ಶಿವಮೊಗ್ಗ: ಸೆಪ್ಟೆಂಬರ್ 26 ರಿಂದ ಸಕ್ರೆಬೈಲು ಆನೆ ಬಿಡಾರ ಸಾರ್ವಜನಿಕ ಪ್ರವೇಶಕ್ಕೆ ಪುನರಾರಂಭವಾಗಲಿದ್ದು, ಪ್ರವಾಸಿಗರ ಮಾಹಿತಿ, ಜಾಗೃತಿಗೆ ಸೂಚನಾ ಫಲಕ, ಸುರಕ್ಷತಾ ಕ್ರಮ ಅಳವಡಿಸಲಾಗಿದೆ.
ದಿನಾಂಕ 18.04.2026 ರಂದು ದುಬಾರೆ ಆನೆ ಶಿಬಿರದಲ್ಲಿ ನಡೆದ ಆಕಸ್ಮಿಕ ದುರ್ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ, ರಾಜ್ಯದಲ್ಲಿರುವ ಎಲ್ಲಾ ಆನೆ ಶಿಬಿರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಅರಣ್ಯ ಸಚಿವರು ಸೂಚಿಸಿದ್ದರು.
ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡ ನಂತರವಷ್ಟೇ ಶಿಬಿರಗಳನ್ನು ಪುನರಾರಂಭಿಸಲು ನಿರ್ದೇಶಿಸಲಾಗಿತ್ತು.
ಅರಣ್ಯ ಇಲಾಖೆ ನೀಡಿರುವ ಸುರಕ್ಷತಾ ಮಾರ್ಗಸೂಚಿಗಳಂತೆ ಈಗ ಸಕ್ರೆಬೈಲು ಆನೆ ಬಿಡಾರದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ:
ಪ್ರತ್ಯೇಕ ಮಾರ್ಗಗಳ ವ್ಯವಸ್ಥೆ: ಸಾರ್ವಜನಿಕರಿಗೆ ಮತ್ತು ಆನೆಗಳಿಗೆ ಪ್ರತ್ಯೇಕ ಮಾರ್ಗಗಳನ್ನು ಗುರುತಿಸಲಾಗಿದೆ.
ಸಾರ್ವಜನಿಕರು ಮತ್ತು ಆನೆಗಳ ನಡುವೆ ನೇರ ಸಂಪರ್ಕ ಬಾರದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ.
ಸೂಚನಾ ಫಲಕಗಳು: ಪ್ರವಾಸಿಗರ ಮಾಹಿತಿ ಮತ್ತು ಜಾಗೃತಿಗಾಗಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಈ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಲಾಗಿದ್ದು, ದಿನಾಂಕ 26.09.2026 ರಿಂದ ಸಕ್ರೆಬೈಲು ಆನೆ ಬಿಡಾರವನ್ನು ಸಾರ್ವಜನಿಕರ ಪ್ರವೇಶಕ್ಕೆ ಅಧಿಕೃತವಾಗಿ ಪುನರಾರಂಭಿಸಲಾಗುವುದು ಎಂದು ಅರಣ್ಯ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ದೃಢ ಸಂಕಲ್ಪದಿಂದ ಸಾಧನೆ ಮಾಡಲು ಸ್ಪರ್ಧಾರ್ಥಿಗಳಿಗೆ ಕರೆ
ಶಿವಮೊಗ್ಗ: ವೇಟ್ ಲಿಫ್ಟಿಂಗ್ ಕೇವಲ ದೇಹದ ಶಕ್ತಿಯನ್ನಷ್ಟೇ ಅಲ್ಲ, ಮನಸ್ಸಿನ ಏಕಾಗ್ರತೆ ಮತ್ತು ದೃಢ ಸಂಕಲ್ಪವನ್ನು ಪರೀಕ್ಷಿಸುವ ಕ್ರೀಡೆಯಾಗಿದ್ದು, ಸ್ಪರ್ಧಾರ್ಥಿಗಳು ಸ್ಪರ್ಧಾತ್ಮಕ ಮನೋಭಾವದಿಂದ ಸ್ಪರ್ಧಿಸಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗುವಂತೆ ಸಾಧನೆ ಮಾಡುವಂತೆ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಹಾರೈಸಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ವಿಕಾಸ ಪದವಿ ಪೂರ್ವ ಕಾಲೇಜು, ಶಿವಮೊಗ್ಗ ಇವುಗಳ ಸಹಯೋಗದೊಂದಿಗೆ ಗುರುವಾರ ವಿಕಾಸ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2026-27ನೇ ಸಾಲಿನ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ವೇಟ್ ಲಿಫ್ಟಿಂಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸ ಎಷ್ಟು ಮುಖ್ಯವೋ, ಕ್ರೀಡೆಯೂ ಅಷ್ಟೇ ಮುಖ್ಯ. ಶರೀರವನ್ನು ಸದೃಢವಾಗಿಟ್ಟುಕೊಂಡಾಗ ಮಾತ್ರ ಬುದ್ಧಿಯೂ ಚುರುಕಾಗಿ ಕೆಲಸ ಮಾಡಲು ಸಾಧ್ಯ. ಇಂದು ಪಿಯು ಹಂತದಲ್ಲೇ ನೀವು ತೋರಿಸುತ್ತಿರುವ ಈ ಪ್ರತಿಭೆ, ನಾಳೆ ನಮ್ಮ ರಾಜ್ಯ ಹಾಗೂ ದೇಶವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ, ಒಲಿಂಪಿಕ್ಸ್ ನಂತಹ ವೇದಿಕೆಗಳಲ್ಲಿ ಪ್ರತಿನಿಧಿಸುವಂತಾಗಲಿ ಎಂಬುದೇ ನನ್ನ ಆಶಯ ಎಂದರು.
ಮುಂದಿನ ಯುವ ದಸರಾದಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆ:
ನಮ್ಮ ಶಿವಮೊಗ್ಗ ಕ್ರೀಡಾ ಕ್ಷೇತ್ರಕ್ಕೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮುಂದಿನ ಯುವ ದಸರಾದಲ್ಲಿ ನಿಮ್ಮನ್ನು ಕರೆಸಿ ವೇಟ್ ಲಿಫ್ಟಿಂಗ್ ಪಂದ್ಯಾವಳಿ ಮಾಡುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾರ್ಥಿಗಳು ಭಾಗವಹಿಸಬೇಕು. ಹೆಣ್ಣು ಮಕ್ಕಳು ಇಂದಿನ ವೇಟ್ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ಅತ್ಯಂತ ಉತ್ಸುಕತೆಯಿಂದ ಹಾಗೂ ಸ್ಪರ್ಧಾತ್ಮಕವಾಗಿ ಭಾಗವಹಿಸಿದ್ದೀರಿ. ನಿಮ್ಮ ಈ ಮಾನಸಿಕತೆ ಮೆಚ್ಚುವಂತಹದ್ದಾಗಿದ್ದು. ಕ್ರೀಡೆಗೆ ಅಗತ್ಯವಾದ ಎಲ್ಲ ಸಹಕಾರ ನೀಡಲಾಗುವುದು ಎಂದ ಅವರು ವಿಕಾಸ ಸಂಸ್ಥೆ ಸ್ವಾವಲಂಬಿ ಸಂಘಟನೆಯಾಗಿದ್ದು, ಅನೇಕ ಮಕ್ಕಳನ್ನು ಬೆಳೆಸಿದೆ ಎಂದು ಶ್ಲಾಘಿಸಿದರು.
ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ಮಾತನಾಡಿ, ಕಳೆದ ವರ್ಷ ಕೋಲಾರದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಬಾರಿ ಶಿವಮೊಗ್ಗದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ವಿಕಾಸ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 185 ಸ್ಪರ್ಧಾರ್ಥಿಗಳು 72 ಬಾಲಕಿಯರು ಮತ್ತು 113 ಬಾಲಕರು ಭಾಗವಹಿಸಿದ್ದಾರೆ ಎಂದರು.
ಸ್ಪರ್ಧೆಯಲ್ಲಿ ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳಿಗೆ ನನ್ನ ಶುಭ ಹಾರೈಕೆಗಳು. ರಾಜ್ಯ ಮಟ್ಟದಲ್ಲಿ ಆಯ್ಕೆಯಾದವರು ರಾಷ್ಟ್ರೀಯ ನಂತರ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುತ್ತೀರ. ಮುಂದಿನ ಹಂತಕ್ಕೆ ಮತ್ತಷ್ಟು ಸಿದ್ಧರಾಗಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ಭಾರತದ ಪ್ರಖ್ಯಾತ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಏಷ್ಯನ್ ಪಂದ್ಯಾವಳಿಯಲ್ಲಿ 198 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಪಡದು ಸಾಧನೆ ಮಾಡಿದ್ದು ವೇಟ್ ಲಿಫ್ಟರ್ ಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಸ್ಮರಿಸಿದರು.
ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ಇಂದಿನ ಪಂದ್ಯಾವಳಿಯನ್ನು ತೀರ್ಪುಗಾರರು ನಡೆಸಿಕೊಟ್ಟಿದ್ದಾರೆ ಎಂದು ಅಭಿನಂದಿಸಿದರು.
ವಿಕಾಸ ವಿದ್ಯಾ ಸಮಿತಿಯ ಕಾರ್ಯದರ್ಶಿ ಎ.ಜೆ. ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಸಹ ಕಾರ್ಯದರ್ಶಿ ವಿಜಯೇಂದ್ರ ಬಿಂದುರಾವ್ ಸುಳೇಕೇರಿ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಿ.ಎಫ್ ಕುಟ್ರಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಯೋಗೇಶ್ ಎಸ್, ಅನುದಾನಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷ ರಾಜು ಕೆ.ಹೆಚ್, ಕ್ರೀಡಾ ಸಂಯೋಜಕ ನಾಗೇಂದ್ರ ಪ್ರಸಾದ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶಶಿಧರ್, ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ನ ಕಾರ್ಯದರ್ಶಿ ಸಿಪಿಆರ್ ಸುಧೀರ್ ಕುಮಾರ್, ವಿಕಾಸ ಪಿಯು ಕಾಲೇಜು ಪ್ರಾಚಾರ್ಯರಾದ ಮಧುಸೂಚನ್, ಗೋಪಾಲಕೃಷ್ಣ, ಪ್ರವೀಣ್, ಹರೀಶ್, ಉಪನ್ಯಾಸಕರು, ದೈಹಿಕ ಶಿಕ್ಷಣ ಶಿಕ್ಷಕರು, ಸ್ಪಧಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.

