HomeKarnatakaಹೊರ ಗುತ್ತಿಗೆ ಶಿಕ್ಷಕರಿಗೆ ಸೇವಾ ಭದ್ರತೆ, ಗೌರವಧನ ಹೆಚ್ಚಳ: ವಸತಿ ಶಾಲೆಗಲ್ಲಿ 6 ನೇ ತರಗತಿಗೆ...

ಹೊರ ಗುತ್ತಿಗೆ ಶಿಕ್ಷಕರಿಗೆ ಸೇವಾ ಭದ್ರತೆ, ಗೌರವಧನ ಹೆಚ್ಚಳ: ವಸತಿ ಶಾಲೆಗಲ್ಲಿ 6 ನೇ ತರಗತಿಗೆ 100 ವಿದ್ಯಾರ್ಥಿಗಳಿಗೆ ಅವಕಾಶ; ಕೋಟ ಶ್ರೀನಿವಾಸ ಪೂಜಾರಿ

ಮಡಿಕೇರಿ: ರಾಜ್ಯದಲ್ಲಿ ವಸತಿ ಶಾಲೆಗಳ ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶ ಉತ್ತಮವಾಗಿದ್ದು, ಬೇಡಿಕೆಯೂ ಸಹ ಹೆಚ್ಚಿದೆ. ಈ ಹಿನ್ನೆಲೆ ಮುಂದಿನ ಶೈಕ್ಷಣಿಕ ವರ್ಷದಿಂದ 6 ನೇ ತರಗತಿಗೆ 50 ರಿಂದ 100 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಓಬವ್ವ ಆತ್ಮ ರಕ್ಷಣೆ ಕಲೆ’ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಅಂಬೇಡ್ಕರ್, ಮೊರಾರ್ಜಿ ದೇಸಾಯಿ, ಏಕಲವ್ಯ, ಕಿತ್ತೂರು ರಾಣಿ ಚೆನ್ನಮ್ಮ, ನಾರಾಯಣ ಗುರು ಹೀಗೆ ಒಟ್ಟು 830 ವಸತಿ ಶಾಲೆಗಳಿದ್ದು, 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಫಲಿತಾಂಶ ಉತ್ತಮವಾಗಿದ್ದು, ರಾಜ್ಯದಾದ್ಯಂತ ಬೇಡಿಕೆ ಹೆಚ್ಚಿದೆ. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದ 6 ನೇ ತರಗತಿ ಪ್ರವೇಶಕ್ಕೆ ‘ಎ’ ಮತ್ತು ‘ಬಿ’ ವಿಭಾಗ ಮಾಡಿ 50 ರಿಂದ 100 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಮಾಡಲಾಗುವುದು ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲೆಮಾರಿಗಳ ಹೀಗೆ ಎಲ್ಲಾ ಬಡ ಗ್ರಾಮೀಣ ವಿದ್ಯಾರ್ಥಿಗಳು ವಸತಿ ಶಾಲೆಗೆ ಸೇರಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದು, ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ವಸತಿ ಶಾಲೆಗಳನ್ನು ಆರಂಬಿಸಿದೆ. ಆ ನಿಟ್ಟಿನಲ್ಲಿ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದರು.

ರಾಜ್ಯದ ವಿವಿಧ ವಸತಿ ಶಾಲೆಯಲ್ಲಿ ಓದಿದ 14 ವಿದ್ಯಾರ್ಥಿಗಳು ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ)ಗೆ ಆಯ್ಕೆಯಾಗಿದ್ದಾರೆ. ಶೇ.25 ರಷ್ಟಾದರೂ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆಗೆ ಅವಕಾಶ ಮಾಡಬೇಕು ಎಂದು ಸರ್ಕಾರದ ಆಶಯವಾಗಿದ್ದು, ಆ ನಿಟ್ಟಿನಲ್ಲಿ ವಸತಿ ಹಾಗೂ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಿದವರಿಗೆ ಸಾಧ್ಯವಾದಷ್ಟು ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ ಮಾಡಲಾಗುವುದು ಎಂದು ಸಚಿವರು ಹೇಳಿದರು.

ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರುಗುತ್ತಿಗೆ ಶಿಕ್ಷಕರಿಗೆ ಸೇವಾ ಭದ್ರತೆ ನೀಡಲಾಗುವುದು. ಹಾಗೆಯೇ ಶಿಕ್ಷಕರಿಗೆ ಗೌರವಧನ ಹೆಚ್ಚಿಸಲಾಗುವುದು. ಆ ನಿಟ್ಟಿನಲ್ಲಿ 18 ಕೋಟಿ ರೂ. ವೆಚ್ಚವಾಗಲಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲು ಮುಂದಾಗಲಾಗಿದೆ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular