ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಅಪರಿಚಿತರು ಮಕ್ಕಳಿಗೆ ಚಾಕೊಲೇಟ್, ಚಿಪ್ಸ್ ಸೇರಿದಂತೆ ತಿನಿಸುಗಳ ಆಸೆ ತೋರಿಸಿ ತಮ್ಮೊಂದಿಗೆ ಕರೆದುಕೊಂಡು ಹೋಗಲು ಯತ್ನಿಸುತ್ತಿರುವ ಘಟನೆಗಳು ಪೋಷಕರಲ್ಲಿ ಆತಂಕ ಮೂಡಿಸಿವೆ. ಕೆಲ ಮಕ್ಕಳು ಸಮಯಪ್ರಜ್ಞೆಯಿಂದ ಮನೆಗೆ ಓಡಿ ಬಂದು ವಿಷಯವನ್ನು ಪೋಷಕರಿಗೆ ತಿಳಿಸಿದ್ದರಿಂದ ಸಂಭವಿಸಬಹುದಾದ ಅನಾಹುತ ತಪ್ಪಿದೆ ಎಂದು ವರದಿಯಾಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ವೈಭವಲಕ್ಷ್ಮಿ ಬಡಾವಣೆ ಹಾಗ ಛತ್ರ ರಸ್ತೆ ಸಮೀಪ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಅಪರಿಚಿತ ವ್ಯಕ್ತಿಗಳು ಮಕ್ಕಳನ್ನು ಮಾತಿಗೆ ಕರೆದುಕೊಂಡು ಚಾಕೊಲೇಟ್ ಹಾಗೂ ಚಿಪ್ಸ್ ನೀಡಲು ಯತ್ನಿಸಿದ್ದಾರೆ. ಇದರಿಂದ ಹೆದರಿದ ಮಕ್ಕಳು ತಕ್ಷಣ ಮನೆಗೆ ಓಡಿ ಹೋಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿದೆ.
ಪೋಷಕರಿಗೆ ಸಲಹೆ
ಮಕ್ಕಳನ್ನು ಗುರಿಯಾಗಿಸಿಕೊಂಡು ಅಪರಿಚಿತರು ಸ್ನೇಹ ಬೆಳೆಸುವ ಪ್ರಯತ್ನ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಶಾಲೆಗೆ ಹೋಗುವ ಹಾಗೂ ಮನೆಗೆ ಮರಳುವ ಸಮಯದಲ್ಲಿ ಮಕ್ಕಳ ಮೇಲೆ ವಿಶೇಷ ನಿಗಾ ಇರಿಸುವಂತೆ, ಅಪರಿಚಿತರಿಂದ ಯಾವುದೇ ಆಹಾರ, ಉಡುಗೊರೆ ಅಥವಾ ತಿನಿಸುಗಳನ್ನು ಸ್ವೀಕರಿಸದಂತೆ ಮಕ್ಕಳಿಗೆ ತಿಳಿಹೇಳುವಂತೆ ಸಲಹೆ ನೀಡಲಾಗಿದೆ.
ಮಕ್ಕಳು ಯಾವುದೇ ಅನುಮಾನಾಸ್ಪದ ವ್ಯಕ್ತಿಯನ್ನು ಕಂಡರೂ ಅಥವಾ ಯಾರಾದರೂ ಮಾತನಾಡಲು, ವಾಹನದಲ್ಲಿ ಕೂರಿಸಿಕೊಳ್ಳಲು ಅಥವಾ ತಿನಿಸು ನೀಡಲು ಯತ್ನಿಸಿದರೆ ಕೂಡಲೇ ಪೋಷಕರು, ಶಿಕ್ಷಕರು ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಶಾಲೆಗಳ ಸುತ್ತಮುತ್ತ ಗಸ್ತು ಹೆಚ್ಚಿಸಿದ್ದು, ಸಾರ್ವಜನಿಕರೂ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

