ಬೆಂಗಳೂರು: ಗ್ಯಾರೆಂಟಿ ಸರ್ಕಾರದಲ್ಲಿ ಮಕ್ಕಳ ಶೂಗಿಲ್ಲ ವಾರಂಟಿ. ಶಾಲಾ ಮಕ್ಕಳ ಶೂ ಖರೀದಿಯಲ್ಲೂ ಕಮಿಷನ್ ದಂಧೆ. ಕಾಂಗ್ರೆಸ್ ಸರ್ಕಾರದ ಲೂಟಿಕೋರತನಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬೆಡಸಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿಗೂ ಗತಿಯಿಲ್ಲದಂತೆ, ಬಡ ವಿದ್ಯಾರ್ಥಿಗಳಿಗೆ ಕೊಡುವ ಶೂಗಳಲ್ಲೂ ಕಮಿಷನ್ ಹೊಡೆಯುತ್ತಿರುವ ಈ ಕಮಿಷನ್ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.
ಕನಿಷ್ಠ ಗುಣಮಟ್ಟವೂ ಇಲ್ಲದ, ತೊಡಲು ಯೋಗ್ಯವಲ್ಲದ ಕಳಪೆ ಪಾದರಕ್ಷೆಗಳನ್ನು ನೀಡಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವುದನ್ನು ಖಂಡಿಸಿ ಶಾಲಾ ಮಕ್ಕಳು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ಆ ಕಳಪೆ ಶೂಗಳನ್ನು ಶಾಲೆಯ ಮುಂಭಾಗದಲ್ಲೇ ಎಸೆದು ಆಕ್ರೋಶ ಹೊರಹಾಕಿದ್ದಾರೆ. ಬಡವರ, ಹಿಂದುಳಿದವರ, ಶೋಷಿತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿಎಂ ಡಿ.ಕೆ. ಶಿವಕುಮಾರ್ ಅವರೇ, ಬಡ ಸರ್ಕಾರಿ ಶಾಲಾ ಮಕ್ಕಳು ಕಾಲಿಗೆ ಹಾಕುವ ಶೂಗಳಲ್ಲೂ ಕಮಿಷನ್ ಲೂಟಿ ಹೊಡೆಯುವಷ್ಟು ನೀಚ ಸ್ಥಿತಿಗೆ ತಲುಪಿದೆಯಾ ನಿಮ್ಮ ಆಡಳಿತ ಎಂದು ಪ್ರಶ್ನಿಸಿದ್ದಾರೆ.
ತಕ್ಷಣವೇ ಈ ಕಳಪೆ ಶೂ ಪೂರೈಕೆ ಮಾಡಿದ ಭ್ರಷ್ಟ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಕಮಿಷನ್ ದಂಧೆಯಲ್ಲಿ ಭಾಗಿಯಾಗಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜವಾಬ್ದಾರರ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಅಮಾನತುಗೊಳಿಸಬೇಕು. ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ತಕ್ಷಣವೇ ಉತ್ತಮ ಗುಣಮಟ್ಟದ ಶೂಗಳನ್ನು ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.
ಬಡ ಮಕ್ಕಳ ಕಣ್ಣೀರು ಮತ್ತು ಹೆತ್ತವರ ಶಾಪವೇ ಈ ಭ್ರಷ್ಟ ಸರ್ಕಾರದ ಪತನಕ್ಕೆ ನಾಂದಿ ಹಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರೈತರ ಸಾಲ ಮನ್ನಾ ಮಾಡಲು ಆಗ್ರಹ
ಕಾರ್ಮಿಕರಿಗೆ ದಿನನಿತ್ಯದ ಸಂಬಳವೇ ಸಾವಿರ ರೂಪಾಯಿ ಮೇಲ್ಪಟ್ಟಿದೆ. ಹೀಗಿರುವಾಗ ರಾಜ್ಯ ಸರ್ಕಾರ ರೈತರಿಗೆ ಕೇವಲ ಎರಡೂವರೆ ಸಾವಿರ ರೂಪಾಯಿ ಪರಿಹಾರ ನೀಡಿ ಕೈ ತೊಳೆದುಕೊಂಡಿರುವುದು ಖಂಡನೀಯ. ರೈತರಿಗೆ ಎರಡೂವರೆ ಸಾವಿರ ರೂಪಾಯಿ ಬರ ಪರಿಹಾರ ನೀಡುವುದರಿಂದ ನ್ಯಾಯ ಸಿಗುವುದಿಲ್ಲ. ರಿಯಲ್ ಎಸ್ಟೇಟ್ ಮುಖ್ಯಮಂತ್ರಿಗಳು ಈ ಕೂಡಲೇ ರೈತರ ಸಾಲವನ್ನು ಮನ್ನಾ ಮಾಡಲಿ ಎಂದು ಅಶೋಕ್ ಒತ್ತಾಯಿಸಿದ್ದಾರೆ.
ರೈತರಿಗೆ 2500 ರೂ. ಇನ್ ಪುಟ್ ಸಬ್ಸಿಡಿ
ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ನೆರವು ತಲುಪಿಸುವ ಉದ್ದೇಶದಿಂದ NDRF ಅನುದಾನವನ್ನು ನಿರೀಕ್ಷಿಸಿಕೊಂಡು, ರಾಜ್ಯ ಸರ್ಕಾರದಿಂದ ಪ್ರತಿ ರೈತನಿಗೆ ₹2,500 ಇನ್ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವರಾದ ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪ್ರತಿ ರೈತನಿಗೆ ₹2,500 ಇನ್ಪುಟ್ ಸಬ್ಸಿಡಿ ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗಲಿದೆ. ಮೊದಲ ಹಂತದಲ್ಲಿಯೇ ಈ ಮೊತ್ತವನ್ನು ರೈತರಿಗೆ ನೀಡಲಾಗುವುದು. ಅಂದಾಜು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದ್ದು, ಇದನ್ನು ತಕ್ಷಣ ಜಾರಿಗೆ ತರಲಾಗುವುದು ಎಂದರು.
ಇಂದು ರೈತ ಕಷ್ಟದಲ್ಲಿದ್ದಾನೆ. ಹೀಗಾಗಿ NDRF ಅನುದಾನವನ್ನು ನಿರೀಕ್ಷಿಸಿಕೊಂಡು ರಾಜ್ಯ ಸರ್ಕಾರದಿಂದ ಪ್ರತಿ ರೈತನಿಗೆ ₹2,500 ಇನ್ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಿದ್ದೇವೆ. ₹1,250 ಕೋಟಿ ಮೊತ್ತವನ್ನು ಮೊದಲ ಹಂತದಲ್ಲಿಯೇ ನಮ್ಮ ರೈತರಿಗೆ ನೀಡಲಿದ್ದೇವೆ. ಇದು ಸಣ್ಣ ಮೊತ್ತವಲ್ಲ. ಅಂದಾಜು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ. ಈ ನೆರವನ್ನು ನೀಡಲಾಗುವುದು. ಇದರ ಜೊತೆಗೆ ಬೇರೆ ಎಲ್ಲ ರೀತಿಯಲ್ಲಿಯೂ ರೈತರಿಗೆ ಸರ್ಕಾರ ಸಹಾಯಹಸ್ತ ನೀಡಲಿದ್ದೇವೆ ಎಂದು ಹೇಳಿದ್ದಾರೆ.

