ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ಪ್ರಕರಣ ದಿನಕ್ಕೊಂದು ಕುತೂಹಲ ಕೆರಳಿಸುತ್ತಿದೆ. ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಎಸ್.ಟಿ. ಸೋಮಶೇಖರ್ ಅವರು ಅಡ್ಡಮತದಾನ ವಿಚಾರವಾಗಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕರ ಆರ್. ಅಶೋಕ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯೇಂದ್ರ ಕಡೆಯ ಅಭ್ಯರ್ಥಿ ಸೋಲಿಸಬೇಕೆಂದು ಆರ್.ಅಶೋಕ್, ಅಶೋಕ್ ಕಡೆ ಅಭ್ಯರ್ಥಿ ಸೋಲಿಸಲು ಬಿ.ವೈ.ವಿಜಯೇಂದ್ರ ಅಡ್ಡ ಮತದಾನ ಮಾಡಿಸಿರಬೇಕು. ಹೀಗಾಗಿ ಇವರಿಬ್ಬರು ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಿದರೆ ಸಾಕು ಎಂದು ಹೇಳುವ ಮೂಲಕ ಎಸ್.ಟಿ.ಸೋಮಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸೋಮಶೇಖರ್, ನಮ್ಮನ್ನು ಉಚ್ಛಾಟನೆ ಮಾಡಿ ಗೂಬೆ ಕೂರಿಸಲು ಹೊರಟಿದ್ದಾರೆ. ಇವರಿಬ್ರೂ 63 ಶಾಸಕರನ್ನು ಕರೆದು ಮಾತಾಡಿ ಬಿಗಿ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಶಾಸಕರಿಗೂ ಟ್ರೈನಿಂಗ್ ಕೊಟ್ಟಿದ್ದರು. ಏನಾಗುತ್ತೆ, ಏನಾಗಲ್ಲ ಅಂತಾ ಅವರು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರು. ಆದ್ರೆ ಬಿಜೆಪಿಯವರು ಶಾಸಕರಿಗೆ ವಿಪ್ ಕೂಡ ಜಾರಿ ಮಾಡಲಿಲ್ಲ. ಬೆಳಗ್ಗೆ 9ಕ್ಕೆ ಚುನಾವಣೆ ಇದೆ ಅಂದಾಗ 8 ಗಂಟೆಗೆ ಹೇಳಿದ್ರು. ಹೀಗಾಗಿ ಬಿಜೆಪಿಯವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ ಎಂದು ಹೇಳಿದ್ದಾರೆ.
ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ರಾಜೀನಾಮೆ ನೀಡಲಿ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೂ ಪ್ರತಿಕ್ರಿಯಿಸಿರುವ ಎಸ್.ಟಿ.ಸೋಮಶೇಖರ್, ಶೋಭಾ ಕರಂದ್ಲಾಜೆಗೆ ಅಶೋಕ್ ಕಂಡ್ರೆ ಆಗಲ್ಲ, ವಿಜಯೇಂದ್ರ ಕಂಡ್ರೂ ಆಗಲ್ಲ. ಬಿಜೆಪಿಯಲ್ಲಿ ಇಷ್ಟೆಲ್ಲ ಅಲ್ಲೋಲ ಕಲ್ಲೋಲಕ್ಕೆ ಅವರೇ ಕಾರಣ. ಮೊದಲು ಈ ಕರಂದ್ಲಾಜೆ ಅವರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ನಿಲ್ಲಿಸಲಿ. ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದಾರೆ, ನಾವು ಅವರಿಗೆ ಮತ ಹಾಕಿದ್ದೇವೆ. ಈ ಬಗ್ಗೆ ನಾವು ಓಪನ್ ಆಗಿಯೇ ಹೇಳಿದ್ದೇವೆ ಎಂದಿದ್ದಾರೆ.
ಬಿಜೆಪಿಯಲ್ಲಿ ಅಡ್ಡ ಮತ ಹಾಕಿದವರು ಯಾರೆಂದು ಕಂಡು ಹಿಡಿಯಲಿ. ಅದುಬಿಟ್ಟು ನನ್ನ ಕೆಣಕೋದು ಬೇಡ. ಕೆಣಕಿದರೆ ನಾವೂ ತಕ್ಕ ಉತ್ತರ ಕೊಡ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನ ವಿಚಾರವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಇತ್ತ ಪಕ್ಷಕ್ಕೆ ದ್ರೋಹ ಬಗೆದವರು ಯಾರೆಂಬ ಬಗ್ಗೆ ಪತ್ತೆ ಹಚ್ಚಲು ರಾಜ್ಯ ಬಿಜೆಪಿ ಅಧ್ಯಕ್ಷರ ಆದೇಶದ ಮೇರೆಗೆ ಸಿ.ಟಿ. ರವಿ ನೇತೃತ್ವದ ಸತ್ಯಶೋಧನಾ ಸಮಿತಿಯೂ ರಚನೆಯಾಗಿದ್ದು, ಮಾಹಿತಿ ಕಲೆಹಾಕುತ್ತಿದೆ. ಈ ನಡುವೆ ಶಾಸಕ ಎಸ್.ಟಿ.ಸೋಮಶೇಖರ್ ನೀಡಿರುವ ಈ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

