ಬೆಳಗಾವಿ: ಸಚಿವ ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಂಪುಟ ಪುನಾರಚನೆ ನಮ್ಮ ಕೈಯಲ್ಲಿ ಇಲ್ಲ. ಇಂತಹ ವಿಷಯಗಳಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಇದೇ ವೇಳೆ ನಾಯಕತ್ವ ಬದಲಾವಣೆ ವಿಚಾರವೂ ಗೊಂದಲದಲ್ಲಿದೆ. ಗೊಂದಲದ ಬಗ್ಗೆಯೂ ವರಿಷ್ಠರು ಗಮನಿಸುತ್ತಿದ್ದಾರೆ. ಈ ಬಗ್ಗೆ ಅವರೇ ಸ್ಪಷ್ಟ ಪಡಿಸಬೇಕು ಎಂದರು.
ದೆಹಲಿ ಪ್ರವಾಸದ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದೇನೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹನುಮಣ್ಣವರ ಕೆಎಸ್ಆರ್ಟಿಸಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇವಷ್ಟೇ ಎಂದರು.
ಬಿಹಾರ ಚುನಾವಣೆಯಲ್ಲಿ ಗೆಲ್ಲುತ್ತೇವೆಂಬ ಆಶಯವಿತ್ತು. ಆದರೆ ನಮ್ಮ ನಿರೀಕ್ಷೆ ಸುಳ್ಳಾಗಿದೆ. ಇವಿಎಂ ಬಗ್ಗೆ ಅನುಮಾನ ಇದ್ದೇ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ, ಚುನಾವಣೆ ಆಯೋಗ ಸ್ಪಷ್ಟ ಪಡಿಸಬೇಕು ಎಂದರು.
