ನಾಸಿಕ್: ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ಮಹಾರಾಷ್ಟ್ರದ ನಾಸಿಕ್ ಬಿಪಿಒ ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಬಲವಂತದ ಧಾರ್ಮಿಕ ಮತಾಂತರದ ಗಂಭೀರ ಹಗರಣವೊಂದು ಬೆಳಕಿಗೆ ಬಂದಿದ್ದು, ಘಟಕದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸುಮಾರು ಒಂಬತ್ತು ಮಂದಿ ಮಹಿಳಾ ಉದ್ಯೋಗಿಗಳು ನೀಡಿದ ದೂರಿನನ್ವಯ ವಿಶೇಷ ತನಿಖಾ ತಂಡ (SIT) ಕಾರ್ಯಾಚರಣೆ ನಡೆಸಿದ್ದು, ತಂಡವಾಗಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಒತ್ತಡ ಹೇರುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಆಘಾತಕಾರಿ ಬೆಳವಣಿಗೆಯ ಬೆನ್ನಲ್ಲೇ ಕಂಪನಿಯು ನಾಸಿಕ್ ಘಟಕವನ್ನು ಬಂದ್ ಮಾಡಿ, ಎಲ್ಲಾ ಸಿಬ್ಬಂದಿಗೆ ಮನೆಯಿಂದಲೇ ಕೆಲಸ (WFH) ಮಾಡಲು ಸೂಚಿಸಿದೆ.
ಹೌದು. ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪಗಳಿಗೆ ಸಂಬಂಧಿಸಿದಂತೆ ಸಾಲು ಸಾಲು ಎಫ್‌ಐಆರ್ ದಾಖಲಾದ ಬೆನ್ನಲ್ಲೇ, ಟಿಸಿಎಸ್ ಸಂಸ್ಥೆಯು ತನ್ನ ನಾಸಿಕ್ ಬಿಪಿಒ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ.ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರದ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಿಸಿಎಸ್ ಬಿಪಿಒ ಕೇಂದ್ರದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ.
ಗಂಭೀರ ಆರೋಪಗಳು: ಸುಮಾರು ಒಂಬತ್ತು ಮಹಿಳಾ ಉದ್ಯೋಗಿಗಳು ದೂರು ನೀಡಿದ್ದು, ಕಳೆದ ಹಲವಾರು ವರ್ಷಗಳಿಂದ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ನಿರ್ದಿಷ್ಟ ಧರ್ಮದ ಆಚರಣೆಗಳಲ್ಲಿ ಭಾಗವಹಿಸುವಂತೆ ಮತ್ತು ಮಾಂಸಾಹಾರ ಸೇವಿಸುವಂತೆ ಒತ್ತಾಯಿಸಲಾಗುತ್ತಿತ್ತು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈವರೆಗೆ ಒಟ್ಟು ಒಂಬತ್ತು ಎಫ್‌ಐಆರ್‌ಗಳು ದಾಖಲಾಗಿದ್ದು, ಎಂಟು ಮಂದಿಯನ್ನು (ಏಳು ಪುರುಷರು ಮತ್ತು ಒಬ್ಬ ಮಹಿಳೆ) ಬಂಧಿಸಲಾಗಿದೆ. ಬಂಧಿತರನ್ನು ದಾನಿಶ್ ಶೇಖ್, ತೌಸಿಫ್ ಅತ್ತಾರ್, ರಜಾ ಮೆಮನ್, ಶಾರುಖ್ ಖುರೇಷಿ, ಶಫಿ ಶೇಖ್, ಆಸಿಫ್ ಅಫ್ತಾಬ್ ಅನ್ಸಾರ್ ಮತ್ತು ಶಾರುಖ್ ಶೇಖ್ ಎಂದು ಗುರುತಿಸಲಾಗಿದೆ. ಒಬ್ಬ ಮಹಿಳಾ ಆರೋಪಿ ತಲೆಮರೆಸಿಕೊಂಡಿದ್ದಾಳೆ.
ತನಿಖಾ ತಂಡ (SIT): ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ನಾಸಿಕ್ ಪೊಲೀಸ್ ಕಮಿಷನರ್ ಸಂದೀಪ್ ಕಾರ್ಣಿಕ್ ಅವರ ಪ್ರಕಾರ, ಆರೋಪಿಗಳು ಸಂಘಟಿತ ಗ್ಯಾಂಗ್‌ನಂತೆ ವರ್ತಿಸಿ ಮಹಿಳಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದ್ದರು.
ಮಾನವ ಸಂಪನ್ಮೂಲ (HR) ವಿಭಾಗದ ವೈಫಲ್ಯ: ಸಂತ್ರಸ್ತ ಮಹಿಳೆಯೊಬ್ಬರು ದೂರು ನೀಡಲು ಹೋದಾಗ, ಅಲ್ಲಿದ್ದ ಎಚ್‌ಆರ್ ಮುಖ್ಯಸ್ಥೆ “ಇದೆಲ್ಲಾ ಸಾಮಾನ್ಯ” ಎಂದು ಹೇಳಿ ಆರೋಪಿಗಳ ಪರವಾಗಿ ನಿಂತಿದ್ದರು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಉನ್ನತ ಮಟ್ಟದ ತನಿಖೆ: ಈ ಪ್ರಕರಣದಲ್ಲಿ ಯಾವುದೇ ಬಾಹ್ಯ ಶಕ್ತಿಗಳ ಕೈವಾಡ ಅಥವಾ ಹಣಕಾಸಿನ ನೆರವು ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಎಟಿಎಸ್ (ATS) ಮತ್ತು ಎನ್ಐಎ (NIA) ನಂತಹ ಸಂಸ್ಥೆಗಳ ಸಹಾಯವನ್ನು ಪೊಲೀಸರು ಕೋರಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ: ರಾಷ್ಟ್ರೀಯ ಮಹಿಳಾ ಆಯೋಗವು (NCW) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸತ್ಯಶೋಧನಾ ಸಮಿತಿಯು ಏಪ್ರಿಲ್ 18 ರಂದು ನಾಸಿಕ್ ಘಟಕಕ್ಕೆ ಭೇಟಿ ನೀಡಲಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಈ ಘಟನೆಯನ್ನು “ಅತ್ಯಂತ ಕಳವಳಕಾರಿ ಮತ್ತು ಆಘಾತಕಾರಿ” ಎಂದು ಕರೆದಿದ್ದಾರೆ. ಟಿಸಿಎಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

