ನೈಋತ್ಯ ಕೊಲಂಬಿಯಾದಲ್ಲಿ ಜನನಿಬಿಡ ರಸ್ತೆಯಲ್ಲಿ ಬಾಂಬ್ ದಾಳಿ ನಡೆದಿದೆ. ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು ಐದು ಮಕ್ಕಳು ಸೇರಿದಂತೆ ಕನಿಷ್ಠ 38 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಾರಾಂತ್ಯದಲ್ಲಿ ಈ ಘಟನೆಯು ಭಯೋತ್ಪಾದಕ ದಾಳಿಯ “ಅಲೆಯ” ಭಾಗವಾಗಿದೆ ಎಂದು ಕೊಲಂಬಿಯಾದ ಅಧಿಕಾರಿಗಳು ಹೇಳಿದ್ದಾರೆ,
“ನಾಗರಿಕರ ಮೇಲೆ ವಿವೇಚನಾರಹಿತ ದಾಳಿಯಲ್ಲಿ ಕ್ಯಾಜಿಬಿಯೊದ ಎಲ್ ಟ್ಯೂನೆಲ್ ವಲಯದಲ್ಲಿರುವ ಪ್ಯಾನ್-ಅಮೆರಿಕನ್ ಹೆದ್ದಾರಿಯಲ್ಲಿ ಸ್ಫೋಟಕ ಸಾಧನವನ್ನು ಸ್ಫೋಟಿಸಲಾಗಿದೆ” ಎಂದು ಕಾಕಾ ಗವರ್ನರ್ ಆಕ್ಟೇವಿಯೊ ಗುಜ್ಮಾನ್ ತಿಳಿಸಿದ್ದಾರೆ.
ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ “ರಕ್ಷಣಾ ಕಾರ್ಯಾಚರಣೆ ಸಂಘಟಿಸಲು” ಸಹಾಯ ಮಾಡಲು ಸ್ಫೋಟದ ಸ್ಥಳದಲ್ಲಿದ್ದರು. “ಈ ಗಂಭೀರ ಪರಿಸ್ಥಿತಿಯನ್ನು ಪರಿಹರಿಸಲು ರಾಷ್ಟ್ರೀಯ ಮಟ್ಟದ ಭದ್ರತಾ ಮಂಡಳಿಯನ್ನು ಪ್ರಾರಂಭಿಸುತ್ತಿದ್ದಾರೆ” ಎಂದು ಗುಜ್ಮಾನ್ ಹೇಳಿದ್ದಾರೆ.
ಬಾಂಬ್ ಸ್ಪೋಟದ ತೀವ್ರತೆಗೆ ರಸ್ತೆಯ ಮಧ್ಯದಲ್ಲಿ ಆಳವಾದ ಕುಳಿ ಬಿದ್ದಿದೆ. ಧೂಳು ಮತ್ತು ಅವಶೇಷಗಳಿಂದ ಆವೃತವಾದ ಕಾರುಗಳು, ಟ್ರಕ್‌ಗಳು ಮತ್ತು ಬಸ್‌ಗಳು ಸ್ಫೋಟದ ಸ್ಥಳದ ಸುತ್ತಲೂ ಬಿದ್ದಿವೆ, ಜೊತೆಗೆ ಮೃತರ ಶವಗಳು ಬಿದ್ದಿವೆ.
ಎಲ್ ಟ್ಯೂನೆಲ್, ಎಲ್ ಟ್ಯಾಂಬೊ, ಕ್ಯಾಲೊಟೊ, ಪೊಪಯಾನ್, ಗುವಾಚೆನೆ, ಮರ್ಕಡೆರೆಸ್ ಮತ್ತು ಮಿರಾಂಡಾ ಸೇರಿದಂತೆ ಇತರೆಡೆಗಳಲ್ಲಿ ಹಿಂಸಾತ್ಮಕ ಘಟನೆಗಳ ವರದಿಗಳನ್ನು ಅಧಿಕಾರಿಗಳು ಸ್ವೀಕರಿಸಿದ್ದಾರೆ, ಇದನ್ನು ಕೊಲಂಬಿಯಾದ ಮಿಲಿಟರಿ ಪಡೆಗಳ ಜನರಲ್ ಕಮಾಂಡರ್ ಹ್ಯೂಗೋ ಅಲೆಜಾಂಡ್ರೊ ಲೋಪೆಜ್ ಬ್ಯಾರೆಟೊ “ದಾಳಿಗಳ ಅಲೆ” ಎಂದು ಬಣ್ಣಿಸಿದ್ದಾರೆ.
ಕೊಲಂಬಿಯಾ FARC ಭಿನ್ನಮತೀಯರನ್ನು ದೂಷಿಸುತ್ತದೆ
ಕೊಲಂಬಿಯಾದ ಸಶಸ್ತ್ರ ಪಡೆಗಳು ಹೆದ್ದಾರಿ ಬಾಂಬ್ ದಾಳಿಗೆ “ಇವಾನ್ ಮೊರ್ಡಿಸ್ಕೊ” ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವ ಉಗ್ರಗಾಮಿ ನಾಯಕ ನೆಸ್ಟರ್ ಗ್ರೆಗೋರಿಯೊ ವೆರಾ ಫೆರ್ನಾಂಡಿಸ್ ನೇತೃತ್ವದ ನಿಷ್ಕ್ರಿಯ ಎಡಪಂಥೀಯ ಉಗ್ರಗಾಮಿ ಗುಂಪಿನ, ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳ (FARC) ಭಿನ್ನಮತೀಯ ಬಣಗಳ ಮೇಲೆ ಆರೋಪ ಹೊರಿಸಿವೆ.

