೆ ಗರಿಷ್ಠ ತಾಪಮಾನದ ಎಚ್ಚರಿಕೆ ನೀಡಿದೆ. ಮಾರ್ಚ್ ಎರಡನೇ ವಾರದ ನಂತರ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗಲಿದ್ದು, ಬೆಂಗಳೂರಿನ ತಾಪಮಾನವು 38 ರಿಂದ 39 ಡಿಗ್ರಿಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ಹೆಚ್ಚುತ್ತಿರುವ ತಾಪಮಾನದಿಂದಾಗಿ ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.ಮಧ್ಯಾಹ್ನ ಬೆಳಗ್ಗೆ11ರಿಂದ ಸಂಜೆ4 ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ವಿಶೇಷ ಎಚ್ಚರಿಕೆ: ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳದಂತೆ ವೈದ್ಯರು ಸೂಚಿಸಿದ್ದಾರೆ.ಹೆಚ್ಚಾಗಿ ನೀರು, ತಂಪು ಪಾನೀಯಗಳು ಮತ್ತು ಹಣ್ಣುಗಳನ್ನು ಸೇವಿಸುವ ಮೂಲಕ ದೇಹದ ತಾಪಮಾನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಲಹೆ ನೀಡಲಾಗಿದೆ.
ಬೆಂಗಳೂರು ಮಾತ್ರವಲ್ಲದೆ ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಒಣ ಹವೆ ಮುಂದುವರಿಯಲಿದ್ದು, ಕರಾವಳಿ ಭಾಗದಲ್ಲೂ ಉಷ್ಣಾಂಶ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ.
ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ನೀಡಿರುವ ಪ್ರಮುಖ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸಲಹೆಗಳು
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು:
- ಹೆಚ್ಚು ನೀರು ಕುಡಿಯಿರಿ: ಬಾಯಾರಿಕೆ ಆಗದಿದ್ದರೂ ಸಹ ನಿಯಮಿತವಾಗಿ ನೀರು ಕುಡಿಯುತ್ತಿರಿ. ದೇಹದಲ್ಲಿ ನೀರಿನಂಶ (Hydration) ಕಾಪಾಡಿಕೊಳ್ಳುವುದು ಅತ್ಯಗತ್ಯ.
- ಸರಿಯಾದ ಸಮಯದ ಸಂಚಾರ: ಮಧ್ಯಾಹ್ನ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಬಿಸಿಲು ಅತಿ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ.
- ಉಡುಪುಗಳ ಆಯ್ಕೆ: ತಿಳಿ ಬಣ್ಣದ, ಸಡಿಲವಾದ ಹತ್ತಿ (Cotton) ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ, ಟೋಪಿ ಅಥವಾ ಸನ್ ಗ್ಲಾಸ್ ಬಳಸಿ.
- ಆಹಾರ ಕ್ರಮ: ಎಳನೀರು, ಮಜ್ಜಿಗೆ, ಹಣ್ಣಿನ ರಸ ಮತ್ತು ಓಆರ್‌ಎಸ್ (ORS) ನಂತಹ ಪಾನೀಯಗಳನ್ನು ಸೇವಿಸಿ. ಕೆಫೀನ್ (ಕಾಫಿ/ಟೀ) ಮತ್ತು ಅತಿಯಾದ ಸಕ್ಕರೆ ಅಂಶವಿರುವ ಪಾನೀಯಗಳನ್ನು ಆದಷ್ಟು ಕಡಿಮೆ ಮಾಡಿ.
- ಮಕ್ಕಳು ಮತ್ತು ವೃದ್ಧರ ಗಮನಹರಿಸಿ: ಮನೆಯಲ್ಲಿರುವ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರು ಬಿಸಿಲಿನ ಬೇಗೆಗೆ ಬೇಗನೆ ತುತ್ತಾಗುವ ಸಾಧ್ಯತೆ ಇರುವುದರಿಂದ ಅವರಿಗೆ ಹೆಚ್ಚಿನ ಕಾಳಜಿ ನೀಡಿ.
- ವಾಹನಗಳಲ್ಲಿ ಎಚ್ಚರಿಕೆ: ನಿಲ್ಲಿಸಿದ ಕಾರು ಅಥವಾ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಏಕಾಂಗಿಯಾಗಿ ಬಿಟ್ಟು ಹೋಗಬೇಡಿ; ತಾಪಮಾನ ಏರಿಕೆಯಿಂದ ಉಸಿರುಗಟ್ಟುವಿಕೆ ಸಂಭವಿಸಬಹುದು.
ಗಮನಿಸಿ: ತಲೆನೋವು, ತಲೆಸುತ್ತು ಅಥವಾ ಅತಿಯಾದ ಸುಸ್ತು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಥವಾ ಹತ್ತಿರದ ನೆರಳಿನ ಪ್ರದೇಶಕ್ಕೆ ತೆರಳಿ ವಿಶ್ರಾಂತಿ ಪಡೆಯಿರಿ.

