ವಿಜಯನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆ ಪ್ರಜಾಸೇವೆ ಇಲಾಖೆ ಉದ್ಘಾಟನೆಗೊಂಡಿದ್ದು, ಇದೇ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಹಲವಾರು ಮಹತ್ವದ ಘೋಷಣೆ ಮಾಡಿದ್ದಾರೆ.
ವಿಜಯನಗರದ ಕೂಡ್ಲಗಿಯಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಅಕ್ಷರ ಸೇವೆಯೇ ಪರಮಾತ್ಮನ ಸೇವೆ. ಸಮಾಜವನ್ನು ತಿದ್ದಿ ತೀಡುವ ಶಿಕ್ಷಕರಿಗೆ ಅರ್ಹ ಗೌರವ ಸಿಗಬೇಕು. ವೈದ್ಯರ ಹೆಸರಿನ ಮುಂದೆ ‘Dr’ ಎಂದು ಬಳಸುವಂತೆ, ಇನ್ಮುಂದೆ ಪ್ರತಿಯೊಬ್ಬ ಶಿಕ್ಷಕರ ಹೆಸರಿನ ಮುಂದೆಯೂ ಗೌರವಾರ್ಥವಾಗಿ ‘Tr’ ಎಂದು ಸಂಬೋಧಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.
ಬಡ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಶಕ್ತಿ ತುಂಬಲು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7ರಷ್ಟು ಆಂತರಿಕ ಮೀಸಲಾತಿ ನೀಡಲು ಸಚಿವ ಸಂಪುಟಸಭೆಯಲ್ಲಿ ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಇದರ ಜಾರಿಯ ರೂಪುರೇಷೆ ಪ್ರಕಟಿಸುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಪ್ರಜಾಸೇವೆ ಅಭಿಯಾನದ ಮೂಲಕ ಮನೆ ಬಾಗಿಲಿಗೆ ಸರ್ಕಾಅರ ಬರಲಿದೆ. ‘ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾಗಿರುವ ಪ್ರಜಾಸೇವಾ ಅಭಿಯಾನದಿಂದ ಸಾಕಷ್ಟು ಅನುಕೂಲಗಳಾಗಲಿವೆ ಎಣ್ದರು.
ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಜಿಲ್ಲಾ ಮಂತ್ರಿಗಳು, ಶಾಸಕರು ಮತ್ತು ಅಧಿಕಾರಿಗಳು ಗ್ರಾಮ ಪಂಚಾಯಿತಿ, ಹೋಬಳಿ ಹಾಗೂ ತಾಲೂಕು ಮಟ್ಟಕ್ಕೆ ಖುದ್ದು ತೆರಳಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ವಿಧಾನಸೌಧಕ್ಕಾಗಲಿ, ಜಿಲ್ಲಾಧಿಕಾರಿ ಕಚೇರಿಗಳಿಗಾಗಲಿ ಅಲೆಯಲು ಸಾಧ್ಯವಾಗದ ದುರ್ಬಲ ವರ್ಗದವರಿಗೆ ಸ್ಥಳದಲ್ಲೇ ನ್ಯಾಯ ಒದಗಿಸುವುದು ಇದರ ಮೂಲ ಉದ್ದೇಶ. ಈಗಾಗಲೇ 50 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಅರ್ಜಿ ಸ್ವೀಕಾರಕ್ಕೆ ಸೀಮಿತವಾಗದೆ ಪರಿಹಾರ ಸಿಗುವವರೆಗೂ ಸರ್ಕಾರ ಬೆನ್ನಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ 136 ಸ್ಥಾನಗಳನ್ನು ನೀಡಿ ಅಧಿಕಾರ ಕೊಟ್ಟಿರುವ ನೀವೇ ನಿಜವಾದ ಮಾಲೀಕರು. ನನ್ನನ್ನು ನಾಡದೊರೆ ಎಂದು ಕರೆಯಬೇಡಿ, ನಾನು ನಿಮ್ಮ ಪ್ರಜಾಸೇವಕ. ಜನರ ಯಶಸ್ಸೇ ಸರ್ಕಾರದ ನಿಜವಾದ ಮಾನದಂಡ. ಕಂದಾಯ ಇಲಾಖೆ ಮೂಲಕ ಹಕ್ಕುಪತ್ರ ವಿತರಣೆ ಮತ್ತು ಭೂಮಿ ಗ್ಯಾರಂಟಿ ಒದಗಿಸುವ ಕಾರ್ಯ ಮುಂದುವರಿಯಲಿದ್ದು, ಕಾನೂನು ಹೋರಾಟ ನಡೆಸಲು ಶಕ್ತಿಯಿಲ್ಲದ ಬಡ ನಾಗರಿಕರಿಗೆ ಸರ್ಕಾರದ ವತಿಯಿಂದಲೇ ಉಚಿತವಾಗಿ ವಕೀಲರನ್ನು ಒದಗಿಸಿ ನ್ಯಾಯ ಕೊಡಿಸಲಾಗುವುದು ಎಂದರು.
