ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಚಾರಗಳಲ್ಲಿ ತಮ್ಮ ನೇರ ಹಾಗೂ ನಿಷ್ಠುರ ಅಭಿಪ್ರಾಯಗಳಿಗೆ ಹೆಸರಾಗಿರುವ ಹಿರಿಯ ನಟ, ಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಧಾರಾವಾಹಿಯ ಭೀಷ್ಮ ಹಾಗೂ ಖ್ಯಾತ ‘ಶಕ್ತಿಮಾನ್’ ಖ್ಯಾತಿಯ ಮುಕೇಶ್ ಖನ್ನಾ, ಇದೀಗ ರಾಷ್ಟ್ರಗೀತೆ ‘ವಂದೇ ಮಾತರಂ’ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾರತದ ಧಾರ್ಮಿಕ ವೈವಿಧ್ಯತೆ ಮತ್ತು ಅನ್ಯಧರ್ಮೀಯರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ವಂದೇ ಮಾತರಂ ಗೀತೆಯ ಆರಂಭಿಕ ಚರಣಗಳನ್ನು ಮಾತ್ರ ಹಾಡಬೇಕು ಎಂಬ ಶರ್ಮಿಳಾ ಟ್ಯಾಗೋರ್ ಅವರ ಹೇಳಿಕೆಗೆ ಮುಕೇಶ್ ಖನ್ನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅವರನ್ನು “ಆಯೇಷಾ ಬೇಗಂ” ಎಂದು ಸಂಬೋಧಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಮದುವೆಯಾದ ಮೇಲಷ್ಟೇ ಇಸ್ಲಾಂ ನೆನಪಾಯ್ತಾ ?’ ಖನ್ನಾ ಪ್ರಶ್ನೆ
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಕೇಶ್ ಖನ್ನಾ, “ಶರ್ಮಿಳಾ ಟ್ಯಾಗೋರ್ ಅವರು ತಮ್ಮದೇ ಆದ ಗ್ರಹಿಕೆಯಲ್ಲಿ ಮಾತನಾಡುತ್ತಿದ್ದಾರೆ. ಅನ್ಯಧರ್ಮದ ಜನರಿಗೆ ಇದು ಅರ್ಥವಾಗುವುದಿಲ್ಲ ಅಥವಾ ಒಪ್ಪುವುದಿಲ್ಲ ಎಂಬ ಕಾರಣಕ್ಕಾಗಿ ರಾಷ್ಟ್ರಗೀತೆಯ ಬಗ್ಗೆ ಹೀಗೆ ಮಾತನಾಡುವುದು ಎಷ್ಟು ಸರಿ ?” ಎಂದು ಕಿಡಿಕಾರಿದ್ದಾರೆ.
ಶರ್ಮಿಳಾ ಟ್ಯಾಗೋರ್ ಅವರು ಪಟೌಡಿ ರಾಜಮನೆತನವನ್ನು ವಿವಾಹವಾಗಿ ಮತಾಂತರಗೊಂಡ ವಿಚಾರವನ್ನು ಪ್ರಸ್ತಾಪಿಸಿದ ಮುಕೇಶ್ ಖನ್ನಾ, “ಮದುವೆಯಾದ ಮೇಲಷ್ಟೇ ನಿಮಗೆ ಇಸ್ಲಾಂ ಧರ್ಮ ಎಂಬುದು ಒಂದಿದೆ ಎಂದು ಗೊತ್ತಾಯಿತೇ ? ನೀವು ಬೇಗಂ ಆದ ನಂತರವಷ್ಟೇ ಮುಸ್ಲಿಮರ ಆಚರಣೆಗಳು ಬೇರೆ ಎಂದು ಅರಿವಿಗೆ ಬಂತೇ ? ಮದುವೆಗಾಗಿ ನೀವು ಆಯೇಷಾ ಬೇಗಂ ಆದಿರಿ, ಆದರೆ ಇಂದು ಕೂಡ ನೀವು ಅದೇ ಆಯೇಷಾ ಬೇಗಂ ಆಗಿ ಮಾತನಾಡುತ್ತಿದ್ದೀರಿ. ಇಡೀ ಜೀವನವನ್ನು ಹಿಂದೂ ಧರ್ಮದ ಸಂಸ್ಕೃತಿಯೊಂದಿಗೆ ಕಳೆದ ನಂತರ, ಹಠಾತ್ತಾಗಿ ನಿಮಗೆ ಬೇರೆ ಧರ್ಮಗಳ ಭಾವನೆಗಳ ಬಗ್ಗೆ ಇಷ್ಟೊಂದು ಕಾಳಜಿ ಹುಟ್ಟಿಕೊಂಡಿರುವುದು ನನಗೆ ಆಶ್ಚರ್ಯ ತರಿಸಿದೆ,” ಎಂದು ನೇರವಾಗಿ ಚಾಟಿ ಬೀಸಿದ್ದಾರೆ.
ಬೆಂಗಾಲಿ ಹಿನ್ನೆಲೆ ನೆನಪಿಸಿದ ನಟ:
ಶರ್ಮಿಳಾ ಅವರ ಕಲ್ಕತ್ತಾ ಹಿನ್ನೆಲೆಯನ್ನು ನೆನಪಿಸಿದ ಮುಕೇಶ್ ಖನ್ನಾ, “ನೀವು ಪಶ್ಚಿಮ ಬಂಗಾಳದಲ್ಲಿ ಬೆಳೆದವರು. ಅಲ್ಲಿ ಕಾಳಿ ಪೂಜೆಯನ್ನು ಎಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಬಂಗಾಳಿ ಚಿತ್ರರಂಗ, ಸಂಸ್ಕೃತಿಯಲ್ಲಿ ಬೆಳೆದ ನಿಮಗೆ, ಈಗ ದಿಢೀರನೆ ಅನ್ಯಧರ್ಮೀಯರು ಇದನ್ನು ಒಪ್ಪುವುದಿಲ್ಲ ಎನಿಸುತ್ತಿರುವುದೇಕೆ ?” ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ತಮ್ಮ ವ್ಯಾಖ್ಯಾನ ನೀಡಿದ ಅವರು, “ನಮ್ಮಲ್ಲಿ 33 ಕೋಟಿ ದೇವರುಗಳಿದ್ದಾರೆ ಎಂದರೆ 33 ಕೋಟಿ ಬೇರೆ ಬೇರೆ ದೇವರುಗಳಲ್ಲ. ದೇವರು ಒಬ್ಬನೇ, ಆತ ನಿರಾಕಾರ. ಭಕ್ತರು ಆತನನ್ನು ಹನುಮಂತ, ಶಿವ, ರಾಮ ಅಥವಾ ಕೃಷ್ಣನ ರೂಪದಲ್ಲಿ ಕಾಣುತ್ತಾರೆ. ನಾನು ಶಿವನನ್ನು ನಂಬಿದರೆ ನನಗೆ ದೇವರು ಶಿವನಾಗಿ ಕಾಣಬಹುದು, ಕೃಷ್ಣನನ್ನು ನಂಬುವವರಿಗೆ ಕೃಷ್ಣನಾಗಿ ಕಾಣಬಹುದು,” ಎಂದು ವಿವರಿಸಿದ್ದಾರೆ.
ವಂದೇ ಮಾತರಂ ವಿರೋಧ ಮತ್ತು ರೆಹಮಾನ್ ಹಾಡು:
ವಂದೇ ಮಾತರಂ ಮೇಲಿನ ವಿರೋಧ ಕೇವಲ ಹಿಂದೂ ದೇವತೆಗಳ ಉಲ್ಲೇಖಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದಿರುವ ಖನ್ನಾ, “ಮುಸ್ಲಿಂ ಸಮುದಾಯದ ಕೆಲ ವರ್ಗಗಳು ಕೇವಲ ‘ಖುದಾ’ಗೆ ಮಾತ್ರ ತಲೆಬಾಗುತ್ತೇವೆ, ಬೇರೆ ಯಾರ ಮುಂದೆಯೂ ಬಾಗುವುದಿಲ್ಲ ಎಂಬ ಕಾರಣಕ್ಕೂ ವಿರೋಧಿಸುತ್ತಾ ಬಂದಿವೆ. ಲತಾ ಮಂಗೇಶ್ಕರ್, ಹೇಮಂತ್ ಕುಮಾರ್ ಹಾಡಿರುವಂತೆ ಎ.ಆರ್. ರೆಹಮಾನ್ ಕೂಡ ‘ಮಾ ತುಜೆ ಸಲಾಂ’ ಎಂದು ಭಾರತ ಮಾತೆಯನ್ನು ಕೊಂಡಾಡಿ ವಂದಿಸಿದ್ದಾರೆ. ನಾವು ಭಾರತ ಮಾತೆಗೆ ತಲೆಬಾಗುತ್ತೇವೆ. ಯಾರಾದರೂ ಬಾಗಲು ಇಷ್ಟಪಡದಿದ್ದರೆ ನಾವು ಅವರನ್ನು ಬಲವಂತ ಮಾಡುವುದಿಲ್ಲ, ಆದರೆ ‘ವಂದೇ ಮಾತರಂ’ ಅನ್ನೇ ಹಾಡಬಾರದು ಅಥವಾ ಮೊಟಕುಗೊಳಿಸಬೇಕು ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ,” ಎಂದು ಗುಡುಗಿದ್ದಾರೆ.
ಓಲೈಕೆ ರಾಜಕಾರಣಕ್ಕೆ ಛೀಮಾರಿ:
ರಾಜಕೀಯ ಪಕ್ಷಗಳ ವಿರುದ್ಧವೂ ಅಸಮಾಧಾನ ಹೊರಹಾಕಿದ ಮುಕೇಶ್ ಖನ್ನಾ, “ಕೇವಲ ಒಂದು ನಿರ್ದಿಷ್ಟ ವೋಟ್ ಬ್ಯಾಂಕ್ ಅನ್ನು ಮೆಚ್ಚಿಸಲು ವಂದೇ ಮಾತರಂ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಮ್ಮ ನಿಲುವು ಬದಲಾಯಿಸುವುದು ಶುದ್ಧ ತುಷ್ಟೀಕರಣ ರಾಜಕಾರಣ. ‘ನಾವು ನಿಮ್ಮೊಂದಿಗಿದ್ದೇವೆ, ನಮಗೆ ವೋಟ್ ಹಾಕಿ’ ಎಂದು ತೋರಿಸಿಕೊಳ್ಳಲು ರಾಷ್ಟ್ರೀಯ ಚಿಹ್ನೆಗಳು ಮತ್ತು ಗೀತೆಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿರುವುದೇ ದೇಶದ ಅತಿ ದೊಡ್ಡ ಸಮಸ್ಯೆ,” ಎಂದು ಕಟುವಾಗಿ ಟೀಕಿಸಿದ್ದಾರೆ.

