ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಹೆಚ್.ವೈ.ಮೇಟಿ ನಿಧನದ ಕಾರಣ ಉಪ ಚುನಾವಣೆ ಎದುರಾಗಿದ್ದು, ಏಪ್ರಿಲ್ 9ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 23 ಕೊನೆಯ ದಿನವಾಗಿದೆ.
ಉಪ ಚುನಾವಣೆ ದಿನಾಂಕ ಭಾನುವಾರ ಘೋಷಣೆಯಾಗಿದೆ. ಆದರೆ ಶನಿವಾರ ಬಾಗಲಕೋಟೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಲ್ಲಿಕಾರ್ಜುನ ಚರಂತಿಮಠ ನಿವಾಸಕ್ಕೆ ಭೇಟಿ ನೀಡಿದ್ದು, ಉಪ ಚುನಾವಣೆಗೆ ಟ್ವಿಸ್ಟ್ ನೀಡಿದೆ.
ಮಾಜಿ ಶಾಸಕ ವೀರಣ್ಣ ಚರಂತಿಮಠ ಸಹೋದರ ಮಲ್ಲಿಕಾರ್ಜುನ ಚರಂತಿಮಠ 2023ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷ ವೀರಣ್ಣ ಚರಂತಿಮಠಗೆ ಟಿಕೆಟ್ ನೀಡಿದ ಕಾರಣಕ್ಕೆ ಬಂಡಾಯದ ಬಾವುಟ ಹಾರಿಸಿದ್ದರು.
ಚುನಾವಣೆಯಲ್ಲಿ ವೀರಣ್ಣ ಚರಂತಿಮಠ ವಿರುದ್ಧ ಮಲ್ಲಿಕಾರ್ಜುನ ಚರಂತಿಮಠ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಮಲ್ಲಿಕಾರ್ಜುನ ಚರಂತಿಮಠ 10,116 ಮತಗಳನ್ನು ಪಡೆದು 3ನೇ ಸ್ಥಾನವನ್ನು ಗಳಿಸಿದರು.
ಬಿಜೆಪಿಯ ವೀರಣ್ಣ ಚರಂತಿಮಠ 73,458 ಮತಗಳನ್ನು ಪಡೆದು ಸೋತರು. ಕಾಂಗ್ರೆಸ್‌ನ ಹೆಚ್.ವೈ.ಮೇಟಿ 79,336 ಮತಗಳನ್ನು ಪಡೆದು ಜಯಗಳಿಸಿದರು. ಈಗ ಉಪ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಚರಂತಿಮಠ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಎಂಬ ಸುದ್ದಿ ಹಬ್ಬಿತ್ತು.
ಆದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಲ್ಲಿಕಾರ್ಜುನ ಚರಂತಿಮಠ ನಿವಾಸಕ್ಕೆ ಭೇಟಿ ನೀಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ಮಲ್ಲಿಕಾರ್ಜುನ ಚರಂತಿಮಠ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಹೇಳುವ ಮೂಲಕ ಟ್ವಿಸ್ಟ್ ನೀಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ: ಹೆಚ್.ವೈ.ಮೇಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತರು. ಆದ್ದರಿಂದ ಬಾಗಲಕೋಟೆ ಉಪ ಚುನಾವಣೆ ಗೆಲ್ಲುವುದು ಕಾಂಗ್ರೆಸ್ ಪಕ್ಷದ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಉಪ ಚುನಾವಣೆ ಕುರಿತು ಸಿದ್ದರಾಮಯ್ಯ ಮಾತನಾಡಿ, “ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೆಚ್.ವೈ ಮೇಟಿ ಕುಟುಂಬದವರೂ ಒಬ್ಬರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದೇ ಕುಟುಂಬದಿಂದ ಎಷ್ಟು ಜನ ಕೇಳಿದರೂ ಒಬ್ಬರಿಗೆ ಹೈಕಮಾಂಡ್ ಟಿಕೆಟ್ ನೀಡುವುದು. ಉಪಚುನಾವಣೆಗೆ ಎಲ್ಲಾ ತಯಾರಿ ನಡೆದಿದ್ದು, ನಾವು ಅದಕ್ಕೆ ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಚರಂತಿಮಠ 2024ರ ಲೋಕಸಭೆ ಚುನಾವಣೆ ಸಮಯದಿಂದಲೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರಿಲ್ಲ. ಈಗ ಬಾಗಲಕೋಟೆ ಉಪ ಚುನಾವಣೆ ಎದುರಾಗಿದ್ದು, ಅವರು ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಬಾಗಲಕೋಟೆ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್‌ಗಾಗಿ ಹೆಚ್.ವೈ.ಮೇಟಿ ಪುತ್ರ ಮಲ್ಲಿಕಾರ್ಜುನ ಮೇಟಿ, ಉಮೇಶ್ ಮೇಟಿ ಆಕಾಂಕ್ಷಿಗಳು. ಪಕ್ಷದಲ್ಲೂ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಾಯವಿದೆ. ಸಿದ್ದರಾಮಯ್ಯ ಹೇಳಿದವರು ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ, ಈ ವಾರವೇ ಅಭ್ಯರ್ಥಿ ಅಂತಿಮಗೊಳ್ಳುವ ನಿರೀಕ್ಷೆ ಇದೆ.

