HomeKarnatakaಸರ್ಕಾರಿ ಪ್ರೌಢಶಾಲೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ: ಶೂ-ಸಾಕ್ಸ್ ಗುಣಮಟ್ಟ ಪರಿಶೀಲನೆ

ಸರ್ಕಾರಿ ಪ್ರೌಢಶಾಲೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ: ಶೂ-ಸಾಕ್ಸ್ ಗುಣಮಟ್ಟ ಪರಿಶೀಲನೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ನೂತನ ಹೃದ್ರೋಗ ಆಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಕಾರ್ಯವೈಖರಿ ಹಾಗೂ ವೈದ್ಯಕೀಯ ಸೌಕರ್ಯಗಳನ್ನು ಪರಿಶೀಲಿಸಿದರು.

ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಿಕಾರಿಪುರದಲ್ಲಿ ಕಾಂಗ್ರೆಸ್ ಯುವ ಘಟಕ ಆಯೋಜಿಸಿದ್ದ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಯಾವುದೇ ಮುನ್ಸೂಚನೆ ನೀಡದೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಹೃದ್ರೋಗ ವಿಭಾಗದ ವಿವಿಧ ಸೌಲಭ್ಯಗಳನ್ನು ಖುದ್ದಾಗಿ ಪರಿಶೀಲಿಸಿದರು.

ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಬಳಸಿ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ನಾಲ್ಕು ʻಮಾಡ್ಯುಲರ್ ಶಸ್ತ್ರಚಿಕಿತ್ಸಾ ಕೊಠಡಿʼಯನ್ನು (Modular OT) ಹಾಗೂ ಕ್ಯಾಥ್‌ಲ್ಯಾಬ್‌ (Cath Lab) ಸೌಕರ್ಯವನ್ನು ವೀಕ್ಷಿಸಿದ ಸಚಿವರು ಅಲ್ಲಿನ ಉಪಕರಣಗಳ ಗುಣಮಟ್ಟ ಹಾಗೂ ಲಭ್ಯವಿರುವ ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಹೃದ್ರೋಗ ವಿಭಾಗದ ಮುಖ್ಯಸ್ಥರು, ವಿಶೇಷ ಅಧಿಕಾರಿಗಳು ಹಾಗೂ ತಜ್ಞ ವೈದ್ಯರೊಂದಿಗೆ ಸಚಿವರು ಸಮಾಲೋಚನೆ ನಡೆಸಿ, ವಿಭಾಗದ ಕಾರ್ಯನಿರ್ವಹಣೆ, ಚಿಕಿತ್ಸಾ ವ್ಯವಸ್ಥೆ ಮತ್ತು ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ರೋಗಿಗಳಿಗೆ ತುರ್ತು ಚಿಕಿತ್ಸೆ ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.

 ಈ ಸಂದರ್ಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆಯ ಕುರಿತು ಮೆಡಿಕಲ್ ಡೀನ್ ಡಾ. ರಮೇಶ್ ಬಾಬು ಅವರು ಸಚಿವರ ಗಮನಕ್ಕೆ ತಂದರು. ಅಲ್ಲದೆ, ನಾಲ್ಕು ಮಾಡ್ಯುಲರ್ ಓಟಿ ಕೊಠಡಿಗಳಿಗೆ ಅಗತ್ಯವಿರುವ ಬಾಕಿ ಯಂತ್ರೋಪಕರಣಗಳನ್ನು ಅಳವಡಿಸಲು ಸುಮಾರು ₹6 ಕೋಟಿ ಅನುದಾನದ ಅಗತ್ಯವಿದೆ ಎಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಸಚಿವ ಮಧು ಬಂಗಾರಪ್ಪ ಅವರು, ಈ ಕುರಿತು ಲಿಖಿತ ಮನವಿ ಸಲ್ಲಿಸುವಂತೆ ಸೂಚಿಸಿದರು. ಬಳಿಕ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ, ಅಗತ್ಯ ಅನುದಾನವನ್ನು ಶೀಘ್ರವಾಗಿ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹೃದ್ರೋಗ ವಿಭಾಗಕ್ಕೆ ಚಿಕಿತ್ಸೆಗಾಗಿ ಹಾಗೂ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯಲು ಆಗಮಿಸುವ ಸಾರ್ವಜನಿಕರಿಗೆ ತುರ್ತಾಗಿ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಸರತಿ ಸಾಲಿನಲ್ಲಿ ರೋಗಿಗಳು ಬಳಲುವಂತಾಗಬಾರದು. ಈ ಸಂಬಂಧ ಸಾರ್ವಜನಿಕರು ನೀಡಿರುವ ದೂರುಗಳ ಬಗ್ಗೆ ಕೂಡಲೇ ಗಮನ ನೀಡಬೇಕೆಂದು ಆಸ್ಪತ್ರೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರೋಗಿಗಳನ್ನು ಭೇಟಿಯಾಗಿ, ಅವರಿಗೆ ದೊರೆಯುತ್ತಿರುವ ಚಿಕಿತ್ಸೆಯ ಬಗ್ಗೆ ವಿಚಾರಿಸಿದರು. ಒಳ್ಳೆಯ ಚಿಕಿತ್ಸೆ ಪಡೆದು ಗುಣಮುಖರಾಗುತ್ತೀರಿ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ, ಜಿಲ್ಲಾ ಸರ್ಜನ್ ಡಾಕ್ಟರ್ ನಾಗೇಶ್, ಮೆಡಿಕಲ್ ಡೀನ್ ಡಾ. ರಮೇಶ್ ಬಾಬು, ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಪರಮೇಶ್ವರ, ಹೃದಯ ರೋಗ ತಜ್ಞ ಡಾ. ಮಹೇಶ್ ಮೂರ್ತಿ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸರ್ಕಾರಿ ಪ್ರೌಢಶಾಲೆಗೂ ದಿಢೀರ್‌ ಭೇಟಿ: ಶೂ-ಸಾಕ್ಸ್‌ ಗುಣಮಟ್ಟ ಪರಿಶೀಲನೆ

ಈಸೂರಿಗೆ ತೆರಳುವ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಆಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ದಿಢೀರ್ ಭೇಟಿ ನೀಡಿ, ಶಾಲೆಯಲ್ಲಿನ ಶೈಕ್ಷಣಿಕ ಚಟುವಟಿಕೆ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿದರು.

ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದ ಸಚಿವರು, ಸರ್ಕಾರ ನೀಡಿದ ಶೂ ಮತ್ತು ಸಾಕ್ಸ್‌ ಎಲ್ಲರಿಗೂ ದೊರೆತಿದೆಯೇ ಎಂದು ವಿದ್ಯಾರ್ಥಿಗಳನ್ನೇ ಕೇಳಿದರು. ಅಲ್ಲದೆ, ಅವರಿಗೆ ನೀಡಲಾಗಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟ ಪರಿಶೀಲಿಸಿದರು. ʻʻತಮಗೆ ನೀಡಲಾಗಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟ ತೃಪ್ತಿಕರವಾಗಿದೆ. ಪೋಷಕರೂ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆʼʼ ಎಂದು ವಿದ್ಯಾರ್ಥಿಗಳು ಸಚಿವರಿಗೆ ಮಾಹಿತಿ ನೀಡಿದರು. ಶೂ-ಸಾಕ್ಸ್‌ನ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳಿರುವ ಹಿನ್ನೆಲೆಯಲ್ಲಿ ಸಚಿವರು ಈ ಬಗ್ಗೆ ಮಾಹಿತಿ ಪಡೆದುಕೊಂಡರು.

 ಈ ವೇಳೆ ವಿದ್ಯಾರ್ಥಿನಿಯೋರ್ವಳು ಶೌಚಾಲಯ ವ್ಯವಸ್ಥೆ ಸರಿಪಡಿಸುವಂತೆ ಸಚಿವರಲ್ಲಿ ಮಾನವಿ ಮಾಡಿಕೊಂಡಿದ್ದು, ಕೂಡಲೇ ಸಚಿವರು ಶಾಲೆಯ ನೈರ್ಮಲ್ಯ, ಶೌಚಾಲಯ ವ್ಯವಸ್ಥೆ, ಬಿಸಿಯೂಟದ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಶಾಲೆಯ ಮೇಲ್ಚಾವಣಿ ದುರಸ್ತಿ ಕಾರ್ಯ ವೀಕ್ಷಿಸಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular