HomeRecipiesರಾಜಮನೆತನದ ಶೈಲಿಯ ಶಹಿ ಜರ್ದಾ ಪುಲಾವ್: ವಿಶೇಷ ಸಂದರ್ಭಗಳಿಗೆ ಹೇಳಿ ಮಾಡಿಸಿದ ಸಿಹಿ ಖಾದ್ಯ

ರಾಜಮನೆತನದ ಶೈಲಿಯ ಶಹಿ ಜರ್ದಾ ಪುಲಾವ್: ವಿಶೇಷ ಸಂದರ್ಭಗಳಿಗೆ ಹೇಳಿ ಮಾಡಿಸಿದ ಸಿಹಿ ಖಾದ್ಯ

ಶಹಿ ಜರ್ದಾ ಪುಲಾವ್ ಎಂಬುದು ಉತ್ತರ ಭಾರತದ ಅತ್ಯಂತ ಜನಪ್ರಿಯ ಮತ್ತು ರಾಜಮನೆತನದ ಸಂಪ್ರದಾಯದ ಸಿಹಿ ಖಾದ್ಯವಾಗಿದೆ. ಪರ್ಷಿಯನ್ ಭಾಷೆಯಲ್ಲಿ ‘ಜರ್ದ್’ ಎಂದರೆ ಹಳದಿ ಎಂದರ್ಥ. ಅದರಂತೆಯೇ ಈ ಪುಲಾವ್ ಆಕರ್ಷಕ ಹಳದಿ ಬಣ್ಣದಿಂದ ಕೂಡಿರುತ್ತದೆ. ವಿಶೇಷವಾಗಿ ಈದ್, ಮದುವೆ ಸಮಾರಂಭ ಹಾಗೂ ಹಬ್ಬ ಹರಿದಿನಗಳಲ್ಲಿ ತಯಾರಿಸಲಾಗುವ ಈ ಸಿಹಿ ಅನ್ನವು ಕೇಸರಿ, ತುಪ್ಪ ಮತ್ತು ಡ್ರೈ ಫ್ರೂಟ್ಸ್‌ಗಳ ಸುಗಂಧದಿಂದ ಮನಸೆಳೆಯುತ್ತದೆ. ಇದನ್ನು ಮನೆಯಲ್ಲೇ ಅತ್ಯಂತ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಒಂದು ಕಪ್ ಬಾಸ್ಮತಿ ಅಕ್ಕಿ, ಅರ್ಧ ಕಪ್ ಸಕ್ಕರೆ, ಅರ್ಧ ಕಪ್ ಹಾಲು, 4 ರಿಂದ 5 ಚಮಚ ತುಪ್ಪ, ಸ್ವಲ್ಪ ಕೇಸರಿ ದಳಗಳು, ಏಲಕ್ಕಿ, ಲವಂಗ, ಒಂದು ಚಮಚ ನಿಂಬೆ ರಸ, ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಒಣ ಕೊಬ್ಬರಿ ಚೂರುಗಳು, ಸ್ವಲ್ಪ ಖೋವಾ ಮತ್ತು ಟೂಟಿ ಫ್ರೂಟಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಯಾರಿಸುವ ವಿಧಾನ

ಮೊದಲಿಗೆ ಬಾಸ್ಮತಿ ಅಕ್ಕಿಯನ್ನು ತೊಳೆದು ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ನೆನೆಯಲು ಬಿಡಿ. ನಂತರ ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಯಲು ಇಟ್ಟು, ಅದಕ್ಕೆ ಕೇಸರಿ, ಏಲಕ್ಕಿ, ಲವಂಗ ಮತ್ತು ನಿಂಬೆ ರಸ ಸೇರಿಸಿ. ಈ ಕುದಿಯುವ ನೀರಿಗೆ ನೆನೆಸಿದ ಅಕ್ಕಿಯನ್ನು ಹಾಕಿ ಶೇಕಡಾ 90 ರಷ್ಟು ಬೇಯಿಸಿಕೊಳ್ಳಿ. ಅನ್ನ ಪೂರ್ತಿ ಮೆತ್ತಗಾಗಬಾರದು. ನಂತರ ನೀರನ್ನು ಸೋಸಿಕೊಂಡು ಅನ್ನವನ್ನು ಪಕ್ಕಕ್ಕೆ ಇರಿಸಿ.

ಒಂದು ದಪ್ಪ ತಳದ ಪಾತ್ರೆ ಅಥವಾ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ, ಬಾದಾಮಿ, ದ್ರಾಕ್ಷಿ ಮತ್ತು ಒಣ ಕೊಬ್ಬರಿ ಚೂರುಗಳನ್ನು ಹೊಂಬಣ್ಣ ಬರುವವರೆಗೆ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಪಾತ್ರೆಗೆ ಮತ್ತೆ ಸ್ವಲ್ಪ ತುಪ್ಪ ಸೇರಿಸಿ ಏಲಕ್ಕಿ ಮತ್ತು ಲವಂಗ ಹಾಕಿ. ನಂತರ ಅದಕ್ಕೆ ಸಕ್ಕರೆ ಮತ್ತು ಹಾಲು ಸೇರಿಸಿ ಎರಡು ನಿಮಿಷಗಳ ಕಾಲ ಕುದಿಸಿ.

ಈಗ ಹಾಲಿನ ಮಿಶ್ರಣದ ಮೇಲೆ ಬೇಯಿಸಿದ ಅನ್ನದ ಪದರವನ್ನು ಹರಡಿ. ಅದರ ಮೇಲೆ ಹುರಿದ ಡ್ರೈ ಫ್ರೂಟ್ಸ್ ಮತ್ತು ಸ್ವಲ್ಪ ಸಕ್ಕರೆ ಉದುರಿಸಿ. ಹೀಗೆ ಪದರಗಳಂತೆ ಜೋಡಿಸಿದ ಮೇಲೆ ಮೇಲ್ಭಾಗದಲ್ಲಿ ಖೋವಾ, ಟೂಟಿ ಫ್ರೂಟಿ ಮತ್ತು ಸ್ವಲ್ಪ ತುಪ್ಪ ಸೇರಿಸಿ ಮುಚ್ಚಳ ಮುಚ್ಚಿ. ಕಡಿಮೆ ಉರಿಯಲ್ಲಿ ಸುಮಾರು 3 ರಿಂದ 5 ನಿಮಿಷಗಳ ಕಾಲ ದಮ್ ಕಟ್ಟಲು ಬಿಡಿ. ಈಗ ಸಕ್ಕರೆ ಪಾಕ ಮತ್ತು ಹಾಲಿನ ಅಂಶ ಅನ್ನದೊಂದಿಗೆ ಸರಿಯಾಗಿ ಬೆರೆತು ರುಚಿಯಾದ ಜರ್ದಾ ಪುಲಾವ್ ಸಿದ್ಧವಾಗುತ್ತದೆ. ಬಡಿಸುವ ಮುನ್ನ ಹದವಾಗಿ ಮಿಕ್ಸ್ ಮಾಡಿ ಮೇಲೆ ಒಣಫಲಗಳಿಂದ ಅಲಂಕರಿಸಿದರೆ ರಾಜಮನೆತನದ ಶೈಲಿಯ ಸಿಹಿ ಪುಲಾವ್ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular