ತಂತ್ರಜ್ಞಾನ ಬೆಳೆದಂತೆ ನಮ್ಮ ದಿನನಿತ್ಯದ ಬದುಕಿನ ರೀತಿಯೂ ಬದಲಾಗುತ್ತಿದೆ. ಒಂದು ಕಾಲದಲ್ಲಿ ಮನೆಯ ಕೆಲಸಕ್ಕೆ ಸಹಾಯ ಬೇಕೆಂದರೆ ಪರಿಚಯಸ್ಥರ ಮೂಲಕ ಯಾರನ್ನಾದರೂ ಹುಡುಕಬೇಕಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಮೊಬೈಲ್‌ನಲ್ಲಿ ಆ್ಯಪ್ ತೆರೆದು, ಬೇಕಾದ ಕೆಲಸವನ್ನು ಆಯ್ಕೆ ಮಾಡಿ ಬುಕ್ ಮಾಡಿದರೆ ಸಾಕು. ಕೆಲವೇ ನಿಮಿಷಗಳಲ್ಲಿ ಸಹಾಯಕ್ಕೆ ವ್ಯಕ್ತಿಯೊಬ್ಬರು ಮನೆಗೆ ಬರುವ ಸೇವೆಗಳು ನಗರಗಳಲ್ಲಿ ಜನಪ್ರಿಯವಾಗುತ್ತಿವೆ.
ಆನ್‌ಲೈನ್‌ನಲ್ಲಿ ದಿನಸಿ ಸಾಮಾನು ತರಿಸಿಕೊಳ್ಳುವುದು, ಊಟ ಆರ್ಡರ್ ಮಾಡುವುದು, ಕ್ಯಾಬ್ ಬುಕ್ ಮಾಡುವುದು ಈಗ ಹೊಸ ವಿಷಯವೇನಲ್ಲ. ಇದೇ ಸಾಲಿಗೆ ಮನೆಯ ಸಣ್ಣಪುಟ್ಟ ಕೆಲಸಗಳಿಗೂ ತಾತ್ಕಾಲಿಕ ಸಹಾಯ ಪಡೆಯುವ ಸೇವೆಗಳು ಸೇರ್ಪಡೆಯಾಗಿವೆ.
15 ನಿಮಿಷದಲ್ಲಿ ಮನೆಗೆ ಬರ್ತಾರೆ House Help
ನಿಮ್ಮ ಮನೆಯ ಬಾತ್‌ರೂಮ್ ಸ್ವಚ್ಛ ಮಾಡಬೇಕಿದೆ ಎಂದುಕೊಳ್ಳಿ. ಸಿಂಕ್‌ನಲ್ಲಿ ಪಾತ್ರೆಗಳು ಹಾಗೆಯೇ ಬಿದ್ದಿವೆ. ಸೀಲಿಂಗ್ ಫ್ಯಾನ್ ಮೇಲೆ ಧೂಳು ತುಂಬಿದೆ. ಗಾರ್ಡನ್‌ನ ಗಿಡಗಳಿಗೆ ನೀರು ಹಾಕಬೇಕಿದೆ. ಬಟ್ಟೆಗಳನ್ನು ಒಗೆದು ಮಡಚಿ ಇಡಲು ಸಮಯವಿಲ್ಲ.
ಇಂತಹ ಕೆಲಸಗಳನ್ನು ಒಂದೊಂದಾಗಿ ಮಾಡಲು ಇಡೀ ದಿನ ಬೇಕಾಗಬಹುದು. ಆದರೆ ಈಗ ಇವುಗಳಲ್ಲಿ ಬೇಕಾದ ಕೆಲಸವನ್ನು ಆ್ಯಪ್‌ನಲ್ಲಿ ಆಯ್ಕೆ ಮಾಡಿಕೊಂಡು ಸಹಾಯ ಪಡೆಯುವ ಅವಕಾಶ ಕೆಲವು ನಗರಗಳಲ್ಲಿ ಲಭ್ಯವಿದೆ.
ಬುಕ್ಕಿಂಗ್ ಮಾಡಿದ ನಂತರ ಕೆಲಸಕ್ಕೆ ಅನುಗುಣವಾಗಿ ಸಹಾಯಕರು ಮನೆಗೆ ಬಂದು ಕೆಲಸ ಮುಗಿಸಿ ತೆರಳುತ್ತಾರೆ. ಕೆಲಸದ ಸ್ವರೂಪಕ್ಕೆ ಅನುಗುಣವಾಗಿ ಕೆಲವೇ ನಿಮಿಷಗಳಿಂದ ಒಂದು ಗಂಟೆಯವರೆಗೆ ಸಮಯ ಬೇಕಾಗಬಹುದು.
ಬಟ್ಟೆ ಜೋಡಿಸುವುದರಿಂದ ಬಟಾಣಿ ಸುಲಿಯುವವರೆಗೆ
ಈ ಸೇವೆಗಳ ವಿಶೇಷತೆ ದೊಡ್ಡ ಮನೆಕೆಲಸಗಳಿಗೆ ಮಾತ್ರ ಸೀಮಿತವಾಗಿಲ್ಲ ಎನ್ನುವುದು. ದಿನನಿತ್ಯದಲ್ಲಿ ಸಮಯ ತೆಗೆದುಕೊಳ್ಳುವ ಸಣ್ಣಪುಟ್ಟ ಕೆಲಸಗಳಿಗೂ ಜನರು ಸಹಾಯ ಪಡೆಯುತ್ತಿದ್ದಾರೆ.
ಬಟಾಣಿ ಸುಲಿಯುವುದು, ತರಕಾರಿ ಕತ್ತರಿಸುವುದು, ಬಟ್ಟೆಗಳನ್ನು ವಿಂಗಡಿಸುವುದು, ಒಗೆದು ಮಡಚುವುದು, ಇಸ್ತ್ರಿ ಮಾಡುವುದು, ಮನೆ ಸ್ವಚ್ಛಗೊಳಿಸುವುದು, ಪಾತ್ರೆ ತೊಳೆಯುವುದು, ಸಾಮಾನುಗಳನ್ನು ಅನ್‌ಪ್ಯಾಕ್ ಮಾಡಿ ಜೋಡಿಸುವುದು ಸೇರಿದಂತೆ ಹಲವು ಕೆಲಸಗಳಿಗೆ ಸಹಾಯ ಪಡೆಯಬಹುದು.
ಉದಾಹರಣೆಗೆ, ಒಂದು ವಾರದ ಪ್ರವಾಸದಿಂದ ಮನೆಗೆ ಬಂದಿದ್ದೀರಿ ಎಂದುಕೊಳ್ಳಿ. ಮೂರು ಸೂಟ್‌ಕೇಸ್‌ಗಳಲ್ಲಿ ಬಟ್ಟೆಗಳು ತುಂಬಿವೆ. ಕೆಲವು ಬಟ್ಟೆಗಳನ್ನು ತೊಳೆಯಬೇಕು, ಇನ್ನೂ ಕೆಲವು ಇಸ್ತ್ರಿ ಮಾಡಬೇಕು. ಮರುದಿನವೇ ಕೆಲಸಕ್ಕೆ ಹೋಗಬೇಕಿದೆ. ಇಂತಹ ಸಂದರ್ಭದಲ್ಲಿ ಎಲ್ಲವನ್ನೂ ನೀವೇ ಮಾಡುವ ಬದಲು ಅಗತ್ಯವಿರುವ ಕೆಲಸಕ್ಕೆ ಮಾತ್ರ ಸಹಾಯ ಪಡೆಯಬಹುದು.
ಬೇಕಾದ ಕೆಲಸಕ್ಕೆ ಮಾತ್ರ ಪಾವತಿ
ಇಂತಹ ಸೇವೆಗಳಲ್ಲಿ ಮತ್ತೊಂದು ಅನುಕೂಲವೆಂದರೆ, ಪ್ರತಿಯೊಂದು ಕೆಲಸಕ್ಕೂ ಪ್ರತ್ಯೇಕವಾಗಿ ಸೇವೆ ಪಡೆಯುವ ಅವಕಾಶ. ನಿಯಮಿತವಾಗಿ ಮನೆಗೆ ಬರುವ ಕೆಲಸದವರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ.
ಆ್ಯಪ್‌ನಲ್ಲಿ ಕೆಲಸವನ್ನು ಆಯ್ಕೆ ಮಾಡಿ ಬುಕ್ ಮಾಡಬಹುದು. ಸೇವೆ ಪೂರ್ಣಗೊಂಡ ನಂತರ ಪಾವತಿಯನ್ನೂ ಆ್ಯಪ್ ಮೂಲಕವೇ ಮಾಡಬಹುದಾಗಿದೆ. ಕೆಲಸಕ್ಕೆ ಅನುಗುಣವಾಗಿ ಪರಿಣತಿ ಹೊಂದಿರುವ ಸಿಬ್ಬಂದಿಯನ್ನು ಕಳುಹಿಸುವ ವ್ಯವಸ್ಥೆಯೂ ಕೆಲವು ಸೇವೆಗಳಲ್ಲಿ ಇದೆ.
