ಭಾರತೀಯ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಹಾಗೂ ಸ್ಫೋಟಕ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಬ್ಯಾಟಿಂಗ್ ವೈಖರಿಯನ್ನು ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತ ಪರ 374 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ 17,253 ರನ್ ಪೇರಿಸಿರುವ ಸೆಹ್ವಾಗ್, ತಮ್ಮ ಭಯವಿಲ್ಲದ ಆಟಕ್ಕೆ ಹೆಸರುವಾಸಿಯಾಗಿದ್ದರು. ಇದೀಗ ಅವರ ಆ ಭಯರಹಿತ ಬ್ಯಾಟಿಂಗ್ ಪರಂಪರೆಯನ್ನು ಅವರ ಮಗ ಆರ್ಯವೀರ್ ಸೆಹ್ವಾಗ್ ಮುಂದುವರಿಸುತ್ತಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ದೆಹಲಿ ಪ್ರೀಮಿಯರ್ ಲೀಗ್ (DPL) ಟೂರ್ನಿಯಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಆರ್ಯವೀರ್, ತಮ್ಮ ತಂದೆಯ ಶೈಲಿಯನ್ನೇ ಮೈಗೂಡಿಸಿಕೊಂಡು ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ಮೈದಾನದಲ್ಲಿ ಸೆಹ್ವಾಗ್ ಬಾರಿಸುತ್ತಿದ್ದ ಟ್ರೇಡ್‌ಮಾರ್ಕ್ ಶಾಟ್‌ಗಳಾದ ಸ್ಕ್ವೇರ್ ಡ್ರೈವ್ ಹಾಗೂ ಕವರ್ ಡ್ರೈವ್‌ಗಳನ್ನು ಆರ್ಯವೀರ್ ಹೂಬಹೂ ಪುನರಾವರ್ತಿಸಿದ್ದಾರೆ. ದೆಹಲಿ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ತಂದೆ-ಮಗನ ಬ್ಯಾಟಿಂಗ್ ಹೋಲಿಕೆಯ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಂದ್ಯದ ವಿವರಕ್ಕೆ ಬಂದರೆ, ಸೆಂಟ್ರಲ್ ಡೆಲ್ಲಿ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ತಂಡ 21 ರನ್‌ಗಳ ಅಂತರದಿಂದ ಸೋಲನುಭವಿಸಿತು. ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ಡೆಲ್ಲಿ ಕಿಂಗ್ಸ್ 20 ಓವರ್‌ಗಳಲ್ಲಿ 232 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಸಿದ್ಧಾರ್ಥ್ ಜೂನ್ (33) ಹಾಗೂ ಸಮರ್ಥ್ ಸೇಥ್ (37) ಬಿರುಸಿನ ಬ್ಯಾಟಿಂಗ್ ನಡೆಸಿದರು.
ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಡೆಲ್ಲಿ ಲಯನ್ಸ್ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ನಡೆಸಿ 4.5 ಓವರ್‌ಗಳಲ್ಲಿ 71 ರನ್ ಗಳಿಸಿತು. ಆದರೆ ಆರ್ಯವೀರ್ ಸೆಹ್ವಾಗ್ ಔಟಾದ ನಂತರ ತಂಡಕ್ಕೆ ಹಿನ್ನಡೆಯಾಯಿತು. ಕೃಶ್ ಯಾದವ್ (46) ಹಾಗೂ ಅಂಕಿತ್ ಕುಮಾರ್ (61) ಹೋರಾಟ ನಡೆಸಿದರೂ ಸಹ ತಂಡ ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಲಷ್ಟೇ ಶಕ್ತವಾಯಿತು.
“>
“>

