ಭಾರತೀಯ ರೈಲ್ವೇ ಇಲಾಖೆಯು ನೈಜ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಐಆರ್‌ಸಿಟಿಸಿ (IRCTC) ಟಿಕೆಟ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇಂದಿನಿಂದ (ಡಿಸೆಂಬರ್ 29, ಸೋಮವಾರ) ಆಧಾರ್ ಪರಿಶೀಲನೆ (Aadhaar Verification) ಪೂರ್ಣಗೊಳಿಸಿರುವ ಬಳಕೆದಾರರಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ವಿನಾಯಿತಿ ನೀಡಲಾಗಿದೆ.
ಆಧಾರ್ ಬಳಕೆದಾರರಿಗೆ ಹೆಚ್ಚಿನ ಸಮಯ ಹಿಂದಿನ ನಿಯಮದಂತೆ, ಸಾಮಾನ್ಯ ಮೀಸಲಾತಿ ಪ್ರಾರಂಭವಾದ ಮೊದಲ 15 ನಿಮಿಷಗಳು ಮಾತ್ರ ಆಧಾರ್ ಕಡ್ಡಾಯವಾಗಿತ್ತು. ನಂತರ ಇದನ್ನು ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ವಿಸ್ತರಿಸಲಾಗಿತ್ತು. ಆದರೆ, ಹೊಸ ಆದೇಶದ ಪ್ರಕಾರ ಇಂದಿನಿಂದ (ಡಿಸೆಂಬರ್ 29) ಆಧಾರ್ ದೃಢೀಕೃತ ಖಾತೆ ಹೊಂದಿರುವವರು ಮಧ್ಯಾಹ್ನ 12 ಗಂಟೆಯವರೆಗೆ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ರೈಲ್ವೇ ಮಂಡಳಿಯ ಯೋಜನೆಯಂತೆ, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈ ಸಮಯವನ್ನು ಮಧ್ಯರಾತ್ರಿ 12 ಗಂಟೆಯವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.
ನಿಯಮ ಬದಲಾವಣೆಯ ಉದ್ದೇಶವೇನು? ಟಿಕೆಟ್ ದಲ್ಲಾಳಿಗಳ ಹಾವಳಿಯನ್ನು ತಡೆಗಟ್ಟಿ, ಸಾಮಾನ್ಯ ಜನರಿಗೆ ಸುಲಭವಾಗಿ ಟಿಕೆಟ್ ಸಿಗುವಂತೆ ಮಾಡುವುದು ಈ ಬದಲಾವಣೆಯ ಮುಖ್ಯ ಉದ್ದೇಶವಾಗಿದೆ. ಆಧಾರ್ ಲಿಂಕ್ ಆಗಿರುವ ಖಾತೆಗಳ ಮೂಲಕ ಬುಕಿಂಗ್ ಮಾಡುವುದರಿಂದ ಟಿಕೆಟ್ ಕಾಳದಂಧೆಗೆ ಬ್ರೇಕ್ ಬೀಳಲಿದೆ. ಆದರೆ, ರೈಲ್ವೇ ನಿಲ್ದಾಣಗಳ ಪಿಆರ್‌ಎಸ್ (PRS) ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ರೈಲ್ವೇ ಚಾರ್ಟ್ ಸಿದ್ಧಪಡಿಸುವ ಸಮಯದಲ್ಲಿ ಬದಲಾವಣೆ ರೈಲು ಹೊರಡುವ ಮುನ್ನ ಸಿದ್ಧಪಡಿಸುವ ಚಾರ್ಟ್ ಸಮಯದ ಬಗ್ಗೆಯೂ ರೈಲ್ವೇ ಇಲಾಖೆ ಹೊಸ ಮಾರ್ಗಸೂಚಿ ನೀಡಿದೆ:
- ಬೆಳಿಗ್ಗೆ 05:01 ರಿಂದ ಮಧ್ಯಾಹ್ನ 14:00 ರವರೆಗೆ ಹೊರಡುವ ರೈಲುಗಳ ಮೊದಲ ಚಾರ್ಟ್ ಅನ್ನು ಹಿಂದಿನ ದಿನ ರಾತ್ರಿ 8 ಗಂಟೆಯೊಳಗೆ ಸಿದ್ಧಪಡಿಸಲಾಗುತ್ತದೆ.
- ಮಧ್ಯಾಹ್ನ 14:01 ರಿಂದ ರಾತ್ರಿ 23:59 ರವರೆಗೆ ಮತ್ತು ಮಧ್ಯರಾತ್ರಿ 00:00 ರಿಂದ ಬೆಳಿಗ್ಗೆ 05:00 ರವರೆಗೆ ಹೊರಡುವ ರೈಲುಗಳ ಮೊದಲ ಚಾರ್ಟ್ ಅನ್ನು ಕನಿಷ್ಠ 10 ಗಂಟೆಗಳ ಮುಂಚಿತವಾಗಿ ಸಿದ್ಧಪಡಿಸಲಾಗುತ್ತದೆ.

