ಬೆಂಗಳೂರು: ನಮ್ಮ ಸರ್ಕಾರಿ ಶಾಲಾ ಮಕ್ಕಳು ಇಂಗ್ಲಿಷ್ ಕಲಿಕೆಯಲ್ಲಿ ಹಿಂದೆ ಬೀಳಬಾರದು ಎಂಬ ಕಾರಣಕ್ಕೆ ದ್ವಿಭಾಷಾ ಮಾಧ್ಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈಗಾಗಲೇ 15 ಜಿಲ್ಲೆಗಳ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇದು ಜಾರಿಗೆ ಬಂದಿದೆ. ಇಂಗ್ಲಿಷ್ ಅನ್ನು ಕೇವಲ ಭಾಷೆಯಾಗಿ ಕಲಿತರೆ ಸಾಲದು, ಇಂದಿನ ಜಾಗತಿಕ ಸವಾಲುಗಳನ್ನು ಎದುರಿಸಲು ಚೆನ್ನಾಗಿ ಮಾತನಾಡಲೂ ಕಲಿಯಬೇಕು. ಇದಕ್ಕಾಗಿ ಈ ವರ್ಷ ಆಯ್ದ ಸರ್ಕಾರಿ ಶಾಲೆಗಳಲ್ಲಿ ಅಂದರೆ, ʻಕರ್ನಾಟಕ ಪಬ್ಲಿಕ್ ಶಾಲೆʼಗಳು, ʻಪಿಎಂ ಶ್ರೀ ಕೆಪಿಎಸ್ʼ ಶಾಲೆಗಳು ಮತ್ತು ಅವುಗಳೊಂದಿಗೆ ಸಂಯೋಜಿತ ಘಟಕ ಶಾಲೆಗಳಲ್ಲಿ ಹಾಗೂ ದ್ವಿಭಾಷಾ ಮಾಧ್ಯಮ ಹೊಂದಿರುವ ಕೆಲವು ಶಾಲೆಗಳು ಸೇರಿದಂತೆ ರಾಜ್ಯದ ಒಟ್ಟು 1,919 ಶಾಲೆಗಳಲ್ಲಿ ʻಸ್ಪೋಕನ್ ಇಂಗ್ಲಿಷ್ʼ ಹೇಳಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.
ಈ ಶಾಲೆಗಳಲ್ಲಿ1 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿ ಆದೇಶ ಹೊರಡಿಸಿದ್ದೇವೆ. 2026ರ ಸೆಪ್ಟೆಂಬರ್ ನಿಂದ 2027ರ ಫೆಬ್ರವರಿ ವರೆಗೆ ಆರು ತಿಂಗಳ ಕಾಲ ಈ ಕಾರ್ಯಕ್ರಮ ಜಾರಿಗೆ ಬರಲಿದ್ದು, ಸ್ಪೋಕನ್ ಇಂಗ್ಲಿಷ್ ಹೇಳಿಕೊಡಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ. ಇವರಿಗೆ ವೇತನ ನೀಡಲು 19.67 ಕೋಟಿ ರೂ.ಗಳನ್ನು ಒದಗಿಸಲಿದ್ದೇವೆ. ಸ್ಥಳೀಯವಾಗಿ ಕಾರ್ಯನಿರತ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳಿಗೆ(SDMC) ಸೂಚಿಸಿದ್ದೇವೆ. ನಗರದ ಖಾಸಗಿ ಶಾಲೆಗಳ ಮಕ್ಕಳಂತೆ ನಮ್ಮ ಸರ್ಕಾರಿ ಶಾಲಾ ಮಕ್ಕಳೂ ಆತ್ಮವಿಶ್ವಾಸದಿಂದ ಇಂಗ್ಲಿಷ್‌ನಲ್ಲಿ ಸಂವಹನ ನಡೆಸಬೇಕು. ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಇದೇ ನಮ್ಮ ಕನಸು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

