ನವದೆಹಲಿ: ದೇಶಾದ್ಯಂತ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಯುಪಿಐ (UPI) ಆಧಾರಿತ ಕ್ಯೂಆರ್ ಕೋಡ್ ಸ್ಕ್ಯಾಮ್‌ಗಳು ಕೂಡ ವಿಪರೀತವಾಗಿ ಹೆಚ್ಚುತ್ತಿವೆ. ಶಾಪಿಂಗ್ ಮಾಲ್‌ಗಳು, ಸಣ್ಣ ಅಂಗಡಿಗಳು, ರೆಸ್ಟೋರೆಂಟ್‌ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ಸಾಮಾನ್ಯವಾಗಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು, ಅಸಲಿ ಕ್ಯೂಆರ್ ಕೋಡ್ ಮೇಲೆ ತಮ್ಮ ನಕಲಿ ಕೋಡ್‌ಗಳನ್ನು ಅಂಟಿಸಿ ಗ್ರಾಹಕರ ಹಣವನ್ನು ದೋಚುತ್ತಿದ್ದಾರೆ.
ವಂಚನೆ ನಡೆಯುವುದು ಹೇಗೆ? ಸಾಮಾನ್ಯವಾಗಿ ಗ್ರಾಹಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಪಿನ್ (UPI PIN) ನಮೂದಿಸಿದರೆ, ಹಣ ನೇರವಾಗಿ ವರ್ತಕರ ಖಾತೆಗೆ ಹೋಗುತ್ತದೆ. ಆದರೆ ನಕಲಿ ಕ್ಯೂಆರ್ ಕೋಡ್ ಸಂದರ್ಭದಲ್ಲಿ, ಆ ಹಣ ವರ್ತಕನಿಗೆ ತಲುಪುವ ಬದಲು ನೇರವಾಗಿ ವಂಚಕರ ಖಾತೆಗೆ ಜಮೆಯಾಗುತ್ತದೆ. ಪಾವತಿ ಪೂರ್ಣಗೊಂಡ ನಂತರ ಅಥವಾ ಅಂಗಡಿಯವರು ಹಣ ಬಂದಿಲ್ಲ ಎಂದು ಹೇಳಿದಾಗ ಮಾತ್ರ ಗ್ರಾಹಕರಿಗೆ ತಾವು ಮೋಸ ಹೋಗಿರುವುದು ಅರಿವಿಗೆ ಬರುತ್ತದೆ.
ಹಣ ವಾಪಸ್ ಪಡೆಯುವುದು ಹೇಗೆ? ಇಂತಹ ವಹಿವಾಟುಗಳು ಯಶಸ್ವಿ ಪಾವತಿಗಳಾಗಿ ದಾಖಲಾಗುವುದರಿಂದ, ಹಣ ತಾನಾಗಿಯೇ ಮರಳಿ ಬರುವುದಿಲ್ಲ. ಆದರೆ, ನೀವು ತಕ್ಷಣವೇ ಎಚ್ಚೆತ್ತುಕೊಂಡರೆ ಹಣವನ್ನು ಮರುಪಡೆಯಲು ಅವಕಾಶವಿದೆ:
- ತಕ್ಷಣವೇ ವರದಿ ಮಾಡಿ: ಮೋಸ ನಡೆದಿರುವುದು ಗೊತ್ತಾದ ಕೂಡಲೇ ಬಳಸಿದ ಯುಪಿಐ ಆ್ಯಪ್‌ನಲ್ಲಿ ಆ ವಹಿವಾಟನ್ನು (Transaction) ‘ರಿಪೋರ್ಟ್’ ಮಾಡಿ.
- ಬ್ಯಾಂಕ್‌ಗೆ ಮಾಹಿತಿ ನೀಡಿ: ನಿಮ್ಮ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ (Customer Care) ಕರೆ ಮಾಡಿ, ಟ್ರಾನ್ಸಾಕ್ಷನ್ ಐಡಿ (Transaction ID), ಹಣದ ಮೊತ್ತ ಮತ್ತು ದಿನಾಂಕದಂತಹ ವಿವರಗಳನ್ನು ಒದಗಿಸಿ ದೂರು ದಾಖಲಿಸಿ.
- ಸೈಬರ್ ಪೋರ್ಟಲ್: ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್ (cybercrime.gov.in) ಅಥವಾ 1930 ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಿ.
ನೀವು ಎಷ್ಟು ಬೇಗ ದೂರು ನೀಡುತ್ತೀರೋ, ಅಷ್ಟು ಬೇಗ ಆ ಖಾತೆಯನ್ನು ಬ್ಲಾಕ್ ಮಾಡಿ ಹಣವನ್ನು ತಡೆಹಿಡಿಯಲು ಸಾಧ್ಯವಾಗುತ್ತದೆ. ಆದರೆ, ವಂಚಕರು ಹಣವನ್ನು ಈಗಾಗಲೇ ಖಾತೆಯಿಂದ ತೆಗೆದಿದ್ದರೆ, ಹಣ ಮರುಪಡೆಯುವುದು ಕಷ್ಟವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳು:
- ಪಾವತಿಗೆ ಮುನ್ನ ಸ್ಕ್ರೀನ್ ಮೇಲೆ ಕಾಣಿಸುವ ರಿಸೀವರ್ (ಖಾತೆದಾರನ) ಹೆಸರನ್ನು ಖಚಿತಪಡಿಸಿಕೊಳ್ಳಿ.
- ಅನುಮಾನಾಸ್ಪದ ಅಥವಾ ಅಪರಿಚಿತರು ಅಂಟಿಸಿದ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಬೇಡಿ.
- ಸಾಧ್ಯವಾದಷ್ಟು ನಂಬಿಕಸ್ತ ಖಾತೆಗಳಿಗೆ ಮಾತ್ರ ಪಾವತಿ ಮಾಡಿ.
- ನಿಮ್ಮ ಯುಪಿಐ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

