HomeKarnatakaಸೆ. 24ರಂದು ಸಿಎಂ ಡಿ.ಕೆ ಶಿವಕುಮಾರ್ –ಪ್ರಧಾನಿ ಮೋದಿ ಭೇಟಿ ; ಮಹತ್ವದ ಚರ್ಚೆ

ಸೆ. 24ರಂದು ಸಿಎಂ ಡಿ.ಕೆ ಶಿವಕುಮಾರ್ –ಪ್ರಧಾನಿ ಮೋದಿ ಭೇಟಿ ; ಮಹತ್ವದ ಚರ್ಚೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 24ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಕುರಿತು ಈ ವೇಳೆ ಚರ್ಚೆ ನಡೆಯಲಿದೆ ಎಂದು ವರದಿ ತಿಳಿಸಿದೆ.

ರಾಜ್ಯದ ಹಲವು ತಾಲೂಕುಗಳಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿದ್ದು, ರೈತರು ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ತ್ವರಿತವಾಗಿ ಬರ ಪರಿಹಾರ ನಿಧಿ ಬಿಡುಗಡೆ ಮಾಡಬೇಕು ಹಾಗೂ ಬೆಳೆ ನಷ್ಟಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಮನವಿ ಸಲ್ಲಿಸಲಿದ್ದಾರೆ.

ಇದೇ ವೇಳೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದ ಕೇಂದ್ರದ ಕರಡು ಅಧಿಸೂಚನೆ ಕುರಿತು ರಾಜ್ಯದ ನಿಲುವನ್ನು ಮುಖ್ಯಮಂತ್ರಿಗಳು ಪ್ರಧಾನಿಯವರ ಗಮನಕ್ಕೆ ತರಲಿದ್ದಾರೆ. ವರದಿಯ ಪರಿಣಾಮ ಪಶ್ಚಿಮ ಘಟ್ಟ ವ್ಯಾಪ್ತಿಯ ಜನವಸತಿ ಮತ್ತು ಕೃಷಿ ಪ್ರದೇಶಗಳ ಮೇಲೆ ಬೀಳುವ ಸಾಧ್ಯತೆಗಳ ಕುರಿತು ರಾಜ್ಯ ಸರ್ಕಾರದ ಆತಂಕವನ್ನು ವಿವರಿಸಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗೆ ನಡೆದ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಮತ್ತು ಕೇಂದ್ರದ ಕರಡು ಅಧಿಸೂಚನೆ ಕುರಿತು ಚರ್ಚೆ ನಡೆಸಲಾಗಿದ್ದು, ರಾಜ್ಯದ ವಿರೋಧದ ನಿರ್ಣಯವನ್ನು ಕೇಂದ್ರಕ್ಕೆ ಸಲ್ಲಿಸುವ ಸಿದ್ಧತೆ ನಡೆದಿದೆ. ಸೆಪ್ಟೆಂಬರ್ 27ರೊಳಗೆ ಕೇಂದ್ರಕ್ಕೆ ರಾಜ್ಯದ ಅಭಿಪ್ರಾಯ ತಿಳಿಸಬೇಕಿರುವ ಹಿನ್ನೆಲೆಯಲ್ಲಿ ಈ ವಿಚಾರಕ್ಕೆ ಮಹತ್ವ ಬಂದಿದೆ. ಬರ ಪರಿಸ್ಥಿತಿ ಮತ್ತು ಕಸ್ತೂರಿ ರಂಗನ್ ವರದಿ ಎರಡೂ ರಾಜ್ಯದ ಪ್ರಮುಖ ವಿಚಾರಗಳಾಗಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 24ರ ಡಿಕೆಶಿ–ಮೋದಿ ಭೇಟಿ ಗಮನ ಸೆಳೆದಿದೆ.

ನಾಲ್ಕು ದಿನಗಳ ಕಾಲ ಕೃಷಿ ಮೇಳ

ಧಾರವಾಡ  :   ಕೃಷಿ ವಿಶ್ವವಿದ್ಯಾಲಯ ವತಿಯಿಂದ ಸೆಪ್ಟೆಂಬರ್ 25 ರಿಂದ ಸೆಪ್ಟೆಂಬರ್ 28 ರವರೆಗೆ ನಾಲ್ಕು ದಿನಗಳ ಕಾಲ ಕೃಷಿ ಮೇಳ-2026 ಆಯೋಜಿಸಲಾಗಿದೆ. ಸಂಯುಕ್ತ ರಾಷ್ಟ್ರ ಸಂಘವು 2026ನೇ ವರ್ಷವನ್ನು ಅಂತರರಾಷ್ಟ್ರೀಯ ಕೃಷಿ ಮಹಿಳೆಯರ ವರ್ಷ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಬಾರಿಯ ಕೃಷಿ ಮೇಳವನ್ನು ಮಹಿಳಾ ರೈತರಿಗೆ ಸಮರ್ಪಿಸಲಾಗಿದ್ದು, ಸಶಕ್ತ ಮಹಿಳೆ–ಸುಸ್ಥಿರ ಕೃಷಿ ಎಂಬ ಘೋಷವಾಕ್ಯದೊಂದಿಗೆ ಮೇಳವನ್ನು ಆಯೋಜಿಸಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್.ಬಿ. ಪ್ರಕಾಶ ಅವರು ಹೇಳಿದರು.

 ಅವರು ಇಂದು (ಸೆ.22) ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳ- 2026 ರ ಕುರಿತು ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.

 ಕೃಷಿ-ಆಹಾರ ವ್ಯವಸ್ಥೆಯಲ್ಲಿ ಮಹಿಳೆಯರು ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಗುರುತಿಸುವುದು ಹಾಗೂ ಮಹಿಳಾ ರೈತರ ಸಬಲೀಕರಣಕ್ಕೆ ಉತ್ತೇಜನ ನೀಡುವುದು ಮೇಳದ ಪ್ರಮುಖ ಉದ್ದೇಶವಾಗಿದೆ. ನಾಲ್ಕು ದಿನಗಳ ಕೃಷಿ ಮೇಳದಲ್ಲಿ ಸುಮಾರು 20 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಕೃಷಿ ಕ್ಷೇತ್ರದಲ್ಲಿನ ಅತ್ಯಾಧುನಿಕ ತಂತ್ರಜ್ಞಾನಗಳು, ನವೀನ ಆವಿಷ್ಕಾರಗಳು ಹಾಗೂ ರೈತರ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಪರಿಚಯಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ. ಸಂದರ್ಶಕರ ಅನುಕೂಲಕ್ಕಾಗಿ ಕ್ಯೂಆರ್ ಕೋಡ್ ಮೂಲಕ ಆನ್‍ಲೈನ್ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

 ಕೃಷಿ ಮೇಳದ ಪ್ರಮುಖ ಆಕರ್ಷಣೆಗಳು: ಕೃಷಿ ಮೇಳದಲ್ಲಿ ಸುಸ್ಥಿರ ಕೃಷಿ ತಂತ್ರಜ್ಞಾನಗಳು, ಬೀಜ ಮೇಳ, ನೈಸರ್ಗಿಕ ಮತ್ತು ಸಾವಯವ ಕೃಷಿ, ಮಹಿಳಾ ಸ್ವಸಹಾಯ ಗುಂಪುಗಳ ಸಾಧನೆಗಳು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ, ಕೃಷಿ ತಜ್ಞರೊಂದಿಗೆ ಸಮಾಲೋಚನೆ, ಕೃಷಿ ನವೋದ್ಯಮಗಳು, ಸಮಗ್ರ ಬೆಳೆ, ಪೋಷಕಾಂಶ, ಪೀಡೆ ನಿರ್ವಹಣೆ, ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಕೃಷಿ ಅರಣ್ಯ, ಪಶು ಸಂಗೋಪನೆ, ಜಾನುವಾರುಗಳ ಪ್ರದರ್ಶನ ಹಾಗೂ ಮೇವಿನ ಬೆಳೆಗಳ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ. ಇದರೊಂದಿಗೆ ಕೃಷಿಯಲ್ಲಿ ಡ್ರೋನ್ ಬಳಕೆ, ಹೈಟೆಕ್ ತೋಟಗಾರಿಕೆ, ಫಲ–ಪುಷ್ಪ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ರೈತರ ಆವಿಷ್ಕಾರಗಳು ಹಾಗೂ ವಿಶೇಷ ಸಾಧನೆಗೈದ ರೈತರು ಮತ್ತು ರೈತ ಮಹಿಳೆಯರೊಂದಿಗೆ ಸಂವಾದ ನಡೆಯಲಿದೆ. ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ, ಶ್ರೇಷ್ಠ ಕೃಷಿ ಮಹಿಳೆ, ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.

 ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ವಿವಿಧ ಸ್ಪರ್ಧೆಗಳು ಹಾಗೂ ತರಬೇತಿಗಳನ್ನು ಆಯೋಜಿಸಲಾಗುತ್ತದೆ. ರೈತ ಉತ್ಪಾದಕ ಸಂಸ್ಥೆಗಳು, ವಿವಿಧ ಸ್ಟಾರ್ಟಪ್‍ಗಳು ಹಾಗೂ ಖಾಸಗಿ ಸಂಸ್ಥೆಗಳು ಸಹ ಮೇಳದಲ್ಲಿ ಭಾಗವಹಿಸಲಿವೆ.

 594ಕ್ಕೂ ಹೆಚ್ಚು ಮಳಿಗೆಗಳ ಸಿದ್ಧತೆ: ಕೃಷಿ ವಸ್ತು ಪ್ರದರ್ಶನದಲ್ಲಿ ಈಗಾಗಲೇ 168 ಹೈಟೆಕ್ ಮಳಿಗೆಗಳು, 293 ಸಾಮಾನ್ಯ ಮಳಿಗೆಗಳು, 75 ಯಂತ್ರೋಪಕರಣಗಳ ಮಳಿಗೆಗಳು, 28 ಟ್ರಾಕ್ಟರ್ ಮತ್ತು ಭಾರೀ ಯಂತ್ರೋಪಕರಣಗಳ ಮಳಿಗೆಗಳು ಹಾಗೂ 30 ಆಹಾರ ಮಳಿಗೆಗಳು ಕಾಯ್ದಿರಿಸಲಾಗಿದೆ.

ಕೃಷಿ ಪರಿಕರಗಳು, ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ, ರೋಗನಾಶಕ, ಕಳೆನಾಶಕ, ಬೆಳೆವರ್ಧಕ, ನರ್ಸರಿ, ಹಣಕಾಸು ಸಂಸ್ಥೆಗಳು, ನೀರಾವರಿ ಮತ್ತು ಕೃಷಿ ಉಪಕರಣಗಳು, ಕೃಷಿ ಯಂತ್ರೋಪಕರಣಗಳು, ಭಾರೀ ಯಂತ್ರೋಪಕರಣಗಳು, ಕೃಷಿ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳು, ಆಹಾರ ಮಳಿಗೆಗಳು, ಜಾನುವಾರು ಪ್ರದರ್ಶನ, ಕ್ಷೇತ್ರ ಪ್ರಾತ್ಯಕ್ಷಿಕೆಗಳು, ವಿಶ್ವವಿದ್ಯಾಲಯದ ಮಳಿಗೆಗಳು ಹಾಗೂ ಬೀಜ ಘಟಕದ ಮಳಿಗೆಗಳು ಇರಲಿವೆ ಎಂದು ತಿಳಿಸಿದರು.

 ರೈತರಿಗೆ ವಿವಿಧ ಸೌಲಭ್ಯ: ಕೃಷಿ ಮೇಳದ ಆವರಣವನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ಡಿಜಿಟಲ್ ನೋಂದಣಿಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಆನ್‍ಲೈನ್ ನೋಂದಣಿಗಾಗಿ ಕ್ಯೂಆರ್ ಕೋಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಗ್ನಿಶಾಮಕ ವಾಹನ, ಮೊಬೈಲ್ ಎಟಿಎಂ ವಾಹನಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳ ವೀಕ್ಷಣೆಗೆ ವಾಹನಗಳು, ವೇದಿಕೆ ಕಾರ್ಯಕ್ರಮಗಳ ನೇರ ಪ್ರಸಾರ ವ್ಯವಸ್ಥೆ, ಉಚಿತ ವೈದ್ಯಕೀಯ ಸಲಹಾ ಕೇಂದ್ರ, ಸಾರಿಗೆ ನಿರ್ವಹಣಾ ವ್ಯವಸ್ಥೆ ಹಾಗೂ ಪೊಲೀಸ್  ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

