ಕರ್ನಾಟಕದ ಕಾಂಗ್ರೆಸ್ ಶಾಸಕರು ವಿರೋಧದ ನಡುವೆಯೇ ವಿದೇಶ ಪ್ರವಾಸದಲ್ಲಿದ್ದಾರೆ. ಇತ್ತ ಇಬ್ಬರು ಪ್ರಮುಖ ನಾಯಕರು ದೆಹಲಿಯಲ್ಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಭೇಟಿ ಮಾಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಾಜಿ ಸಚಿವ ಕೆ.ಎನ್.ರಾಜಣ್ಣ ಶನಿವಾರ ದೆಹಲಿಯಲ್ಲಿದ್ದಾರೆ. ಕೆ.ಎನ್.ರಾಜಣ್ಣ ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ಮಾಡಿದರು.
ವಿ.ಸೋಮಣ್ಣ ಭೇಟಿ ಕುರಿತು ಕೆ.ಎನ್.ರಾಜಣ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ನವದೆಹಲಿಯಲ್ಲಿ ಇಂದು ಭಾರತ ಸರ್ಕಾರದ ಮಾನ್ಯ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣನವರನ್ನು ಭೇಟಿ ಮಾಡಿ ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ವಿಚಾರ ಹಾಗೂ ಇತರೆ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದೆನು’ ಎಂದು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಹೇಳಿಕೆ: ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, “ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಆಗಿರುವ ಮತ್ತು ಮುಂದಾಗುವ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು” ಎಂದು ಹೇಳಿದರು.
“ಕರ್ನಾಟಕದಲ್ಲಿನ ಗೊಂದಲಗಳ ಕುರಿತು ಖರ್ಗೆ ಅವರ ಗಮನಕ್ಕೆ ತಂದಿದ್ದೇವೆ. ಗೊಂದಲಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆ ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.
“ಆದಷ್ಟು ಬೇಗ ಈ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಮತ್ತು ಗೊಂದಲಗಳನ್ನು ತ್ವರಿತವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಪದೇ ಪದೇ ಅಧಿಕಾರದ ಗೊಂದಲಗಳು ಮತ್ತು ಹೇಳಿಕೆಗಳು ಬರದಂತೆ ಪೂರ್ಣವಿರಾಮ ಹಾಕಿ” ಎಂದು ಮನವಿ ಮಾಡಿದ್ದೇವೆ ಎಂದರು.