ಇಸ್ತ್ರಿ ಕೆಲಸಕ್ಕೆ ಆ ಕೆಲಸ ಗೊತ್ತಿರುವವರು, ಸ್ವಚ್ಛತೆಗೆ ತರಬೇತಿ ಪಡೆದವರು ಅಥವಾ ಅಡುಗೆಗೆ ಅನುಭವ ಹೊಂದಿರುವವರನ್ನು ಕಳುಹಿಸುವ ಮಾದರಿ ಕಾಣಿಸುತ್ತಿದೆ.
ಬೆಂಗಳೂರು, ದೆಹಲಿ ಸೇರಿದಂತೆ ದೊಡ್ಡ ನಗರಗಳಲ್ಲಿ ಇಂತಹ ಸೇವೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ಕೆಲಸದಲ್ಲಿ ಬ್ಯುಸಿಯಾಗಿರುವವರು, ಏಕಾಂಗಿಯಾಗಿ ವಾಸಿಸುವವರು, ವಯಸ್ಸಾದವರು ಅಥವಾ ಮನೆಕೆಲಸಕ್ಕೆ ಸಮಯ ಮೀಸಲಿಡಲು ಸಾಧ್ಯವಾಗದ ಕುಟುಂಬಗಳಿಗೆ ಈ ರೀತಿಯ ಸೇವೆಗಳು ಅನುಕೂಲವಾಗುತ್ತಿವೆ.
ನಗರ ಜೀವನದಲ್ಲಿ ಸಮಯವೇ ದೊಡ್ಡ ಸಂಪನ್ಮೂಲವಾಗಿರುವುದರಿಂದ, ಹಣ ಪಾವತಿಸಿ ಕೆಲಸವನ್ನು ಬೇರೆಯವರಿಂದ ಮಾಡಿಸಿಕೊಳ್ಳುವ ಮನಸ್ಥಿತಿಯೂ ಹೆಚ್ಚಾಗಿದೆ.
ಒಮ್ಮೆ ಮನೆಗೆಲಸ ಎಂದರೆ ದಿನನಿತ್ಯದ ದೊಡ್ಡ ಜವಾಬ್ದಾರಿ. ಈಗ ಅದನ್ನೇ ಸಣ್ಣ ಸಣ್ಣ ಕೆಲಸಗಳಾಗಿ ವಿಂಗಡಿಸಿ, ಬೇಕಾದಾಗ ಬೇಕಾದ ಕೆಲಸಕ್ಕೆ ಮಾತ್ರ ಸಹಾಯ ಪಡೆಯುವ ವ್ಯವಸ್ಥೆ ರೂಪುಗೊಳ್ಳುತ್ತಿದೆ.
ಐದು ವರ್ಷಗಳ ಹಿಂದೆ ಇಂತಹ ಸೇವೆಗಳು ಇಷ್ಟು ಸುಲಭವಾಗಿ ಲಭ್ಯವಾಗುತ್ತವೆ ಎಂದು ಬಹುತೇಕರು ಊಹಿಸಿರಲಿಲ್ಲ. ಇಂದು ಮೊಬೈಲ್‌ನಲ್ಲಿ ಕೆಲವೇ ಕ್ಲಿಕ್‌ಗಳಲ್ಲಿ ಊಟದಿಂದ ದಿನಸಿ, ಕ್ಯಾಬ್‌ನಿಂದ ಮನೆಕೆಲಸದವರೆಗೆ ಹಲವು ಸೇವೆಗಳನ್ನು ಪಡೆಯಬಹುದು.
ನಗರ ಜೀವನದ ವೇಗ ಹೆಚ್ಚಾದಂತೆ, ಸಮಯ ಉಳಿಸುವ ಇಂತಹ ಸೇವೆಗಳ ಅಗತ್ಯವೂ ಹೆಚ್ಚಾಗುತ್ತಿದೆ. ಮುಂದೆ ಮನೆಕೆಲಸದ ದೊಡ್ಡ ಭಾಗವೇ ಇದೇ ರೀತಿಯ ಆನ್‌ಡಿಮ್ಯಾಂಡ್ ಸೇವೆಗಳ ಮೂಲಕ ನಡೆಯುವ ಸಾಧ್ಯತೆಯೂ ಇದೆ.

