HomeEntertainmentಕನ್ನಡ ಚಿತ್ರರಂಗದ ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು 75ನೇ ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು 75ನೇ ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಂಗೀತ ಮತ್ತು ಸಾಹಿತ್ಯದ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ ಮಹಾನ್ ಕಲೆಗಾರ, ನಾದಬ್ರಹ್ಮ ಹಂಸಲೇಖ ಅವರು ಇಂದು ತಮ್ಮ 75ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಕೇವಲ ಸಂಗೀತ ನಿರ್ದೇಶಕರಾಗಿ ಮಾತ್ರವಲ್ಲದೆ ಸಾಹಿತಿ, ಸಂಭಾಷಣೆಗಾರ ಮತ್ತು ಚಿತ್ರಕಥೆಗಾರರಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಗಂಧದ ಗುಡಿಗೆ ಅಪಾರ ಕೊಡುಗೆ ನೀಡಿದ ಹಂಸಲೇಖ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಅಕ್ಕಿಪೇಟೆಯಿಂದ ಗಾಂಧಿನಗರದವರೆಗೆ ನಾದಬ್ರಹ್ಮನ ಪಯಣ

ಬೆಂಗಳೂರಿನ ಅಕ್ಕಿಪೇಟೆ ಬಳಿಯ ತುಳಸಿಕಟ್ಟೆಯಲ್ಲಿ 1951ರ ಜೂನ್ 23 ರಂದು ಜನಿಸಿದ ಗಂಗಾರಾಜು ಅವರೇ ಮುಂದೆ ಚಿತ್ರರಂಗದಲ್ಲಿ ಹಂಸಲೇಖ ಎಂಬ ಹೆಸರಿನಿಂದ ಪ್ರಸಿದ್ಧರಾದರು. ತಂದೆಯ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಬಾಲ್ಯದಿಂದಲೇ ರಂಗಭೂಮಿ ಮತ್ತು ಸಂಗೀತದ ಕಡೆಗೆ ಒಲವಿತ್ತು. ಇವರ ಪ್ರತಿಭೆಯನ್ನು ಗುರುತಿಸಿದ ಗುರುಗಳಾದ ಲಾವಣಿ ನೀಲಕಂಠಪ್ಪ ಅವರು ಗಂಗಾರಾಜು ಎಂಬ ಹೆಸರನ್ನು ಹಂಸಲೇಖ ಎಂದು ಬದಲಾಯಿಸಿದರು. 1973ರ ‘ತ್ರಿವೇಣಿ’ ಚಿತ್ರದ ‘ನೀನಾ ಭಗವಂತ’ ಹಾಡಿನ ಮೂಲಕ ಗೀತರಚನೆಕಾರರಾಗಿ ಚಿತ್ರರಂಗ ಪ್ರವೇಶಿಸಿದ ಇವರು, ಬಳಿಕ ‘ನಾನು ನನ್ನ ಹೆಂಡತಿ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಸಂಭಾಷಣೆ ಮತ್ತು ಗೀತರಚನೆಕಾರರಾಗಿ ಗುರುತಿಸಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರವೀಂದ್ರನ್ ಜೊತೆಗಿನ ಜುಗಲ್‌ಬಂದಿ ಮತ್ತು ಪ್ರೇಮಲೋಕದ ಕ್ರಾಂತಿ

