ಬೆಂಗಳೂರು : ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಚಿನ್ನ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಐದು ಕಡೆ ದಾಳಿ ನಡೆಸಿದ್ದಾರೆ.
ಹೌದು. ಬೆಳ್ಳಂ ಬೆಳಗ್ಗೆ ಬೆಂಗಳೂರು. ಬಳ್ಳಾರಿ , ತಿರುವನಂತಪುರ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಶ್ರೀರಾಮಪುರ ಅಯ್ಯಪ್ಪ ದೇವಸ್ಥಾನ ಮತ್ತು ಟ್ರಸ್ಟಿ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ. ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಅಂಗಡಿಗಳ ಮೇಲೂ ಇಡಿ ದಾಳಿ ನಡೆಸಿದೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸುಮಾರು 4.5 ಕೆಜಿ ಚಿನ್ನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ದ್ವಾರಪಾಲಕರ ವಿಗ್ರಹಗಳ ಚಿನ್ನದ ಲೇಪನ ದುರುಪಯೋಗಪಡಿಸಿಕೊಂಡು, ಚಿನ್ನ ಕಳವು ಮಾಡಲಾಗಿದೆ ಎಂದು ಕೇರಳ ಹೈಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ದೇವಾಲಯದ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಚಿನ್ನದ ವ್ಯಾಪಾರಿಗಳು ಸೇರಿ ಹಲವರನ್ನು ಬಂಧಿಸಲಾಗಿದೆ, ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಕೂಡ ಪ್ರಮುಖ ಆರೋಪಿ. ಪ್ರಕರಣದ ತನಿಖೆ ಕರ್ನಾಟಕದವರೆಗೂ ತಲುಪಿದ್ದು, ಚಿನ್ನದ ಲೇಪನ ಕಾರ್ಯದ ವೇಳೆ ಚಿನ್ನ ನಾಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ. SIT ತನಿಖೆಯಲ್ಲಿ 4.5 ಕೆಜಿ ಚಿನ್ನ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಘಟನೆ ಸಂಬಂಧ ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಮತ್ತು ಪಂಕಜ್ ಭಂಡಾರಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

