ಹಾವೇರಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಜಗಳ ವಿಕೋಪಕ್ಕೆ ತಿರುಗಿ, ತಮ್ಮನೇ ಸ್ವಂತ ಅಣ್ಣನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ನಡೆದಿದೆ.
ಮೃತರನ್ನು ಸಂತೋಷ್ ಮುರೇಗಪ್ಪ (30) ಎಂದು ಗುರುತಿಸಲಾಗಿದೆ. ಅವರ ತಮ್ಮ ಕುಮಾರ್ (27) ಕೊಲೆ ಆರೋಪಿಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಸಂತೋಷ್ ಹಾಗೂ ಕುಮಾರ್ ನಡುವೆ ಒಂದು ಎಕರೆ ಜಮೀನಿನ ವಿಚಾರವಾಗಿ ಕೆಲ ದಿನಗಳ ಹಿಂದೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವೈಮನಸ್ಸು ಮುಂದುವರಿದಿತ್ತು ಎನ್ನಲಾಗಿದೆ.ಈ ನಡುವೆ ಸಂತೋಷ್ ಊರಿಗೆ ಬಂದಿದ್ದ ವೇಳೆ ಕುಮಾರ್ ಆತನೊಂದಿಗೆ ಮತ್ತೆ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕುಮಾರ್ ಕಲ್ಲಿನಿಂದ ಸಂತೋಷ್ಗೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಸಂತೋಷ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಘಟನೆ ಸಂಬಂಧ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆಸ್ತಿ ವಿವಾದವೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.

