ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧ ನಟಿ ಹಾಗೂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಸಾಹಿಬಾ ಬಾಲಿ ಮತ್ತು ಖ್ಯಾತ ನಟಿ ತಮನ್ನಾ ಭಾಟಿಯಾ ಅವರ ನಡುವೆ ಸಿದ್ಧಾಂತದ ವಿಷಯವಾಗಿ ತೀವ್ರ ವಿವಾದ ಹಾಗೂ ಮಾತಿನ ಚಕಮಕಿ ನಡೆಯುತ್ತಿದೆ ಎಂಬ ಸುದ್ದಿಗೆ ಕೊನೆಗೂ ತೆರೆಬಿದ್ದಿದೆ. ಮಹಿಳೆಯರು, ಧರ್ಮ ಹಾಗೂ ದೇಶದಲ್ಲಿ ನಡೆಯುವ ಪ್ರತಿಭಟನೆಗಳ ಕುರಿತು ಸಾಹಿಬಾ ಬಾಲಿ ಅವರು ಹಂಚಿಕೊಂಡಿದ್ದರೆನ್ನಲಾದ ಅನಿಸಿಕೆಯನ್ನು ನಟಿ ತಮನ್ನಾ ಭಾಟಿಯಾ ಅವರು ಬಹಿರಂಗವಾಗಿ ವಿರೋಧಿಸಿದ್ದಾರೆ ಎಂಬ ಸುದ್ದಿ ಇಂಟರ್ನೆಟ್ನಲ್ಲಿ ಹರಿದಾಡುತ್ತಿತ್ತು. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸ್ಕ್ರೀನ್ಶಾಟ್ ಸಂಪೂರ್ಣವಾಗಿ ನಕಲಿ, ಕಲ್ಪಿತ ಹಾಗೂ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ನಟಿ ಸಾಹಿಬಾ ಬಾಲಿ ಸ್ಪಷ್ಟಪಡಿಸಿದ್ದಾರೆ.
ರೆಡ್ಡಿಟ್ ಹಾಗೂ ಇನ್ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದ ಆ ವಿವಾದಾತ್ಮಕ ಸ್ಕ್ರೀನ್ಶಾಟ್ನಲ್ಲಿ, ಸಾಹಿಬಾ ಬಾಲಿ ಅವರ ಪೋಸ್ಟ್ ಒಂದಕ್ಕೆ ತಮನ್ನಾ ಭಾಟಿಯಾ ಅವರು ನೇರವಾಗಿ ಕಮೆಂಟ್ ಮಾಡಿ, ಧಾರ್ಮಿಕ ವಿಷಯಗಳನ್ನು ಹಾಗೂ ದೇವತೆಗಳನ್ನು ಪ್ರಚಲಿತ ಸಾಮಾಜಿಕ ವಿಚಾರಗಳಲ್ಲಿ ತರುವುದು ಸರಿಯಲ್ಲ ಎಂದು ಪ್ರಶ್ನಿಸಿದಂತೆ ತೋರಿಸಲಾಗಿತ್ತು. ಆದರೆ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯಿಸಿರುವ ಸಾಹಿಬಾ ಬಾಲಿ, ಈ ಚಿತ್ರವನ್ನು ಗ್ರಾಫಿಕ್ಸ್ ಮೂಲಕ ಎಡಿಟ್ ಮಾಡಲಾಗಿದೆ ಅಥವಾ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾಗಿದೆ ಎಂದು ತಿಳಿಸಿದ್ದಾರೆ. ಕೇವಲ ಕ್ಲಿಕ್ಬೈಟ್ ಹಾಗೂ ವೀಕ್ಷಕರ ಗಮನ ಸೆಳೆಯಲು ಸೆಲೆಬ್ರಿಟಿಗಳ ಹೆಸರು ಮತ್ತು ಮುಖಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಜಾಲತಾಣಗಳಲ್ಲಿ ತಮಗೆ ಬರುತ್ತಿರುವ ಸಾಲು ಸಾಲು ನಿಂದನೆಗಳು, ಬೆದರಿಕೆಗಳು ಹಾಗೂ ವ್ಯಕ್ತಿತ್ವ ಹರಣದ ಪ್ರಯತ್ನಗಳ ಬಗ್ಗೆಯೂ ಸಾಹಿಬಾ ಬಾಲಿ ಸುದೀರ್ಘವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಯಾವುದೇ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೂ ಅಥವಾ ಮೌನವಾಗಿದ್ದರೂ ಸೈಬರ್ ದಾಳಿಗೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಲೈಲಾ ಮಜ್ನು’, ‘ಅಮರ್ ಸಿಂಗ್ ಚಮ್ಕೀಲಾ’ ಮುಂತಾದ ಚಿತ್ರಗಳಲ್ಲಿ ನಟಿಸಿ ಸೌಂಡ್ ಮಾಡಿರುವ ಅವರು, ಪ್ರತಿಯೊಬ್ಬ ನಾಗರಿಕನಿಗೂ ತಮ್ಮದೇ ಆದ ನಂಬಿಕೆಗಳು ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ ಮತ್ತು ಆನ್ಲೈನ್ ದ್ವೇಷಕ್ಕಿಂತ ಕರುಣೆ ಹಾಗೂ ಸೌಹಾರ್ದತೆ ಮುಖ್ಯ ಎಂದು ಸಂದೇಶ ನೀಡಿದ್ದಾರೆ.