ಹಂಸಲೇಖ ಅವರ ಸಿನಿಮಾ ಬದುಕಿಗೆ ಅತಿ ದೊಡ್ಡ ತಿರುವು ಸಿಕ್ಕಿದ್ದು ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಜೊತೆಗಿನ ಒಡನಾಟದಿಂದ. 1987ರಲ್ಲಿ ತೆರೆಕಂಡ ‘ಪ್ರೇಮಲೋಕ’ ಸಿನಿಮಾ ಕನ್ನಡ ಚಿತ್ರರಂಗದ ಸಂಗೀತದ ದಿಕ್ಕನ್ನೇ ಬದಲಾಯಿಸಿತು. ಈ ಚಿತ್ರದ ಹಾಡುಗಳು ಇಂದಿಗೂ ಯುವ ಪೀಳಿಗೆಯ ನೆಚ್ಚಿನ ಗೀತೆಗಳಾಗಿವೆ. ರವಿಚಂದ್ರನ್ ಮತ್ತು ಹಂಸಲೇಖ ಜೋಡಿ ಸ್ಯಾಂಡಲ್‌ವುಡ್‌ನಲ್ಲಿ ನೂರಾರು ಸೂಪರ್ ಹಿಟ್ ಹಾಡುಗಳನ್ನು ನೀಡುವ ಮೂಲಕ ಹೊಸ ದಾಖಲೆ ಬರೆಯಿತು. ಪಾಪ್, ರಾಕ್, ವೆಸ್ಟರ್ನ್ ಶೈಲಿಯ ಸಂಗೀತವನ್ನು ಕನ್ನಡಕ್ಕೆ ಪರಿಚಯಿಸುವುದರ ಜೊತೆಗೆ ಜಾನಪದ, ಶಾಸ್ತ್ರೀಯ ಮತ್ತು ತತ್ತ್ವಪದಗಳ ಸೊಗಡನ್ನು ಉಳಿಸಿಕೊಂಡು ಅದ್ಭುತ ಸಂಗೀತ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಸಿನಿಮಾದಿಂದ ದೇಶಿ ಮ್ಯೂಸಿಕ್ ಯೂನಿವರ್ಸಿಟಿಯವರೆಗೆ

ಡಾ ರಾಜ್‌ಕುಮಾರ್ ಅಭಿನಯದ ‘ಆಕಸ್ಮಿಕ’ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿನ ಮೂಲಕ ಕನ್ನಡಿಗರಲ್ಲಿ ದೇಶಭಕ್ತಿ ಮತ್ತು ಭಾಷಾಭಿಮಾನ ಮೂಡಿಸಿದ ಹೆಮ್ಮೆ ಇವರದ್ದಾಗಿದೆ. ಕೇವಲ ಸಿನಿಮಾ ಸಂಗೀತಕ್ಕೆ ಸೀಮಿತವಾಗದ ಹಂಸಲೇಖ ಅವರು, ಚನ್ನಪಟ್ಟಣದ ಬಳಿ ‘ದೇಶಿ ಮ್ಯೂಸಿಕ್ ಯೂನಿವರ್ಸಿಟಿ’ ಸ್ಥಾಪಿಸುವ ಮೂಲಕ ಗ್ರಾಮೀಣ ಮತ್ತು ಜಾನಪದ ಕಲೆಗಳಿಗೆ ಹೊಸ ವೇದಿಕೆ ಕಲ್ಪಿಸಿದ್ದಾರೆ. ಇದರೊಂದಿಗೆ ಚಿತ್ರರಂಗಕ್ಕೆ ವಿ ಮನೋಹರ್, ಕೆ ಕಲ್ಯಾಣ್, ವಿ ಹರಿಕೃಷ್ಣ, ರಾಜೇಶ್ ಕೃಷ್ಣನ್, ಅನುರಾಧ ಭಟ್ ಸೇರಿದಂತೆ ನೂರಾರು ಪ್ರತಿಭೆಗಳನ್ನು ಪರಿಚಯಿಸಿ ಬೆಳೆಸಿದ ಹೆಗ್ಗಳಿಕೆ ಇವರದ್ದಾಗಿದೆ.

ಪ್ರಶಸ್ತಿ ಮತ್ತು ಪುರಸ್ಕಾರಗಳ ಗರಿ

ಹಂಸಲೇಖ ಅವರ ಅಪ್ರತಿಮ ಸಾಧನೆಗೆ ಸಾಲು ಸಾಲು ಪ್ರಶಸ್ತಿಗಳು ಒಲಿದು ಬಂದಿವೆ. ‘ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ’ ಚಿತ್ರದ ಅದ್ಭುತ ಸಂಗೀತಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಇವರು, ಆರು ಫಿಲ್ಮ್‌ಫೇರ್ ಪ್ರಶಸ್ತಿಗಳು ಹಾಗೂ ಏಳು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ಕಲಾ ಸೇವೆಯನ್ನು ಗೌರವಿಸಿ ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿದೆ. ಅಲ್ಲದೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಡಾ ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular