ಶಶಿ ತರೂರು ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ. ಆದರೆ ಆಪರೇಷನ್ ಸಿಂಧೂರ್ ಬಳಿಕ ಶಶಿ ತರೂರ್ ನಡೆಯನ್ನು ಕಾಂಗ್ರೆಸಿಗರು ಅಚ್ಚರಿಯಿಂದ ನೋಡುವಂತೆ ಮಾಡಿದೆ. ಅಗಾಧ ಇಂಗ್ಲಿಶ್ ಜ್ಞಾನ ಹೊಂದಿರುವ ಶಶಿ ತರೂರ್ ಮಾತು ಅರ್ಥ ಮಾಡಿಕೊಳ್ಳುವುದು ಎಷ್ಟು ಕಠಿಣವೋ?, ಅವರ ಮುಂದಿನ ನಡೆ ಅಂದಾಜಿಸುವುದು ಅಷ್ಟೇ ಸವಾಲಾಗಿದೆ.
ಆದರೆ ಈಗ ಕಾಂಗ್ರೆಸ್ ಮತ್ತು ಶಶಿ ತೂರೂರ್ ನಡುವೆ ಕದನ ವಿರಾಮ ಏರ್ಪಟ್ಟಿದೆ. 4 ದಿನಗಳ ಹಿಂದೆ ಶಶಿ ತರೂರ್ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದರು. ಈ ಚಿತ್ರಗಳು ಈಗ ವೈರಲ್ ಆಗಿದೆ.
ಈ ಭೇಟಿಯ ಬಳಿಕ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್, “ಎಲ್ಲವೂ ಚೆನ್ನಾಗಿದೆ, ನಾವೆಲ್ಲರೂ ಈಗ ಒಂದೇ ಪುಟದಲ್ಲಿದ್ದೇವೆ” ಎಂದು ಹೇಳಿದ್ದಾರೆ. ತರೂರ್ ಕಾಂಗ್ರೆಸ್ ಪಕ್ಷ ಬಿಡಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಬಂದ ಮರುದಿನವೇ ಅವರು, “ಕೇರಳದಲ್ಲಿ ಯುಡಿಎಫ್ ಮೈತ್ರಿಕೂಟದ ಗೆಲುವಿಗೆ ನಾನು ಪ್ರಚಾರ ಮಾಡುತ್ತೇನೆ” ಎಂದು ಘೋಷಣೆ ಮಾಡಿದ್ದಾರೆ.
“ನಾನು ಎಲ್ಲಿಯೂ ಹೋಗುತ್ತಿಲ್ಲ, ಕಾಂಗ್ರೆಸ್ ಬಿಡುತ್ತಿಲ್ಲ. ಕೇರಳದ ಕಾಂಗ್ರೆಸ್ ಪ್ರಚಾರದ ಭಾಗವಾಗಿ ಇರುತ್ತೇನೆ. ಯುಡಿಎಫ್ ಜಯಕ್ಕಾಗಿ ಕೆಲಸ ಮಾಡುತ್ತೇನೆ” ಎಂದು ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ.
ಕೇರಳ ಕಾಂಗ್ರೆಸ್ ನಾಯಕ ವಿ.ಡಿ.ಸತೀಶನ್ ಸಹ ಈ ಕುರಿತು ಮಾತನಾಡಿ, “ಯುಡಿಎಫ್ ಪ್ರಚಾರದಲ್ಲಿ ಶಶಿ ತರೂರ್ ಅವರು ಮುಂಚೂಣಿಯಲ್ಲಿ ಇರಲಿದ್ದಾರೆ. ಅವರು ಕೇರಳ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಲಿದ್ದಾರೆ. 140 ಕ್ಷೇತ್ರಗಳಿಗೂ ನಾವು ಅವರನ್ನು ಕರೆದುಕೊಂಡು ಹೋಗತ್ತೇವೆ” ಎಂದು ಹೇಳಿದ್ದಾರೆ.
ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟದ 10 ವರ್ಷದ ಆಡಳಿತ ಕೊನೆಗೊಳಿಸಬೇಕು ಎಂಬ ಉತ್ಸಾಹದಲ್ಲಿ ಕಾಂಗ್ರೆಸ್ ಇದೆ. ಆಡಳಿತ ವಿರೋಧಿ ಅಲೆ ಇದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿನ ನಿರೀಕ್ಷೆಯಲ್ಲಿದೆ.
ವಯನಾಡು ಲೋಕಸಭೆ ಉಪ ಚುನಾವಣೆಯಲ್ಲಿ ಶಶಿ ತರೂರ್ ತಟಸ್ಥವಾಗಿದ್ದರು. ಆದರೆ ಕಾಂಗ್ರೆಸ್‌ನ ಪ್ರಿಯಾಂಕಾ ವಾದ್ರಾ ಗೆಲುವು ಸಾಧಿಸಿದರು. ಈಗ ಶಶಿ ತರೂರ್ ರಾಜ್ಯದಲ್ಲಿ ಯುಡಿಎಫ್ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಪ್ರಿಯಾಂಕಾ ವಾದ್ರಾ ಸಂಸತ್ ಸದಸ್ಯರಾಗಿರುವ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.
2025ರ ಫೆಬ್ರವರಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂಸದರ ನಿಯೋಗದಲ್ಲಿದ್ದ ಶಶಿ ತರೂರ್ ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದರು. ಬಳಿಕ ಹಲವು ಬಾರಿ ಅವರು ನರೇಂದ್ರ ಮೋದಿ ಹೊಗಳುವ ಮೂಲಕ ಕಾಂಗ್ರೆಸ್‌ನಿಂದ ದೂರವಾಗುವ ಸೂಚನೆ ಕೊಟ್ಟಿದ್ದರು.
“ಕೇರಳ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗುವ ಯಾವುದೇ ಆಲೋಚನೆಯಲ್ಲಿಲ್ಲ. ನಾನು ತಿರುವನಂತಪುರಂ ಕ್ಷೇತ್ರದ ಸಂಸದ. ನನ್ನ ಮತದಾರರನ್ನು ನಾವು ಗೌರವಿಸುತ್ತೇನೆ” ಎಂದು ಹೇಳುವ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುದ್ದಿಗಳನ್ನು ಶಶಿ ತರೂರ್ ನಿರಾಕರಿಸಿದ್ದಾರೆ.

