ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ನಡೆಸಿದರಲ್ಲಿ ಅಚ್ಚರಿ ಇಲ್ಲ. ಇದೆಲ್ಲವೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಂತ್ರ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡಿ ಇಡಿ ದಾಳಿ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಬಾಮೈದ ಮಂಜುನಾಥ್ ಅವರ ತಂದೆ ದೇವೇಂದ್ರಪ್ಪ ಬಿಜೆಪಿ ನಾಯಕರು. ದೇವೇಂದ್ರಪ್ಪ ಅವರ ಮನೆ ಮೇಲೆ ಯಾಕೆ ಇಡಿ ಅಧಿಕಾರಿಗಳು ದಾಳಿ ನಡೆಸಿಲ್ಲ? ಅವರ ಮಗನ ಮೇಲೆ ದಾಳಿ ನಡೆಸಿದ್ದಾರೆ. ಕಾರಣ ಮಂಜುನಾಥ್ ಕಾಂಗ್ರೆಸ್ ನಾಯಕರೊಂದಿಗೆ ಗುರುತಿಸಿಕೊಂಡಿದ್ದಾರೆಂಬ ಕಾರಣಕ್ಕೆ.
ಸತೀಶ್ ಜಾರಕಿಹೊಳಿ ಸಹೋದರರ ಮನೆ ಮೇಲೆ ಇಡಿ ದಾಳಿ ಏಕಿಲ್ಲ? ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಇವರೆಲ್ಲರ ಮನೆ ಮೇಲೆ ಯಾಕೆ ಇಡಿ ದಾಳಿ ನಡೆಸಿಲ್ಲ? ಅವರೆಲ್ಲರೂ ಬಿಜೆಪಿಯವರು. ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲವೂ ಬಿಜೆಪಿ ನಾಯಕರ ಸೂಚನೆ ಮೇರೆಗೆ ನಡೆಯುತ್ತಿರುವ ದಾಳಿ. ಕೇವಲ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಮಾತ್ರ ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳು ದಾಳಿ ಮಾಡುತ್ತವೆ. ಯಾಕೆ ಬಿಜೆಪಿ ನಾಯಕರೊಬ್ಬರ ಮನೆ ಮೂಲೂ ದಾಳಿ ನಡೆಸುವುದಿಲ್ಲ ಎಂದು ಪ್ರಶ್ನಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಆಪ್ತರ ಮನೆ ಮೇಲೂ ಇಡಿ ದಾಳಿ: ಬೆಳಗಾವಿಯ 5 ಕಡೆ ರೇಡ್
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಗೋಕಾಕ್‌ನಲ್ಲಿರುವ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ ಸತೀಶ್ ಜಾರಕಿಹೊಳಿ ಅವರ ಬಾಮೈದ ಮಂಜುನಾಥ್ ಹಾಗೂ ಜಾರಕಿಹೊಳಿ ಆಪ್ತರ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಬಕಾರಿ ಪರವಾನಗಿ ಹಗರಣಕ್ಕೆ ಸಂಬಂಧಿಸಿದಂತೆ ಹಾಗೂ ವಿದೇಶಿ ಅಕ್ರಮ ಹಣ, ಹವಾಲಾ ಜಾಲದ ನಂಟು ಅನುಮಾನದ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಇಂದು ಮುಂಜಾನೆಯೇ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅತ್ತ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿರುವ ಮನೆ, ಕಚೇರಿ ಮಗಳು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕಚೇರಿ, ಮಗ ರಾಹುಲ್ ಜಾರಕಿಹೊಳಿಗೆ ಸೇರಿದ ಜಾಗಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಬಾಮೈದ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮನೆ ಮೇಲೆ ಎರಡನೇ ಬಾರಿ ಇಡಿ ದಾಳಿ ನಡೆದಿದೆ. ಕಳೆದ ಜೂನ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಮಂಜುನಾಥ್ ಅವರ ಮನೆ, ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಅಥಣಿ ಪ್ರದೇಶಗಳಲ್ಲಿ ಇಡಿ ಸುದೀರ್ಘ ದಾಳಿ ನಡೆಸಿತ್ತು.
ಬಾರ್ ಲೈಸೆನ್ಸ್ ನೀಡುವಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ನಡೆದಿದ್ದ ಆ ಕಾರ್ಯಾಚರಣೆಯ ವೇಳೆ ಮಂಜುನಾಥ್ ಮನೆಯಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್, 5.5 ಲಕ್ಷ ರೂ. ನಗದು ಹಾಗೂ ಬರೋಬ್ಬರಿ 13.3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು. ಅಲ್ಲದೇ ಮಂಜುನಾಥ್ ನಿವಾಸದಲ್ಲಿ ಡೈರಿಯೊಂದು ಪತ್ತೆಯಾಗಿತ್ತು. ಈ ಡೈರಿ ಆಧಾರದ ಮೇಲೆ ಜೂನ್ 24ರಿಂದ ಇ.ಡಿ. ಅಧಿಕಾರಿಗಳು ಕೂಲಂಕುಷ ತನಿಖೆ ನಡೆಸಿದ್ದು, ಮಹತ್ವದ ಸುಳಿವು ದೊರೆತಿದೆ ಎನ್ನಲಾಗಿದೆ. ಡೈರಿಯಲ್ಲಿನ ಮಾಹಿತಿಯನ್ನಾಧರಿಸಿ ಸತೀಶ್ ಜಾರಕಿಹೊಳಿ ಅವರ ಪಾತ್ರದ ಬಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಇನ್ನು ಸತೀಶ್ ಜಾರಕಿಹೊಳಿ ಆಪ್ತರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಾ.ಗಿರೀಶ್ ಸೋನ್ವಾಲಕರ್, ರಾಜು ಧರಮಶೆಟ್ಟಿ ಹಾಗೂ ವಿಠಲ ಪರಸನ್ನವರ್ ಅವರ ಮನೆ, ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ.
ಡಾ. ಗಿರೀಶ್ ಸೋನ್ವಾಲಕರ್ ಅವರ ಬೆಳಗಾವಿ ನಗರದ ಲಕ್ಷ್ಮೀ ಟೇಕ್ ನಲ್ಲಿರುವ ನಿವಾಸ, ರಾಜು ಧರಮಶೆಟ್ಟಿ ಅವರ ಗೋಕಾಕ್ ನಿವಾಸ ಹಾಗೂ ವಿಠಲ ಪರಸನ್ನವರ್ ಅವರ ಗೋಕಾಕ್ ನಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ

