ಶಿವಮೊಗ್ಗ: ನಾಡಹಬ್ಬ ಶಿವಮೊಗ್ಗ ದಸರಾ ಸಂಭ್ರಮಕ್ಕೆ ಗುರುವಾರ ರೈತ ಸಂಸ್ಕೃತಿಯ ಸೊಬಗು, ಕೃಷಿ ಪರಂಪರೆಯ ವೈಭವ ಹಾಗೂ ಗ್ರಾಮೀಣ ಬದುಕಿನ ಮೆರಗು ಮೇಳೈಸಿತು.
ಮಹಾನಗರ ಪಾಲಿಕೆ ದಸರಾ ಸಮಿತಿ ವತಿಯಿಂದ ಆಯೋಜಿಸಿದ್ದ ರೈತ ದಸರಾ ಅಂಗವಾಗಿ ನಡೆದ ರೈತರ ಜಾಥಾವು ನಗರದಲ್ಲಿ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಿತು.
ನಗರದ ಸೈನ್ಸ್ ಮೈದಾನದಿಂದ ಬೆಳಗ್ಗೆ ಆರಂಭವಾದ ರೈತ ದಸರಾ ಜಾಥಾಕ್ಕೆ ಜಿಲ್ಲೆಯ ಪ್ರಗತಿಪರ ರೈತ ಮಹಿಳೆ ಆಶಾರಾಣಿ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ, ರೈತ ಮುಖಂಡರಾದ ಕೆ.ಟಿ. ಗಂಗಾಧರ್, ಎಚ್.ಆರ್. ಬಸವರಾಜಪ್ಪ ಹಾಗೂ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ ಸಾಥ್ ನೀಡಿದರು.
ಮೆರವಣಿಗೆಗೆ ಚಾಲನೆ ನೀಡಿದ ನಂತರ ಪ್ರಗತಿಪರ ರೈತ ಮಹಿಳೆ ಆಶಾರಾಣಿ ಮಾತನಾಡಿ, ಶಿವಮೊಗ್ಗ ದಸರಾದಲ್ಲಿ ರೈತ ದಸರಾ ಆಚರಿಸುತ್ತಿರುವುದು ವಿಶೇಷ ಹಾಗೂ ಹೆಮ್ಮೆಯ ಸಂಗತಿ. ನಾಡಿನ ರೈತಾಪಿ ಬದುಕು ಉಳಿಯಬೇಕು, ಕೃಷಿಗೆ ಹೆಚ್ಚಿನ ಉತ್ತೇಜನ ದೊರೆಯಬೇಕು. ರೈತರ ಪರಿಶ್ರಮ ಮತ್ತು ಕೃಷಿ ಸಂಸ್ಕೃತಿಗೆ ಸಮಾಜದಲ್ಲಿ ಗೌರವ ಸಿಗಬೇಕು ಎಂದು ಆಶಿಸಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ರೈತರು ನಾಡಿನ ಬೆನ್ನೆಲುಬು. ರೈತರ ಬೆವರಿನ ಪರಿಶ್ರಮದಿಂದಲೇ ಸಮಾಜದ ಬದುಕು ಸಾಗುತ್ತಿದೆ. ಕೃಷಿ ವೈಭವವನ್ನು ಗೌರವಿಸುವುದು, ರೈತರ ಕೊಡುಗೆಯನ್ನು ಸ್ಮರಿಸುವುದು ಹಾಗೂ ಕೃಷಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ರೈತ ದಸರಾ ಆಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಬಳಿಕ ಸೈನ್ಸ್ ಮೈದಾನದಿಂದ ಹೊರಟ ರೈತ ಜಾಥಾವು ಬಿ.ಎಚ್. ರಸ್ತೆ, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ಸರ್ಕಲ್, ನೆಹರು ರಸ್ತೆ, ಗೋಪಿ ವೃತ್ತ, ಬಾಲರಾಜ ಅರಸ್ ರಸ್ತೆ ಹಾಗೂ ಮಹಾವೀರ ಸರ್ಕಲ್ ಮೂಲಕ ಸಾಗಿ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಕುವೆಂಪು ರಂಗಮಂದಿರ ತಲುಪಿತು.
ಎತ್ತಿನಗಾಡಿಗಳು, ಟಿಲ್ಲರ್ಗಳು ಹಾಗೂ ಟ್ರ್ಯಾಕ್ಟರ್ ಗಳು ಮೆರವಣಿಗೆಯಲ್ಲಿ ಸಾಗುವ ಮೂಲಕ ಕೃಷಿ ಬದುಕಿನ ಚಿತ್ರಣವನ್ನು ಅನಾವರಣಗೊಳಿಸಿದವು. ಡೊಳ್ಳು ಬಡಿತದ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಮೆರವಣಿಗೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ರೈತರ ಈ ಸಂಭ್ರಮವನ್ನು ಕುತೂಹಲದಿಂದ ವೀಕ್ಷಿಸಿ ಕಣ್ತುಂಬಿಕೊAಡರು.
ಜಾಥಾದಲ್ಲಿ ರೈತ ಸಂಘಟನೆಯ ಮುಖಂಡರಾದ ರಾಘವೇಂದ್ರ, ಡಿ.ಡಿ. ಶಿವಕುಮಾರ್, ವೈ.ಎಚ್. ನಾಗರಾಜ್, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದ್, ರೈತ ದಸರಾ ಕಾರ್ಯಕ್ರಮದ ಕಾರ್ಯದರ್ಶಿ ಆರ್. ವಿಕಾಸ್, ನಿವೃತ್ತ ಕಂದಾಯ ಅಧಿಕಾರಿ ನಾಗೇಂದ್ರ, ಪಾಲಿಕೆ ಪ್ರಮುಖರಾದ ವೀರಭದ್ರಪ್ಪ ಪೂಜಾರಿ, ಹೇಮಂತ್ ಡೊಳ್ಳಿನ್, ಅಂಜನ್ ಮೂರ್ತಿ, ಅನೀಶ್, ವಿಜಯ್ ಕುಮಾರ್, ಸುರೇಶ್ ಕುಮಾರ್, ಉಪ ಆಯುಕ್ತ ತುಷಾರ್, ಜಗದೀಶ್, ಸಂತೋಷ್, ಮಾರುತಿ, ಎಸ್.ಜಿ. ಮಂಜಣ್ಣ, ಚಂದನಾ, ಪ್ರತೀಕ್ಷಾ, ವರ್ಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಾರೆ ಜಾಥಾವು ರೈತರ ಬದುಕು, ಕೃಷಿ ಪರಂಪರೆ ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ನಗರದ ಜನತೆಗೆ ಪರಿಚಯಿಸಿದ ರೈತ ದಸರಾ ಮೆರವಣಿಗೆ, ನಾಡಿನ ಅನ್ನದಾತರ ಪರಿಶ್ರಮಕ್ಕೆ ಗೌರವ ಸಲ್ಲಿಸುವ ಸಾರ್ಥಕ ಕಾರ್ಯಕ್ರಮವಾಗಿ ಮೂಡಿಬಂತು.
ಕೃಷಿ ಪರಿಕರಗಳ ಪ್ರದರ್ಶನ ಉದ್ಘಾಟನೆ
‘ರೈತ ದಸರಾ ಜಾಥಾ’ ನಂತರ ಕುವೆಂಪು ರಂಗಮಂದಿರ ಆವರಣದಲ್ಲಿ ಆಯೋಜಿಸಿದ್ದ ‘ಕೃಷಿ ವಸ್ತು ಪ್ರದರ್ಶನ’ಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ ನೀಡಿದರು
ಕೃಷಿ ಪರಿಕರಗಳು, ಆಧುನಿಕ ತಂತ್ರಜ್ಞಾನ ಹಾಗೂ ಸಾವಯವ ಕೃಷಿ ಪದ್ಧತಿಗಳನ್ನೊಳಗೊಂಡ ರೈತ ದಸರಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ಮಳಿಗೆಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು, “ನಾಡಹಬ್ಬ ದಸರಾ ಮಹೋತ್ಸವದಲ್ಲಿ ರೈತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸಲು ಹಾಗೂ ರೈತರಿಗೆ ಆಧುನಿಕ ತಂತ್ರಜ್ಞಾನಗಳ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಇಂತಹ ವಸ್ತು ಪ್ರದರ್ಶನಗಳು ಸಹಕಾರಿಯಾಗಲಿವೆ. ಮಲೆನಾಡಿನ ಅನ್ನದಾತರ ಹಿತರಕ್ಷಣೆ ಹಾಗೂ ಕೃಷಿ ಪ್ರಗತಿಗೆ ನಾವು ಸದಾ ಬದ್ಧರಾಗಿದ್ದೇವೆ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ರೈತ ಮುಖಂಡರು ಮತ್ತು ರೈತ ಬಾಂಧವರು ಉಪಸ್ಥಿತರಿದ್ದರು.

