ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಲು ಇದ್ದ ಅಡ್ಡಿ ನಿವಾರಣೆಯಾಗಿದೆ. ಈ ಕುರಿತು ನೈಋತ್ಯ ರೈಲ್ವೆ ಮೈಸೂರು ವಿಭಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ.
ಸಕಲೇಶಪುರ-ಸುಬ್ರಮಣ್ಯ ರೋಡ್ ನಡುವಿನ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ಈ ವಿದ್ಯುದೀಕರಣ ಕಾಮಗಾರಿ 2023ರ ಡಿಸೆಂಬರ್ 1ರಂದು ಆರಂಭಗೊಂಡಿತ್ತು. ರೂ. 93.55 ಕೋಟಿ ವೆಚ್ಚದ ಕಾಮಗಾರಿ ಇದಾಗಿತ್ತು.
55 ಕಿ.ಮೀ. ಸಕಲೇಶಪುರ-ಸುಬ್ರಮಣ್ಯ ರೋಡ್ ನಡುವಿನ ವಿದ್ಯುದೀಕರಣ ಕಾಮಗಾರಿ ಅಷ್ಟು ಸುಲಭವಾಗಿರಲಿಲ್ಲ. ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಹಾದು ಹೋಗುವ ರೈಲು ಮಾರ್ಗ ಇದಾಗಿದೆ. ಸವಾಲಿನ ಕೆಲಸವನ್ನು ಅಗತ್ಯ ಮುನ್ನೆಚ್ಚರಿಕೆ ಜೊತೆ ರೈಲ್ವೆ ಇಲಾಖೆ ಪೂರ್ಣಗೊಳಿಸಿದೆ.
ನೈಋತ್ಯ ರೈಲ್ವೆ ಅಧಿಕಾರಿಗಳು ಮಾರ್ಗದ ವಿದ್ಯುದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ. ಭಾನುವಾರ ವಿದ್ಯುತ್ ಲೋಕೊಮೋಟಿವ್ ಪ್ರಾಯೋಗಿಕ ಸಂಚಾರವನ್ನು ಈ ಮಾರ್ಗದಲ್ಲಿ ನಡೆಸಲಾಗಿದೆ. 57 ಸುರಂಗ, 258 ಸೇತುವೆ, 108 ತೀಕ್ಷ್ಮವಾದ ತಿರುವುಗಳು ಇರುವ ಕಾರಣ ಮತ್ತು ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಭೂ ಕುಸಿತ ಆಗುವ ಕಾರಣ ವಿದ್ಯುದೀಕರಣ ಕಾಮಗಾರಿ ಸವಾಲಿನ ಕೆಲಸವಾಗಿತ್ತು.
5 ಸ್ವಿಚ್ಚಿಂಗ್ ಸ್ಟೇಷನ್ ನಿರ್ಮಾಣ ಮತ್ತು ಸಂಪೂರ್ಣ ಮಾರ್ಗದ ವಿದ್ಯುದೀಕರಣ ಕಾಮಗಾರಿ ಮುಕ್ತಾಯಗೊಂಡಿದೆ. ಈ ಮಾರ್ಗದಲ್ಲಿ ರೈಲುಗಳು ಗರಿಷ್ಠ 120 ಕಿ.ಮೀ. ವೇಗದಲ್ಲಿ ಸಾಗುವಂತೆ ವಿದ್ಯುದೀಕರಣ ಮಾಡಲಾಗಿದೆ. ಎರಡು ವಿದ್ಯುತ್ ಕಂಬಗಳ ನಡುವಿನ ಗರಿಷ್ಠ ಅಂತರ 67.5 ಮೀಟರ್ ಆಗಿದೆ.
ವಂದೇ ಭಾರತ್ ಸಂಚಾರಕ್ಕೆ ಅನುಕೂಲ: ಬೆಂಗಳೂರು ಕರಾವಳಿ ನಡುವೆ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸಬೇಕು ಎಂಬ ಬೇಡಿಕೆ ಇದೆ. ಆದರೆ ರೈಲು ಮಾರ್ಗದ ವಿದ್ಯುದೀಕರಣ ಮುಕ್ತಾಯಗೊಳ್ಳದ ಕಾರಣ ವಂದೇ ಭಾರತ್ ರೈಲು ಸಂಚಾರಕ್ಕೆ ಅಡ್ಡಿಯಾಗಿತ್ತು.
ಈಗ 55 ಕಿ.ಮೀ. ಸಕಲೇಶಪುರ-ಸುಬ್ರಮಣ್ಯ ರೋಡ್ ನಡುವಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಅನುಕೂಲವಾಗಿದೆ. ಶೀಘ್ರವೇ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸುವ ಕುರಿತು ಇಲಾಖೆ ತೀರ್ಮಾನ ಕೈಗೊಳ್ಳಲಿದೆ.
ಮಂಗಳೂರು ನಗರಕ್ಕೆ ಎರಡು ವಂದೇ ಭಾರತ್ ರೈಲು ಸಂಪರ್ಕವಿದೆ. ತಿರುವನಂತಪುರಂ-ಮಂಗಳೂರು, ಮಂಗಳೂರು-ಮಡಗಾಂವ್ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರವವನ್ನು ನಡೆಸುತ್ತಿದೆ. ವಂದೇ ಭಾರತ್ ರೈಲು ಸಂಚಾರಕ್ಕೆ ವಿದ್ಯುತ್ ಮಾರ್ಗ ಅಗತ್ಯವಿದೆ. ವಿದ್ಯುದೀಕರಣ ಕಾಮಗಾರಿಯ ಕಾರಣಕ್ಕೆ ಇಷ್ಟು ದಿನ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಿರಲಿಲ್ಲ.
ಮಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ರೈಲನ್ನು ಬೆಂಗಳೂರು ತನಕ ವಿಸ್ತರಣೆ ಮಾಡಬೇಕು. ಬೆಂಗಳೂರು-ಮಡಗಾಂವ್ ವಯಾ ಕಾರವಾರ ಹೊಸ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂಬ ಬೇಡಿಕೆ ಇದೆ. ಬಹಳ ವರ್ಷದ ಬೇಡಿಕೆಯನ್ನು ಈಡೇರಿಸಲು ಈಗ ರೈಲ್ವೆ ಇಲಾಖೆಗೂ ಸಹ ಅನುಕೂಲವಾಗಲಿದೆ.
ರೈಲ್ವೆ ಇಲಾಖೆ ಮಾಹಿತಿ: ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡ ಕುರಿತು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮೈಸೂರು ವಿಭಾಗದ ಘಾಟ್ ಸೆಕ್ಷನ್‌ನಲ್ಲಿ ಸಂಪೂರ್ಣ ವಿದ್ಯುದ್ದೀಕರಣ ಸಾಧನೆ ಎಂದು ಹೇಳಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು 28.12.2025 ರಂದು ಯಶಸ್ವಿಯಾಗಿ ವಿದ್ಯುತ್ ಲೋಕೋಮೋಟಿವ್ ಪರೀಕ್ಷೆಯನ್ನು (Electric Locomotive Trial) ನಡೆಸುವ ಮೂಲಕ ಘಾಟ್ ಸೆಕ್ಷನ್‌ನಲ್ಲಿ ಸಂಪೂರ್ಣ ವಿದ್ಯುದ್ದೀಕರಣವನ್ನು ಸಾಧಿಸಿದೆ. ಇದು ಈ ಭಾಗದ ರೈಲ್ವೆ ಮೂಲಸೌಕರ್ಯ ಬಲಪಡಿಸುವಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದೆ.
ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ 55 ಕಿ.ಮೀ ಉದ್ದದ ಈ ಘಾಟ್ ಸೆಕ್ಷನ್ ಭಾರತೀಯ ರೈಲ್ವೆಯ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ಒಂದಾಗಿದೆ. ಈ ಮಾರ್ಗವು ಇವುಗಳನ್ನು ಒಳಗೊಂಡಿದೆ:
- 1-ರಲ್ಲಿ-50 ರಷ್ಟು ಕಡಿದಾದ ಇಳಿಜಾರು (Gradient).
- 57 ಸುರಂಗಗಳು ಮತ್ತು 258 ಸೇತುವೆಗಳು.
- 108 ಅತ್ಯಂತ ಕಡಿದಾದ ತಿರುವುಗಳು.
- ಭೂಕುಸಿತದ ಹೆಚ್ಚಿನ ಅಪಾಯವಿರುವ ಪ್ರದೇಶ.
ಈ ಕಾರ್ಯವು 01.12.2023 ರಂದು ಪ್ರಾರಂಭವಾಯಿತು ಮತ್ತು ರೂ. 93.55 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಮಾರ್ಗದುದ್ದಕ್ಕೂ 5 ಸ್ವಿಚಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲಾಗಿದೆ. ಓವರ್‌ಹೆಡ್ ಎಕ್ವಿಪ್‌ಮೆಂಟ್ (OHE) ಅನ್ನು ಗರಿಷ್ಠ 120 ಕಿ.ಮೀ ವೇಗಕ್ಕೆ ವಿನ್ಯಾಸಗೊಳಿಸಲಾಗಿದೆ.
57 ಸುರಂಗಗಳಲ್ಲಿ 419 ಮುಖ್ಯ ಬ್ರಾಕೆಟ್‌ಗಳನ್ನು ಅಳವಡಿಸಲಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸುರಂಗಗಳ ಭೂವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದ್ದು, ಬೋಲ್ಟ್‌ಗಳ ಭದ್ರತೆಯನ್ನು ಪರೀಕ್ಷಿಸಲು ಪ್ರತಿ ಸ್ಥಳದಲ್ಲೂ ‘ಪುಲ್-ಔಟ್’ ಪರೀಕ್ಷೆಗಳನ್ನು ಮಾಡಲಾಗಿದೆ.
ವಿಪರೀತ ಮಳೆ, ಆಗಾಗ್ಗೆ ಸಂಭವಿಸುವ ಭೂಕುಸಿತಗಳು ಮತ್ತು ಮಣ್ಣಿನ ಸವೆತದ ನಡುವೆಯೂ ಈ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ದುರ್ಗಮ ಪ್ರದೇಶಗಳಿಗೆ ಸಾಮಗ್ರಿಗಳನ್ನು ತಲುಪಿಸಲು ರೈಲು ಮಾರ್ಗವನ್ನೇ ಅವಲಂಬಿಸಬೇಕಾಗಿತ್ತು. ಅಲ್ಲದೆ, ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಸುರಕ್ಷತಾ ಆಯುಕ್ತರು (CRS) ವಿಧಿಸಿದ್ದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಲೇ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
ಈ ವಿದ್ಯುದ್ದೀಕರಣದಿಂದಾಗಿ ಈಗ ಘಾಟ್ ಸೆಕ್ಷನ್‌ನಲ್ಲಿ ಪರಿಸರ ಸ್ನೇಹಿ, ಇಂಧನ ಉಳಿತಾಯದ ಮತ್ತು ಕಡಿಮೆ ವೆಚ್ಚದ ರೈಲು ಕಾರ್ಯಾಚರಣೆಗೆ ಹಾದಿ ಸುಗಮವಾಗಿದೆ. ಇದು ಭಾರತೀಯ ರೈಲ್ವೆಯ 100% ವಿದ್ಯುದ್ದೀಕರಣದ ಗುರಿಯತ್ತ ಇಟ್ಟ ದೊಡ್ಡ ಹೆಜ್ಜೆಯಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

