ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಖಜಾಂಚಿ ಪಿಎಂ ಸಾಯಿ ಪ್ರಸಾದ್ ಮತ್ತು ಅವರ ಪತ್ನಿಗೆ ಮುಂಬೈನ ತಮ್ಮ ನಿವಾಸದಲ್ಲಿ ಹೌಸ್‌ಫುಲ್ ಡಿನ್ನರ್ ಆತಿಥ್ಯ ನೀಡಿದ್ದಾರೆ. ಸಲ್ಮಾನ್ ಖಾನ್ ಅವರೊಂದಿಗಿನ ಭೇಟಿಯ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸಾಯಿ ಪ್ರಸಾದ್, ನಟನ ಸರಳತೆ ಹಾಗೂ ಆತ್ಮೀಯತೆಯನ್ನು ಬಹಿರಂಗವಾಗಿ ಕೊಂಡಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡ ಸಾಯಿ ಪ್ರಸಾದ್, “ಉತ್ತಮ ಸಂಭಾಷಣೆ ಮತ್ತು ಹೃತ್ಪೂರ್ವಕ ಆತಿಥ್ಯದಿಂದ ಕೂಡಿದ ನೆನಪಿನಲ್ಲಿ ಉಳಿಯುವಂತ ಸಂಜೆ ಇದು. ನನಗೆ ಮತ್ತು ನನ್ನ ಪತ್ನಿಗೆ ನಿಮ್ಮ ಮನೆಯಲ್ಲಿ ಡಿನ್ನರ್ ಆತಿಥ್ಯ ನೀಡಿದ್ದಕ್ಕಾಗಿ ಧನ್ಯವಾದಗಳು ಸಲ್ಮಾನ್ ಖಾನ್ ಭಾಯ್. ನಿಮ್ಮ ಆತ್ಮೀಯತೆ ಮತ್ತು ಸರಳತೆಗೆ ನಿಜಕ್ಕೂ ಮನಸೋತಿದ್ದೇನೆ,” ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಅಕ್ಟೋಬರ್ 5 ರಂದು ಸಹೋದರ ಅರ್ಬಾಝ್ ಖಾನ್ ಮತ್ತು ಶೂರಾ ಖಾನ್ ಅವರ ಪುತ್ರಿ ಸಿಪಾರಾ ಖಾನ್ ಅವರ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲೂ ಸಲ್ಮಾನ್ ಖಾನ್ ಪಾಲ್ಗೊಂಡಿದ್ದರು. ಸದ್ಯ ‘ಬಿಗ್ ಬಾಸ್ 20’ ನಿರೂಪಣೆ ಮಾಡುತ್ತಿರುವ ಸಲ್ಮಾನ್ ಖಾನ್, ಮುಂಬರುವ ದಿನಗಳಲ್ಲಿ ಎರಡು ಪ್ರಮುಖ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2020ರ ಗಲ್ವಾನ್ ಕಣಿವೆ ಸಂಘರ್ಷವನ್ನು ಆಧರಿಸಿದ, ಅಪೂರ್ವ ಲಖಿಯಾ ನಿರ್ದೇಶನದ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದಲ್ಲಿ ಚಿತ್ರಾಂಗದಾ ಸಿಂಗ್ ಜೊತೆ ನಟಿಸುತ್ತಿದ್ದಾರೆ. ಇದಲ್ಲದೆ, ವಂಶಿ ಪೈಡಿಪಲ್ಲಿ ನಿರ್ದೇಶನ ಹಾಗೂ ದಿಲ್ ರಾಜು ನಿರ್ಮಾಣದಲ್ಲಿ ನಟಿ ನಯನತಾರಾ ಜೊತೆ ‘ಮಾನ್‌ಸ್ಟರ್’ ಎಂಬ ಆಕ್ಷನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರವು 2027ರ ಈದ್‌ಗೆ ತೆರೆಕಾಣುವ ಸಾಧ್ಯತೆಯಿದೆ.

