ನವದೆಹಲಿ: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರವಾಗಿ ತೀವ್ರ ಚರ್ಚೆ, ಗೊಂದಲಗಳು ಮುಂದುವರೆದಿರುವ ನಡುವೆಯೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಹಾಗೂ ಮುಂದಾಗುವ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿನ ಗೊಂದಲಗಳ ಬಗ್ಗೆ ಖರ್ಗೆ ಅವರ ಗಮನಕ್ಕೆ ತಂದಿರುವುದಾಗಿ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಗೊಂದಲಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಆದಷ್ಟು ಬೇಗ ನಿರ್ಣಯ ಕೈಗೊಳ್ಳುವುದಾಗಿ ಮತ್ತು ಗೊಂದಲಗಳನ್ನು ಬಗೆಹರಿಸುವುದಾಗಿ ಖರ್ಗೆಯವರು ಭರವಸೆ ನೀಡಿದ್ದಾರೆ. ಈ ಕುರಿತು ಈಗಾಗಲೇ ಒಂದು ತೀರ್ಮಾನಕ್ಕೆ ಬರಲಾಗಿದೆ ಎಂದೂ ಖರ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಪದೇ ಪದೇ ಅಧಿಕಾರದ ಗೊಂದಲಗಳು ಮತ್ತು ಹೇಳಿಕೆಗಳು ಬರದಂತೆ ಪೂರ್ಣವಿರಾಮ ಹಾಕಿ ಈ ಸಮಸ್ಯೆಗೆ ಶೀಘ್ರ ಇತ್ಯರ್ಥ ಸಿಗಬೇಕೆಂಬುದು ನಮ್ಮ ನಿರೀಕ್ಷೆ. ಯಾವುದೇ ವಿಳಂಬವಿಲ್ಲದೆ ಇದು ಬೇಗ ಮುಗಿದರೆ ಒಳ್ಳೆಯದು ಎಂದರು.

