ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರವೂ ಭಾರಿ ಚರ್ಚೆಯಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆಗೆ ಹಲವು ಸಚಿವರು, ಶಾಸಕರು ಹಾಗೂ ಎಂಎಲ್ ಸಿಗಳೂ ದೆಹಲಿಗೆ ಪ್ರಯಾಣಿಸಿದ್ದಾರೆ.
ಒಂದೆಡೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಜೋರಾಗಿ ನಡೆಯುತ್ತಿದ್ದರೆ ಮತ್ತೊಂದೆಡೆ ಸಚಿವ ಸಂಪುಟ ಪುನಾರಚನೆ ಮಾತುಗಳು ಮುನ್ನೆಲೆಗೆ ಬಂದಿವೆ. ಹೈಕಮಾಂಡ್ ಬುಲಾವ್ ಮೇರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಹೈಕಮಾಂಡ್ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಹಾಗೂ ಸಂಪುಟ ಪುನಾರಚನೆ ವಿಚಾರದ ಬಗ್ಗೆ ಅಂತಿಮ ನಿರ್ಧಾರವಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಈ ನಡುವೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಪ್ರಯಣದ ಬೆನ್ನಲ್ಲೇ 8 ಸಚಿವರು, 17 ಶಾಸಕರು ಹಾಗೂ ಎಂ ಎಲ್ ಸಿಗಳು ಕೂಡ ದೆಹಲಿಗೆ ತೆರಳಿದ್ದಾರೆ. ಸಚಿವರುಗಳು ತಮ್ಮ ಸ್ಥಾನ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದರೆ ಶಾಸಕರು ತಮಗೆ ಮಂತ್ರಿ ಸ್ಥಾನದ ಬೇಡಿಕೆ ಮುಂದಿಡಲು ಹೈಕಮಾಂಡ್ ನಾಯಕರನ್ನು ಭೇಟಿಗೆ ನಿರ್ಧರಿಸಿದ್ದಾರೆ.
ಸಚಿವರಾದ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಭೈರತಿ ಸುರೇಶ್, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ, ಹೆಚ್.ಸಿ.ಮಹದೇವಪ್ಪ. ಹೆಚ್.ಕೆ.ಪಾಟೀಲ್, ಕೆ.ವೆಂಕಟೇಶ್, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ನರೇಂದ್ರ ಸ್ವಾಮಿ, ರಾಘವೇಂದ್ರ ಹಿಟ್ನಾಳ್, ರುದ್ರಪ್ಪ ಲಮಾಣಿ, ಅಶೋಕ್ ಪಟ್ಟಣ್, ಪುಟ್ಟರಂಗಶೆಟ್ಟಿ, ಬಿ.ಆರ್.ಪಾಟೀಲ್, ಪೊನ್ನಣ್ಣ, ಶರತ್ ಬಚ್ಚೆಗೌಡ, ಡಾ.ರಂಗನಾಥ್ ಮೊದಲಾದವರು ದೆಹಲಿಗೆ ಪ್ರಯಾಣಿಸಿದ್ದಾರೆ.
ಇನ್ನು ಎಂಎಲ್ ಸಿಗಳಾದ ಶರಣಗೌಡ ಬಯ್ಯಾಪುರ, ವಸಂತ್ ಕುಮಾರ್, ನಾಗರಾಜ್ ಯಾದವ್, ಬಸನಗೌಡ ಬಾದರ್ಲಿ, ಡಿ.ತಿಮ್ಮಯ್ಯ, ಪುಟ್ಟಣ್ಣ, ಬಸವರಾಜ್ ಇಟಗಿ, ಎಂ.ಆರ್.ಸೀತಾರಾಮ್ ಸೇರಿದಂತೆ ಹಲವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಒಟ್ಟಾರೆ ಸಿಎಂ, ಡಿಸಿಎಂ ಸೇರಿದಂತೆ ಬಹುತೇಕ ಸಚಿವರು, ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಹೈಕಮಾಂಡ್ ನಾಯಕರ ಸಭೆ ಕುತೂಹಲ ಮೂಡಿಸಿದೆ. ಸಭೆಯಲ್ಲಿ ನಾಯಕತ್ವ ಬದಲಾವಣೆಯ ಗೊಂದಲಗಳಿಗೆ ತೆರೆ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

