ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರು ಬಡವರು, ಕಷ್ಟದಲ್ಲಿರುವವರಿಗೆ ಟ್ರಸ್ಟ್ ಮೂಲಕ ನೆರವಾಗುವ ಕೊಡುಗೈದಾನಿಯಾಗಿದ್ದರು. ಪ್ರತಿಯೊಬ್ಬರಿಗೂ ಹುಟ್ಟು ಆಕಸ್ಮಿಕ, ಆದರೆ ಸಾವು ಖಚಿತ, ಈ ನಡುವಿನ ಪಯಣದಲ್ಲಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವುದು ಮುಖ್ಯ. ದು:ಖದಲ್ಲಿರುವವರಿಗೆ ಸದಾ ನೆರವಾಗುವ ಅವರ ಬದುಕು ನಿಜಕ್ಕೂ ಸಾರ್ಥಕ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ದಾವಣಗೆರೆಯ ಶ್ರೀ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಆಯೋಜಿಸಿದ್ದ ಹಿರಿಯ ಶಾಸಕರು, ಮಾಜಿ ಸಚಿವರು ಆದ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾಮನೂರು ಶಿವಶಂಕರಪ್ಪ ಅವರು ದೇಶ ಕಂಡ ಹಿರಿಯ ಶಾಸಕ, ಮಾಜಿ ಮಂತ್ರಿ ಹಾಗೂ ದಾವಣಗೆರೆಯ ನಗರಸಭೆ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಖಜಾಂಚಿಯಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರ ಜನ್ಮದಿನಾಚರಣೆಯಲ್ಲಿ ಹಾಗೂ ದಾಲ್ ಮಿಲ್ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದೆ. ಶ್ರೀಯುತರು ಶತಾಯುಷಿಗಳಾಗುತ್ತಾರೆ ಎಂಬ ನಂಬಿಕೆಯಿತ್ತು. ಅವರ ಅಗಲಿಕೆಯಿಂದ ನಾಡಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ. ತಮ್ಮ ಇಳಿವಯಸ್ಸಿನಲ್ಲಿಯೂ ಅವರು ಅತ್ಯಂತ ಕ್ರೀಯಾಶೀಲರಾಗಿದ್ದರು ಎಂದರು.
ಅವರು ವೀರಶೈವ ಮಹಾಸಭಾದ ರಾಷ್ಟ್ರಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಸರ್ಕಾರಿ ಕಚೇರಿಗಳಲ್ಲಿ ಜಗದ್ಗುರು ಬಸವಣ್ಣನವರ ಛಾಯಾಚಿತ್ರ ಕಡ್ಡಾಯಗೊಳಿಸುವ ನಮ್ಮ ತೀರ್ಮಾನವನ್ನು ಅಭಿನಂದಿಸಲು ನನಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು ಎಂದರು.
ಶಿವಶಂಕರಪ್ಪ ಅವರೊಬ್ಬ ಜಾತ್ಯತೀತ ಹಾಗೂ ಜನಪ್ರಿಯ ನಾಯಕ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಬಲ್ಯವಿಲ್ಲದಿದ್ದರೂ, ಆ ಕ್ಷೇತ್ರದಲ್ಲಿ ಜನಮನ್ನಣೆಗೆ ಪಾತ್ರರಾಗಿದ್ದರಲ್ಲದೇ, ಆರು ಬಾರಿ ಸತತವಾಗಿ ಆಯ್ಕೆಯಾಗಿದ್ದರು. ಸದಾ ಚೈತನ್ಯಶೀಲರಾಗಿದ್ದ ಶಾಮನೂರು ಶಿವಶಂಕರಪ್ಪನವರು ಮುಂದಿನ ಚುನಾವಣೆಯಲ್ಲಿಯೂ ಭಾಗವಹಿಸುವ ಹುರುಪನ್ನು ತೋರಿದ್ದರು. ಎಲ್ಲ ರಾಜಕೀಯ ಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರುವಾಗಿದ್ದರು ಎಂದರು.
ಕೇವಲ ಜವಳಿ ಕೇಂದ್ರವಾಗಿದ್ದ ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಬಾಪೂಜಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸಹಸ್ರಾರು ಜನರ ಬದುಕಿಗೆ ದಾರಿದೀಪವಾಗಿದ್ದರು. ಉದ್ಯಮಿಯಾಗಿ, ಕೈಗಾರಿಕೋದ್ಯಮಿಯಾಗಿ, ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾಗಿ, ರಾಜಕಾರಣಿಯಾಗಿ ಸುದೀರ್ಘ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಮಹಾನ್ ಚೇತನ ಶಾಮನೂರು ಶಿವಶಂಕರಪ್ಪನವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯಿಂದ ಬರೀ ಕಾಂಗ್ರೆಸ್ ಪಕ್ಷ ಅಥವಾ ಒಂದು ಸಮುದಾಯಕ್ಕಷ್ಟೇ ನಷ್ಟವಾಗಿಲ್ಲ, ಇಡೀ ಸಮಾಜ ಬಡವಾಗಿದೆ. ಜನಸೇವೆಯಲ್ಲಿ ಮಾಗಿದ ಜೀವ ಶಿವಶಂಕರಪ್ಪ ಅವರು ನನಗೂ ಆತ್ಮೀಯರಾಗಿದ್ದರು, ನನ್ನ ಮಂತ್ರಿ ಮಂಡಲದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಕೊಡುಗೆಗಳ ಮೂಲಕ ಅವರನ್ನು ನೆನೆಯೋಣ ಎಂದರು.