ಯಾವುದೇ ರಾಜಕೀಯ, ಧರ್ಮ-ಜಾತಿ ಇಲ್ಲದೆ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿಯೂ ಈ ಪ್ರಜಾಸೇವಾ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರದಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಮಧ್ಯದಲ್ಲಿದ್ದು ಕೆಲಸ ಮಾಡಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರು ತಾಲೂಕು, ಹೋಬಳಿ ಮಟ್ಟದಲ್ಲಿ ಹಾಗೂ ಶಾಸಕರು ಪಂಚಾಯಿತಿ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ.
ಶಾಸಕರು ಉಪಸ್ಥಿತರಿಲ್ಲದಿದ್ದರೆ ಅಧಿಕಾರಿಗಳೇ ಖುದ್ದಾಗಿ ಪಂಚಾಯಿತಿ ಕೇಂದ್ರಗಳಿಗೆ ತೆರಳಿ, ಸಣ್ಣ ಸಭೆಗಳನ್ನು ನಡೆಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಬೇಕು.
ಜನರ ಮುಖದಲ್ಲಿ ನಗು ಕಾಣುವುದೇ ಸರ್ಕಾರದ ಯಶಸ್ಸು: ಸಾರ್ವಜನಿಕರ ಅರ್ಜಿಗಳಿಗೆ ಕೇವಲ ಸ್ವೀಕೃತಿ ನೀಡುವುದು ಮುಖ್ಯವಲ್ಲ; ಅವರಿಗೆ ಸೂಕ್ತ ಪರಿಹಾರ ತಲುಪಿದಾಗ ಮಾತ್ರ ಯೋಜನೆಯ ನೈಜ ಯಶಸ್ಸು ಸಾಧ್ಯ.
ವಿಜಯನಗರದ ಪವಿತ್ರ ಭೂಮಿಯಲ್ಲಿ ಈ ಜನಪರ ಯೋಜನೆಗೆ ಚಾಲನೆ ನೀಡಲಾಗಿದೆ. ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ. ತಿಂಗಳಿಗೆ ಎರಡು ದಿನ ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ಪಿಂಚಣಿ, ಭೂಮಿ ವ್ಯಾಜ್ಯ, ಸರ್ಕಾರದ ಸೌಲಭ್ಯಗಳು, ಖಾತೆ ಬದಲಾವಣೆ, ಗ್ಯಾರಂಟಿ ಯೋಜನೆಗಳು ಹಾಗೂ ಮನೆ-ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು. ಬಡವರು ಹಾಗೂ ಶೋಷಿತರಿಗೆ ತಹಶೀಲ್ದಾರ್, ಎಸಿ ಅಥವಾ ಡಿಸಿ ಮಟ್ಟದ ವ್ಯಾಜ್ಯಗಳಲ್ಲಿ ಹೋರಾಡಲು ಉಚಿತವಾಗಿ ವಕೀಲರ ಸೇವೆ ಒದಗಿಸಿ ಕಾನೂನು ನೆರವು ನೀಡಲಾಗುವುದು. ಅರ್ಜಿ ತಿರಸ್ಕೃತಗೊಂಡರೆ ಅದಕ್ಕೆ ಕಾರಣವನ್ನು ಸ್ಪಷ್ಟಪಡಿಸಲಾಗುವುದು. ಅರ್ಜಿದಾರರಿಗೆ ಸಂಪೂರ್ಣ ಪರಿಹಾರ ಸಿಗುವವರೆಗೂ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ.
ಸಮಾಜದ ಪ್ರತಿಯೊಂದು ವರ್ಗಕ್ಕೂ ಅಂಬೇಡ್ಕರ್ ಅವರ ಚಿಂತನೆಯಂತೆ ಸಮಾನ ಗೌರವ ಸಿಗಬೇಕು ಎಂಬುದು ಸರ್ಕಾರದ ಆಶಯ. ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ವಿರೋಧ ಪಕ್ಷಗಳಿಗೆ ಅದನ್ನು ಕಾರ್ಯರೂಪಕ್ಕೆ ತಂದು ತೋರಿಸಿದ್ದೇವೆ. ಪ್ರಜಾಸೇವಾ ಯೋಜನೆಯೂ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ವಿರೋಧ ಪಕ್ಷಗಳ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿರುವ ಸಿಎಂ ಡಿ.ಕೆ.ಶಿವಕುಮಾರ್, ಬಾಗಲಕೋಟೆ ಸೇರಿದಂತೆ ನೆರೆ-ಬರ ಪರಿಸ್ಥಿತಿಯನ್ನು ಹೆಲಿಕಾಪ್ಟರ್ನಲ್ಲಿ ಸಮೀಕ್ಷೆ ನಡೆಸಿದ್ದಕ್ಕೆ ಟೀಕೆ ಮಾಡುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಾಗಲೂ ಹೀಗೆಯೇ ಟೀಕಿಸಿದ್ದರು, ಆದರೆ ಇಂದು ಆ ಯೋಜನೆಗಳು ಯಶಸ್ವಿಯಾಗಿ ಜನರ ಮನೆ ತಲುಪಿವೆ. ಟೀಕೆಗಳು ಸಾಯುತ್ತವೆ, ನಾವು ಮಾಡಿದ ಜನಪರ ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.

