ಬೇಸಿಗೆಯಲ್ಲಿ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿದ್ದ ಕನ್ನಡ ಚಿತ್ರರಂಗ ಈ ಬಾರಿ ವಿವಾದದಿಂದ ಸದ್ದು ಮಾಡುತ್ತಿದೆ. ತಮಗನಿಸಿದ್ದನ್ನು ನೇರವಾಗಿ ಹೇಳಿ ವಿವಿಧ ವಿಷಯಗಳಲ್ಲಿ ವಿವಾದ ಮಾಡಿಕೊಳ್ಳುತ್ತಿದ್ದ ನಟ ಚೇತನ್ ಅಹಿಂಸಾ ಈ ಬಾರಿ ಕನ್ನಡ ಚಿತ್ರರಂಗ ಕಂಡ ಸಾರ್ವಕಾಲಿಕ ಸೂಪರ್ ಸ್ಟಾರ್, ವರನಟ ಡಾ. ರಾಜ್‌ಕುಮಾರ್ ಕುರಿತು ಮಾತನಾಡಿ ಚಿತ್ರರಂಗದ ಪಾಲಿಗೆ ವಿಲನ್ ಆಗಿದ್ದಾರೆ.
ಅಣ್ಣಾವ್ರ ಹುಟ್ಟುಹಬ್ಬದ ದಿನ ಟಿವಿ9 ಕನ್ನಡ ‘ಅಣ್ಣಾವ್ರ ಸಮಾಧಿ ಕೇವಲ ಸಮಾಧಿಯಲ್ಲ, ದೇವಸ್ಥಾನವಾಗಿದೆ’ ಎಂದು ಹಂಚಿಕೊಂಡಿದ್ದ ಸುದ್ದಿಯೊಂದರ ಸ್ಕ್ರೀನ್‌ಶಾಟ್ ಹಂಚಿಕೊಂಡು ಟ್ವೀಟ್ ಮಾಡಿದ್ದ ನಟ ಚೇತನ್ ರಾಜ್‌ಕುಮಾರ್‌ರವರ ಬಗ್ಗೆ ಗೌರವವಿದೆ, ಆದರೆ ಒಬ್ಬ ನಟನಿಗೆ ಬೆಂಗಳೂರು ನಗರದ ಕೇಂದ್ರ ಭಾಗದ ಎರಡೂವರೆ ಎಕರೆ ಜಾಗ ನೀಡುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದರು.
ಈ ಟ್ವೀಟ್ ಹೊರಬರುತ್ತಿದ್ದಂತೆ ವಿವಾದ ಎದ್ದಿತ್ತು. ರಾಜ್ ಅಭಿಮಾನಿಗಳು ರೊಚ್ಚಿಗೆದ್ದು ಚೇತನ್ ವಿರುದ್ಧ ಪೋಸ್ಟ್ ಹಾಗೂ ಕಾಮೆಂಟ್‌ಗಳ ಸುರಿಮಳೆಗೈದಿದ್ದರು, ಹಾಗೆಯೇ ಕೂಡಲೇ ಚೇತನ್ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಚೇತನ್ ತಾನೂ ಸಹ ರಾಜ್‌ಕುಮಾರ್ ಅಭಿಮಾನಿಯಾಗಿದ್ದು, ಅವರನ್ನು ಚಿಕ್ಕ ವಯಸ್ಸಿನಿಂದ ಹಿಂಬಾಲಿಸುತ್ತಾ ಬಂದಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೇ ಕನ್ನಡದ ಹಲವು ಕಲಾವಿದರನ್ನು ಉಲ್ಲೇಖಿಸಿ ಅವರುಗಳಿಗೆ ಹೇಗೆ ಅವರವರ ಹುಟ್ಟೂರಿನಲ್ಲಿ ಸಮಾಧಿಗೆ ಜಾಗ ನೀಡಿದ್ದರೋ ಅದೇ ರೀತಿ ರಾಜ್‌ಕುಮಾರ್‌ರಿಗೂ ನೀಡಬೇಕಿತ್ತು. ಇದು ಸರ್ಕಾರ ತನ್ನ ಬೇಳೆ ಬೇಯಿಸಿಕೊಳ್ಳಲು ಮಾಡಿದ್ದ ಕೆಲಸ, ನಾನು ಮಾತನಾಡಿದ್ದರಲ್ಲಿ ತಪ್ಪಿಲ್ಲ, ಕ್ಷಮೆ ಕೇಳಲ್ಲ ಎಂದಿದ್ದರು.
ಇದರಿಂದ ಕೋಪಕ್ಕೊಳಗಾದ ರಾಜ್‌ಕುಮಾರ್ ಅಭಿಮಾನಿಗಳು ಚೇತನ್‌ಗೆ ಮುತ್ತಿಗೆ ಹಾಕಿದರು. ರಾಜ್‌ಕುಮಾರ್ ಅಭಿಮಾನಿ, ನಿರ್ಮಾಪಕ ಹಾಗೂ ವಾಣಿಜ್ಯ ಮಂಡಳಿಯ ಸದಸ್ಯ ಸಾರಾ ಗೋವಿಂದು ಸಹ ಚೇತನ್ ವಿರುದ್ಧ ಆಕ್ರೋಶ ಹೊರಹಾಕಿದರು. ಎದುರಿಗೆ ಸಿಕ್ಕ ತನ್ನ ವಿರುದ್ಧ ಸಾರಾ ಗೋವಿಂದು ಆಕ್ರೋಶ ಹೊರಹಾಕಿದ್ದನ್ನು ಕಂಡ ಚೇತನ್ ‘ಸರ್ ನೀನು ಅಂತಾ ಮಾತನಾಡಬೇಡಿ, ಮರ್ಯಾದೆ ಕೊಟ್ಟು ಮಾತನಾಡಿ’ ಎಂದು ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಸಾರಾ ಗೋವಿಂದು ‘ನೀನ್ ಯಾವನು ಅಂತಾ ಮರ್ಯಾದೆ ಕೊಡ್ತಾರೋ, ನೀನು ಯಾರು? ಅಂಥ ದೊಡ್ಡ ಮನುಷ್ಯನ ಬಗ್ಗೆ ಮಾತನಾಡಿ ಕ್ಷಮೆ ಕೇಳಲ್ಲ ಎನ್ನುತ್ತೀಯಲ್ಲ, ನಿನಗೆ ಕರ್ನಾಟಕದಲ್ಲಿ ಇರೋಕೆ ಯೋಗ್ಯತೆ ಇದಿಯೇನೋ ನನ್ನ ಮಗನೆ’ ಎಂದು ಕಿಡಿಕಾರಿದ್ದಾರೆ.