 ನಾಲ್ಕು ದಿನಗಳ ಪ್ರಮುಖ ಕಾರ್ಯಕ್ರಮಗಳು: ಸೆಪ್ಟೆಂಬರ್ 25, 2026 ರಂದು ಬೆಳಿಗ್ಗೆ 11:30 ಕ್ಕೆ ಬೀಜ ಮೇಳದ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ “ಕೃಷಿಯಲ್ಲಿ ರೈತ ಮಹಿಳೆಯರ ಮಹತ್ವ ಮತ್ತು ಸಬಲೀಕರಣ” ವಿಷಯದ ವಿಚಾರಗೋಷ್ಠಿ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ರೈತರಿಂದ ರೈತರಿಗಾಗಿ’ ಕಾರ್ಯಕ್ರಮದಡಿ ಆವಿಷ್ಕಾರ ರೈತರ ಅನುಭವ ಹಂಚಿಕೆ ನಡೆಯಲಿದೆ.

 ಸೆಪ್ಟೆಂಬರ್ 26, 2026 ರಂದು ಬೆಳಿಗ್ಗೆ 11.30 ಕ್ಕೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಂದ ಕೃಷಿ ಮೇಳ 2026ರ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಶ್ರೇಷ್ಠ ಕೃಷಿಕ, ಶ್ರೇಷ್ಠ ಕೃಷಿ ಮಹಿಳೆ, ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಾವೇರಿ, ಗದಗ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಶಸ್ತಿ ಪುರಸ್ಕ್ರತ ರೈತರಿಂದ ಅನುಭವ ಹಂಚಿಕೆ ನಡೆಯಲಿದೆ.

ಸೆಪ್ಟೆಂಬರ್ 27, 2026 ರಂದು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1.30 ರವರೆಗೆ “ಪೌಷ್ಟಿಕ ಆಹಾರ ಭದ್ರತೆಯಲ್ಲಿ ಸಿರಿಧಾನ್ಯಗಳ ಪಾತ್ರ ಹಾಗೂ ತಳಿಗಳ ವೈವಿಧ್ಯತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಸುಸ್ಥಿರ ಕೃಷಿ” ವಿಷಯದ ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ “ಸ್ವಾವಲಂಬನೆಗಾಗಿ ಕೃಷಿ ಮೌಲ್ಯವರ್ಧನೆ ಹಾಗೂ ಉದ್ಯಮಶೀಲತೆ” ವಿಚಾರಗೋಷ್ಠಿ ನಡೆಯಲಿದೆ.  ರೈತರ ಅನುಭವ ಹಂಚಿಕೆ ಕೂಡ ನಡೆಯಲಿದೆ.

 ಸೆಪ್ಟೆಂಬರ್ 28, 2026 ರಂದು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1.30 ರವರೆಗೆ “ಸುಸ್ಥಿರ ಕೃಷಿಗಾಗಿ ಡಿಜಿಟಲ್ ತಂತ್ರಜ್ಞಾನ ಮತ್ತು ಹವಾಮಾನ ವೈಪರಿತ್ಯ ನಿರ್ವಹಣೆಯಲ್ಲಿ ಬೇಕಾದ ಬೆಳೆ ಪದ್ಧತಿಗಳು ಮತ್ತು ಕೃಷಿ ತಾಂತ್ರಿಕತೆಗಳು” ವಿಷಯದ ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ರೈತರಿಂದ ‘ ರೈತರಿಗಾಗಿ’ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

 ವಿಶ್ವವಿದ್ಯಾಲಯವು ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ 14 ಹೊಸ ಬೆಳೆ ತಳಿಗಳು, ಸಂಕರಣ ತಳಿಗಳನ್ನು ಅಭಿವೃದ್ಧಿಪಡಿಸಿದೆ. 36 ಕೃಷಿ ತಂತ್ರಜ್ಞಾನಗಳು ಹಾಗೂ 02 ಪಶುವೈದ್ಯಕೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೃಷಿ ಮೇಳ 2026 ಮೂಲಕ ರೈತರು, ರೈತ ಮಹಿಳೆಯರು ಹಾಗೂ ಗ್ರಾಮೀಣ ಯುವಜನರಿಗೆ ಆಧುನಿಕ ಕೃಷಿ ತಂತ್ರಜ್ಞಾನ, ಸಂಶೋಧನಾ ಫಲಿತಾಂಶಗಳು, ಕೃಷಿ ನವೋದ್ಯಮಗಳು, ಮೌಲ್ಯವರ್ಧನೆ, ಯಂತ್ರೋಪಕರಣಗಳು ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ನೇರ ಮಾಹಿತಿ ದೊರೆಯಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular