
ಬೆಂಗಳೂರು: ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳನ್ನು ಮುಚ್ಚಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೇ 25 ರವರೆಗೆ ಗಡುವು ನೀಡಿದೆ.
ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ವತಿಯಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿತ್ತು.
ಅನಧಿಕೃತ ಶಾಲೆಗಳ ವಿರುದ್ಧ ದೂರು ಸಲ್ಲಿಸಿದರೂ ಕ್ರಮ ಕೈಗೊಳ್ಳದೆ ಸಮಯ ವ್ಯರ್ಥ ಮಾಡಬಾರದು. ಅನಧಿಕೃತ ಶಾಲೆಗಳ ಪಟ್ಟಿ ನೀಡಿದಲ್ಲಿ ಪೋಷಕರಿಗೂ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವುದರ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿತ್ತು.
ಶಿಕ್ಷಣ ಇಲಾಖೆ 1,316 ಅನಧಿಕೃತ ಶಾಲೆಗಳನ್ನು ಗುರುತಿಸಿದ್ದು, ಇನ್ನೂ ಪರಿಶೀಲನೆ ಕಾರ್ಯ ಮುಂದುವರಿದಿದೆ. ಅನಧಿಕೃತ ಶಾಲೆಗಳನ್ನು ಮುಚ್ಚಲು ಮೇ 25 ರವರೆಗೆ ಗಡುವು ನೀಡಲಾಗಿದೆ. 2023 -24ನೇ ಶೈಕ್ಷಣಿಕ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಬಾರದು. ಯಾವ ಪಠ್ಯ ಕ್ರಮದ ಬೋಧನೆಗೆ ನೋಂದಣಿ ಅನುಮತಿ ಪಡೆಯಲಾಗಿದೆಯೋ ಅದೇ ಪಠ್ಯಕ್ರಮ ಬೋಧನೆ ಮಾಡಬೇಕು. ಅನುಮತಿ ಪಡೆದಷ್ಟೇ ಮಾಧ್ಯಮ ವಿಭಾಗಗಳನ್ನು ನಡೆಸಬೇಕು. ಇಲಾಖೆಯ ಅನುಮತಿ ಇಲ್ಲದೆ ಶಾಲೆಗಳನ್ನು ಸ್ಥಳಾಂತರ ಮಾಡಬಾರದು. ಕರ್ನಾಟಕ ಪಠ್ಯಪುಸ್ತಕ ಸಂಘ ಸರಬರಾಜು ಮಾಡುವ ಪುಸ್ತಕಗಳನ್ನೇ ಖರೀದಿ ಮಾಡಬೇಕು ಎಂದು ಹೇಳಲಾಗಿದೆ.
ಗಡುವು ಮುಗಿದ ನಂತರ ಅನಧಿಕೃತ ಶಾಲೆ ಪತ್ತೆಯಾದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
